ತಿ.ನರಸೀಪುರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಭಾನುವಾರ ಜಾಗತಿಕ ಲಿಂಗಾಯತ ಮಹಾಸಭಾದಿಂದ ಆಯೋಜಿಸಿದ್ದ ಲಿಂಗಾಯತ ಧರ್ಮ ಜಾಗೃತಿ ಸಮಾವೇಶದಲ್ಲಿ ಎಂ.ಎಲ್.ಹುಂಡಿ ಮಠದ ಗೌರಿಶಂಕರ ಸ್ವಾಮೀಜಿ ಮಾತನಾಡಿದರು. ಶಿವಬಸವ ಸ್ವಾಮೀಜಿ, ಮೈಸೂರು ಹೊಸಮಠದ ಕಿರಿಯ ಸ್ವಾಮೀಜಿ, ಎಂ.ರವಿ ತೊಟ್ಟವಾಡಿ, ಮಹದೇವಪ್ಪ, ಲಿಂಗರಾಜಪ್ಪ, ಗುರುಮೂರ್ತಿ ಇತರರು ಇದ್ದರು.
ತಿ.ನರಸೀಪುರ: ಸ್ವಾತಂತ್ರ್ಯ ಪೂರ್ವದಿಂದಲೂ ಲಿಂಗಾಯತರು ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಸಮುದಾಯದಲ್ಲಿ ಒಮ್ಮತ ಮೂಡದ್ದರಿಂದ ಹೋರಾಟದ ಹಾದಿಯಲ್ಲೇ ಇನ್ನೂ ಇದ್ದೇವೆ ಎಂದು ಮದ್ಗಾರ ಲಿಂಗಯ್ಯನಹುಂಡಿ ಗ್ರಾಮದ ಅಲ್ಲಮ ಪ್ರಭು ಶೂನ್ಯಪೀಠ ಮಠದ ಗೌರಿಶಂಕರ ಸ್ವಾಮೀಜಿ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಭಾನುವಾರ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕದಿಂದ ಆಯೋಜಿಸಿದ್ದ ಲಿಂಗಾಯತ ಧರ್ಮ ಜಾಗೃತಿ ಸಮಾವೇಶ ಸಮಾರಂಭದಲ್ಲಿ ಮಾತನಾಡಿದ ಅವರು, ಶೇ.80ರಷ್ಟು ಜನರು ಶರಣ ಹಾಗೂ ಬಸವ ತತ್ವಗಳನ್ನು ನಂಬಿದ್ದಾರೆ. ಅದರೆ ಶೇ.20 ರಷ್ಟು ಮಂದಿ ಬಸವ ಚಿಂತನೆಗಳನ್ನು ಅಪಪ್ರಚಾರ ಮಾಡುವ ಮೂಲಕ ಲಿಂಗಾಯತ ಧರ್ಮದವರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.
ಹನ್ನೆರಡನೇ ಶತಮಾನದಲ್ಲೇ ಬಸವಣ್ಣನವರು ಹೆಣ್ಣು, ಗಂಡು ಎಂಬ ಭೇದವಿಲ್ಲದೆ ಎಲ್ಲ ವರ್ಗದವರು ಒಂದೇ ಎಂಬ ಸಮಾನತೆಗೆ ಹೋರಾಟ ಮಾಡಿದ್ದರು. ಸ್ವಾತಂತ್ರೃ ನಂತರದ ದಿನಗಳಲ್ಲಿ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಗೆ ಶರಣರ ಸಮಾನತೆಯ ಆಶಯದಂತೆ ಡಾ.ಅಂಬೇಡ್ಕರ್ ಸಂವಿಧಾನ ರಚಿಸಿದರು ಎಂದರು.
ಪಾಂಡಪುರ ತಾಲೂಕು ಚಿನಕುರಳಿ ಶ್ರೀ ರಾಮಯೋಗೀಶ್ವರ ಬೇಬಿ ಬೆಟ್ಟದ ಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಮಠಗಳು ಬಡವರಿಗೆ ವಿದ್ಯದಾನ, ಅನ್ನದಾನ ಮಾಡುವ ಮೂಲಕ ದೇಶಕ್ಕೆ ಬಸವಣ್ಣ ತತ್ವ ಸಿದ್ಧಾಂತಗಳನ್ನು ನೀಡುತ್ತಿವೆ. ಬಸವಣ್ಣನವರ ಅನುಯಾಯಿಗಳು ಹೊರದೇಶಗಳಲ್ಲಿ ಬಸವಣ್ಣನವರ ಪುತ್ಥಳಿಯನ್ನು ಸ್ಥಾಪಿಸಿ ತತ್ವಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದರು.
ಮೈಸೂರು ಹೊಸಮಠದ ಕಿರಿಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ತೊಟ್ಟ ವಾಡಿ ಎಂ.ರವಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಶರಣ ಮಹದೇವಪ್ಪ, ಬಸವ ತತ್ವ ಪ್ರಚಾರಕ, ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಚೌಹಳ್ಳಿ ಲಿಂಗರಾಜಪ್ಪ, ಅಕ್ಕಮಹಾದೇವಿ ಸಹಕಾರ ಸಂಘದ ಅಧ್ಯಕ್ಷ ಕೆ.ಜಿ ಶಿವಪ್ರಸಾದ್, ಪುರಸಭೆ ಸದಸ್ಯೆ ರೂಪಶ್ರೀ ಪರಮೇಶ್, ಮುಖಂಡರಾದ ಸೀಹಳ್ಳಿ ಗುರುಮೂರ್ತಿ, ಕುರುಬೂರು ಭೃಂಗೇಶ್, ತುಂಬಲ ಟಿ.ಎನ್.ನಾಗರಾಜು, ಎಂ.ಮಹೇಶ್ ಕುಮಾರ್, ಜಿಲ್ಲಾ ನಿರ್ದೇಶಕ ದೊಡ್ಡನಹುಂಡಿ ಜಿ.ನಂಜುಡಸ್ವಾಮಿ, ಡಿ.ಎಲ್. ಮಹದೇವಪ್ಪ, ಹೆಳವರಹುಂಡಿ ನಟರಾಜು, ಹಿರಿಯೂರು ನವೀನ್, ಮಾಡ್ರಹಳ್ಳಿ ಶಿವಮೂರ್ತಿ, ಮಹೇಶ್, ವಿರೂಪಾಕ್ಷ, ಸೋಮಶೇಖರ್, ಎಂ.ಮಹೇಶ್, ನಾಗರಾಜು, ಎಂ.ನಂಜುಂಡಸ್ವಾಮಿ, ಕೆ.ಎಸ್.ಮಹದೇವಪ್ಪ ಇದ್ದರು.