ಶ್ರೀಕ್ಷೇತ್ರ ಸುತ್ತೂರಿನಲ್ಲಿ ಶನಿವಾರ ಆಯೋಜಿಸಿದ್ದ ಧಾರ್ಮಿಕ ಸಭೆಯನ್ನು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಉದ್ಘಾಟಿಸಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ, ಜಿ.ಟಿ.ದೇವೇಗೌಡ, ಶಿವಾನಂದ್, ಕುಮಾರ್ ರಾಜಶೇಖರ್, ನಿತೇಶ್ ಪಾಟೀಲ್ ಇನ್ನಿತರರಿದ್ದರು.
- ಸುತ್ತೂರು ಜಾತ್ರೆಯಲ್ಲಿ ಧಾರ್ಮಿಕ ಸಭೆ
- ಶ್ರೀ ಶಿವರಾತ್ರೀಶ್ವರ ಶಿವಯೋಗಿಯವರ ಜಾತ್ರಾ ಮಹೋತ್ಸವ
ಮೈಸೂರು: ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್ ಅವರ ಚಿಂತನೆಯನ್ನು ಕಾರ್ಯರೂಪಕ್ಕೆ ತಂದು, ಎಲ್ಲರನ್ನೂ ಸಮಾನವಾಗಿ ಕಾಣುವುದರೊಂದಿಗೆ ಸಮಾನತೆ ಪ್ರತಿಷ್ಠಾಪಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಶ್ರೀ ಶಿವರಾತ್ರೀಶ್ವರ ಶಿವಯೋಗಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಕ್ಷೇತ್ರ ಸುತ್ತೂರಿನಲ್ಲಿ ಶನಿವಾರ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಹಲವು ವರ್ಷಗಳ ಇತಿಹಾಸ ಇರುವ ಸುತ್ತೂರು ಮಠವು ಸೇವಾ ಮನೋಭಾವನೆಯಿಂದ ದೇಶ - ವಿದೇಶದಲ್ಲೂ ಹೆಸರು ಮಾಡಿದೆ. ಈ ಮಠದ ಮಾದರಿ ಸಮಾಜ ಸೇವೆ, ಸಮಾನತೆ ಮತ್ತು ಎಲ್ಲ ಜನರನ್ನೂ ವಿಶ್ವಾಸದಿಂದ ಕಾಣುವ ಮೂಲಕ ಬಸವಣ್ಣನವರ ದಾರಿಯಲ್ಲಿ ಇದು ಸಾಗುತ್ತಿದೆ ಎಂದರು.
ಮಠದಿಂದ ಸ್ಥಾಪನೆಯಾಗಿರುವ ವಿದ್ಯಾಸಂಸ್ಥೆಗಳಲ್ಲಿ ಸಂಸ್ಕಾರ, ಭಕ್ತಿಯನ್ನು ಮಕ್ಕಳಿಗೆ ಕಲಿಸಲಾಗುತ್ತಿದೆ. ಕೇವಲ ವಿದ್ಯಾಭ್ಯಾಸ ಒಂದೇ ಅಲ್ಲ, ಯಾವ ರೀತಿ ಬದುಕಬೇಕು, ಯಾವ ರೀತಿ ಇರಬೇಕು ಎಂಬುದನ್ನೂ ತೋರಿಸಿಕೊಟ್ಟು ಸಮಾಜದಲ್ಲಿ ಸುಧಾರಣೆ ಮಾಡುತ್ತಿದೆ ಎಂದರು.
ಎಲ್ಲ ಧರ್ಮ, ಎಲ್ಲ ವರ್ಗದ ಜನರಿಗೂ ಸಮಾನವಾದ ಅವಕಾಶ ಕಲ್ಪಿಸಿಕೊಟ್ಟು ಸಮಾಜ ಬದಲಾವಣೆ, ಸಮಾನತೆ, ಎಲ್ಲರೂ ಸಮವಾಗಿ ಬಾಳಬೇಕು ಎಂಬ ಸಂದೇಶ ಸಾರುತ್ತಿದೆ ಎಂದರು.
ಮಠಗಳು ಸಮಾಜದಲ್ಲಿ ಸುಧಾರಣೆ ತರುವುದಕ್ಕೆ ದಾರಿದೀಪವಾಗಿವೆ. ಶ್ರೇಷ್ಠವಾದ ಸ್ಥಾನದಲ್ಲಿರುವ ಇವುಗಳು ಸಮಾಜ ಸುಧಾರಣೆಗೆ ಇನ್ನಷ್ಟು ಕೆಲಸ ಮಾಡಬೇಕು. ಇದಕ್ಕೆ ಸುತ್ತೂರು ಮಠ ಇನ್ನಷ್ಟು ಪ್ರೋತ್ಸಾಹಿಸಿ ಸಮಾಜದ ಅಭಿವೃದ್ಧಿಗೆ ಆಶೀರ್ವಾದ ಮಾಡಬೇಕು ಎಂದು ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ಇದು ಕೇವಲ ಜಾತ್ರೆಯಷ್ಟೇ ಅಲ್ಲ, ಬದುಕಿನ ಯಾತ್ರೆ. ಭಾವೈಕ್ಯತೆ ಬಿಂಬಿಸುವ ಇದು, ಧಾರ್ಮಿಕ, ಸಾಂಸ್ಕೃತಿಕ ಮಿಲನವೂ ಹೌದು ಎಂದರು.
ಜಾತ್ರೆಗಳು ಭಕ್ತಿ ಸಂಗಮ. ಧಾರ್ಮಿಕದ ಸಂಕೇತ. ಸಂಸ್ಕೃತಿಯನ್ನು ಪರಿಪೂರ್ಣತೆಯತ್ತ ಸಹ ಕರೆದೊಯ್ಯುತ್ತವೆ. ಜತೆಗೆ ಮನೋವಿಕಾಸಕ್ಕೆ ರಂಜನೆ ಕಲ್ಪಿಸುತ್ತದೆ. ಪ್ರತಿಯೊಬ್ಬರು ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಿಯರಾಗಬೇಕು. ಅದು ಬದುಕಿನಲ್ಲಿ ಹಸನ್ಮುಖಿಯಾಗಿಸುತ್ತದೆ. ಸಂಸಾರವನ್ನು ಸಂಗೀತಮಯಗೊಳಿಸುತ್ತದೆ ಎಂದು ಹೇಳಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಜಿ.ಟಿ.ದೇವೇಗೌಡ, ಅಮೆರಿಕದ ನಾಸಾ ವಿಜ್ಞಾನಿ ಶಿವಾನಂದ್, ಯುಎಸ್‌ಎ ಮೆ.ಮಾರ‌್ಸಿಲ್ಲಿ ಸಂಸ್ಥೆಯ ಅಧ್ಯಕ್ಷ ಕುಮಾರ್ ರಾಜಶೇಖರ್, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ದುಬೈ ಉದ್ಯಮಿ ರಾಚಪ್ಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಕೇರಳ ರಾಜ್ಯದ ಅಧ್ಯಕ್ಷ ಶಂಕರ್ ಪಿಳೈ, ಹುಬ್ಬಳ್ಳಿ-ಧಾರವಾಡ ಪಾಲಿಕೆ ಮಾಜಿ ಸದಸ್ಯ ರಾಜಣ್ಣ ಇನ್ನಿತರರಿದ್ದರು.