ಸಾಂದರ್ಭಿಕ ಚಿತ್ರ 
ಮೈಸೂರು

ಸರಗೂರು ಅಂಚೆ ಕಚೇರಿಯಲ್ಲಿ 1.3 ಕೋಟಿ ರೂ. ದುರುಪಯೋಗ : ಇಬ್ಬರು ಸಿಬ್ಬಂದಿ ಸಿಬಿಐ ವಶಕ್ಕೆ

ಮೈಸೂರು: ಗ್ರಾಹಕರ 1.3 ಕೋಟಿ ರೂ. ಹಣ ದುರುಪಯೋಗ ಪಡಿಸಿಕೊಂಡ ಆರೋಪದ ಮೇರೆಗೆ ಸರಗೂರು ಅಂಚೆ ಕಚೇರಿಯಲ್ಲಿ ಈ ಹಿಂದೆ ಅಂಚೆ ಸಹಾಯಕರಾಗಿದ್ದ ದೀಪಕ್ ಹಾಗೂ ಪೋಸ್ಟ್‌ಮ್ಯಾನ್ ಆಗಿದ್ದ ಕಾರಯ್ಯ ಅವರನ್ನು ಸಿಬಿಐ ಬುಧವಾರ ಬಂಧಿಸಿದೆ.
ಇವರಿಬ್ಬರು ಸೇರಿಕೊಂಡು 44 ಗ್ರಾಹಕರ 1.3 ಕೋಟಿ ರೂ.ಗಳನ್ನು ದುರುಪಯೋಗ ಪಡಿಸಿಕೊಂಡಿದ್ದರು. ಗ್ರಾಹಕರ ಅಂಚೆ ಉಳಿತಾಯ ಖಾತೆಗಳ ಲಾಗಿನ್ ಮತ್ತು ಪಾಸ್‌ವರ್ಡ್‌ಗಳನ್ನು ಬಳಕೆ ಮಾಡಿಕೊಂಡು ಆ ಹಣವನ್ನು ತಮ್ಮ ಹಾಗೂ ಸಂಬಂಧಿಕರ ಖಾತೆಗಳಿಗೆ ವರ್ಗಾಣೆ ಮಾಡಿಕೊಂಡಿದ್ದರು. 2022 ರಿಂದ 2025ರ ಅವಧಿಯಲ್ಲಿ ಈ ಅಕ್ರಮ ನಡೆದಿತ್ತು.
2025ರ ಮೇ ತಿಂಗಳಿನಲ್ಲಿ ಅಂಚೆ ಸಹಾಯಕ ದೀಪಕ್ ಕಚೇರಿಗೆ ರಜೆ ಹಾಕಿದ್ದ ಸಂದರ್ಭ ಗ್ರಾಹಕರೊಬ್ಬರು ಹಣ ಪಡೆಯಲು ಬಂದ ಸಂದರ್ಭ ಇವರು ನಡೆಸಿದ ಅಕ್ರಮ ಬಯಲಿಗೆ ಬಂತು. ಆ ನಂತರ ಸಾರ್ವಜನಿಕರು ತಮ್ಮ ಹಣ ಹಿಂತಿರುಗಿಸುವಂತೆ ಒತ್ತಾಯಿಸಿ ಅಂಚೆ ಕಚೇರಿಯ ಎದುರು ಸಾಕಷ್ಟು ಹೋರಾಟ ನಡೆಸಿದ್ದರು. ಇದರ ಪರಿಣಾಮ ದೀಪಕ್ ಹಾಗೂ ಕಾರಯ್ಯ ಅವರನ್ನು ಅಂಚೆ ಇಲಾಖೆಯು ಅಮಾನತುಗೊಳಿಸಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಬಿಎನ್‌ಎಸ್ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕ್ರಿಮಿನಲ್ ಪಿತೂರಿ, ವಂಚನೆ, ವಿಶ್ವಾಸ ದ್ರೋಹ ಹಾಗೂ ನಕಲಿ ದಾಖಲೆಗಳ ಸೃಷ್ಟಿಗೆ ಸಂಬಂಧಿಸಿದಂತೆ ಇವರಿಬ್ಬರ ಮೇಲೆ ಮಾರ್ಚ್ ತಿಂಗಳಿನಲ್ಲಿ ದೂರು ದಾಖಲಾಗಿತ್ತು.