ವಿಜ್ಞಾನ ಭವನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ವಸಂತೋತ್ಸವ ಅಭಿನಂದನಾ ಕಾರ್ಯಕ್ರಮದಲ್ಲಿ ಡಾ.ವಸಂತಕುಮಾರ್ ತಿಮಕಾಪುರ ಅವರ ಕೃತಿಗಳನ್ನು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಬಿಡುಗಡೆಗೊಳಿಸಿದರು. 
ಮೈಸೂರು

ವಿದ್ಯಾವಂತರು ಕೃಷಿ ಉದ್ದಿಮೆದಾರರಾಗಲಿ: ಸಚಿವ ಎನ್.ಚಲುವರಾಯಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಸ್ವಯಂ ಉದ್ಯೋಗಕ್ಕಿಂತ ಕೃಷಿ ಉದ್ಯಮ ಸ್ಥಾಪಿಸಿ. ಇದಕ್ಕೆ ಖರ್ಚು ಕಡಿಮೆ.
  • ಸಿಗುವ ಸೌಲಭ್ಯಗಳು ಬಳಸಿಕೊಂಡು ಕೃಷಿ ಕೈಗಾರಿಕೋದ್ಯಮಿಗಳಾಗಬೇಕು
  • ಸಮಗ್ರ ಕೃಷಿ ಈಗಿನ ಅನಿವಾರ್ಯತೆ.
ಮೈಸೂರು: ವಿದ್ಯಾವಂತರು ಉದ್ಯೋಗಿ ಆಗುವ ಬದಲು ಕೃಷಿ ಉದ್ದಿಮೆದಾರರಾಗಬೇಕು ಎಂದು ಕೃಷಿ ಸಚಿವ ಎನ್.ಚಲವರಾಯಸ್ವಾಮಿ ಹೇಳಿದರು.
ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಡಾ.ವಸಂತಕುಮಾರ್ ತಿಮಕಾಪುರ ಅವರ ಕೃತಿಗಳ ಬಿಡುಗಡೆ, ವಸಂತೋತ್ಸವ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದಿನಂತೆ ಓದಿದವರಿಗೆಲ್ಲ ಕೈಗಾರಿಕೆಗಳಲ್ಲಿ ಕೆಲಸ ದೊರೆಯುತ್ತಿಲ್ಲ. ಇನ್ನು ಸರ್ಕಾರಿ ಹುದ್ದೆ ಸಿಗುವುದಂತೂ ಕಷ್ಟಕರ. ಹೀಗಾಗಿ, ಬಹಳಷ್ಟು ವಿದ್ಯಾವಂತರು ನಿರುದ್ಯೋಗಿಗಳಾಗುತ್ತಿದ್ದಾರೆ.
 ಸ್ವಯಂ ಉದ್ಯೋಗಕ್ಕಿಂತ ಕೃಷಿ ಉದ್ಯಮ ಸ್ಥಾಪಿಸಿ. ಇದಕ್ಕೆ ಖರ್ಚು ಕಡಿಮೆ. ಕೃಷಿ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಿಂದ ಸಿಗುವ ಸೌಲಭ್ಯಗಳು ಬಳಸಿಕೊಂಡು ಕೃಷಿ ಕೈಗಾರಿಕೋದ್ಯಮಿಗಳಾಗಬೇಕು ಎಂದು ಸಲಹೆ ನೀಡಿದರು.
ಸಮಗ್ರ ಕೃಷಿ ಈಗಿನ ಅನಿವಾರ್ಯತೆ. ನಗರೀಕರಣ, ಬಡಾವಣೆ ನಿರ್ಮಾಣ ಸೇರಿದಂತೆ ಇನ್ನಿತರ ಚಟುವಟಿಕೆಗಳಿಂದ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಈಗಿರುವ ಸೀಮಿತ ಕೃಷಿ ಕಾರ್ಯಕ್ಷೇತ್ರದಲ್ಲೇ ಮಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕಾಗಿದೆ. 
ಪ್ರಕೃತಿಯಿಂದ ಕೃಷಿ ಕ್ಷೇತ್ರದ ಮೇಲೆ ಎದುರಾಗುತ್ತಿರುವ ಸವಾಲುಗಳನ್ನೂ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ವಿಜ್ಞಾನ, ಸಂಶೋಧನೆ, ತಂತ್ರಜ್ಞಾನ, ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡು ಜಂಟಿಯಾಗಿ ಮುನ್ನಡೆಯಬೇಕಾಗಿದೆ ಎಂದರು.
ಬೇರೆ ದೇಶಗಳೊಂದಿಗೆ ಭಾರತವನ್ನು ಹೋಲಿಸಿದಾಗ ನಾವು ಬಹಳಷ್ಟು ಹಿಂದುಳಿದಿರುವುದು ಗೋಚರವಾಗುತ್ತದೆ. ಆದರೆ, ವಾಸ್ತವ ಒಪ್ಪಿಕೊಳ್ಳಲು ಈಗಲೂ ಕೆಲವರು ಸಿದ್ಧರಿಲ್ಲ. ಸಣ್ಣ ದೇಶಗಳು ಪ್ರಗತಿಯಲ್ಲಿ ಬಹಳಷ್ಟು ಮುಂಚೂಣಿಯಲ್ಲಿವೆ. ನಮ್ಮ ಸ್ವಯಂಕೃತ ತಪ್ಪುಗಳಿಂದ ಹಿನ್ನಡೆಯಾಗಿದೆ ಎಂದರು.
ಭಾರತ ಕೃಷಿ ಪ್ರಧಾನ ರಾಷ್ಟ್ರ. ಶೇ.70ರಷ್ಟು ಕೃಷಿಯನ್ನೇ ಅವಲಂಬಿಸಿದ್ದಾರೆ. ದೇಶದ ಆರ್ಥಿಕವಾಗಿ ಸದೃಢವಾಗಿ ಬೆಳೆಯಲು ಕೃಷಿ ವಲಯವನ್ನೂ ಈಗಲಾದರೂ ಗಂಭೀರವಾಗಿ ಪರಿಗಣಿಸಬೇಕಿದೆ. ಕೃಷಿ ಕ್ಷೇತ್ರಕ್ಕೆ ಮೊದಲ ಆದ್ಯತೆ ಕೊಡದಿದ್ದರೆ ಭವಿಷ್ಯದಲ್ಲಿ ಕಷ್ಟಕರವಾಗಲಿದೆ ಎಂದು ಎಚ್ಚರಿಸಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ ಪ್ರೊ.ಎ.ಎಚ್.ರಾಜಾಸಾಬ್ ಮಾತನಾಡಿ, ಕೃಷಿ ಬೆಳೆಗಳಿಗೆ ವಿವಿಧ ಕಾರಣಕ್ಕೆ, ವಿವಿಧ ಆಯಾಮದಲ್ಲಿ ರೋಗಗಳು ಬರುತ್ತಿವೆ. ಈ ಕುರಿತು ರೈತರಿಗೆ ಅರಿವು ಮೂಡಿಸಿ, ಅವುಗಳ ಹತೋಟಿಗೆ ಕ್ರಮ ವಹಿಸಬೇಕಿದೆ ಎಂದು ಸಲಹೆ ನೀಡಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ದೇಶದ ಆರ್ಥಿಕ ಪ್ರಗತಿದಲ್ಲಿ ಕೃಷಿ ಪ್ರಮುಖ ಪಾತ್ರ ವಹಿಸುತ್ತದೆ. 
ಕೃಷಿಯೊಂದಿಗೆ ಗ್ರಾಮಾಭಿವೃದ್ಧಿ, ಹಳ್ಳಿಗಳ ಉಳಿವಿಗೆ ಪ್ರಧಾನಿ ನರೇಂದ್ರ ಮೋದಿ ವಿವಿಧ ಕಾರ್ಯಕ್ರಮಗಳೊಂದಿಗೆ ಪರಿಶ್ರಮಿಸುತ್ತಿದ್ದು, ವಿಕಸಿತ ಭಾರತದ ಸಂಕಲ್ಪ ಈಡೇರಲು ಕೃಷಿ ಕ್ಷೇತ್ರವನ್ನು ಸದೃಢಗೊಳಿಸುವುದು ಅಗತ್ಯವಾಗಿದೆ ಎಂದರು.
ವಸಂತ ವಿಹಾರ, ಪ್ಲಾಂಟ್ ಡಾಕ್ಟರ್ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಶ್ರೀ ನಿಶ್ಚಲಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 
ಹೈದ್ರಾಬಾದ್‌ನ ಇಕ್ರಿಸ್ಯಾಟ್ ನಿವೃತ್ತ ಉಪ ಮಹಾನಿರ್ದೇಶಕ ಡಾ.ಸಿ.ಎಲ್.ಲಕ್ಷ್ಮೀಪತಿಗೌಡ, ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ, ಮೈವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ, ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಎಸ್.ಉಮೇಶ್, ಆರ್.ರಘು ಇನ್ನಿತರರಿದ್ದರು.