ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ನಿರ್ಮಿಸಿರುವ ಡ್ರ್ಯಾಗನ್ ಪಾಂಡ್ ವನ್ನು ಸಚಿವ ಡಾ.ಯತೀಂದ್ರ ವೀಕ್ಷಿಸಿದರು.
- ಪ್ರವಾಸಿಗರನ್ನು ಆಕರ್ಷಿಸಲು ವರ್ಷಪೂರ್ತಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ
- ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಶಾಶ್ವತವಾಗಿ ಆಹಾರ ಮಳಿಗೆಗಳನ್ನು ನಿರ್ಮಾಣ ಮಾಡಲಾಗುವುದು
ಮೈಸೂರು: ಜಾಗತಿಕ ಮಟ್ಟದಲ್ಲಿ ದಸರಾ ವಸ್ತು ಪ್ರದರ್ಶನವನ್ನು ಮತ್ತಷ್ಟು ಆಕರ್ಷಣೀಯವಾಗಿಸಲು ವರ್ಷಪೂರ್ತಿ ಕಾರ್ಯ ನಿರ್ವಹಿಸುವ ಅಮ್ಯೂಸ್ಮೆಂಟ್ ಪಾರ್ಕ್ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಾಡಹಬ್ಬದ ಆಕರ್ಷಣೆಗಳಲ್ಲಿ ಒಂದಾದ ದಸರಾ ವಸ್ತು ಪ್ರದರ್ಶನಕ್ಕೆ ಪ್ರವಾಸಿಗರು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕಳೆದ ವರ್ಷ 18 ಲಕ್ಷ ಜನರು ಭೇಟಿ ನೀಡಿದ್ದು, ಈ ವರ್ಷ 20 ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಸರಾ ವಸ್ತು ಪ್ರದರ್ಶನ ವರ್ಷದಿಂದ ವರ್ಷಕ್ಕೆ ಹೆಚ್ಚು ಆಕರ್ಷಣೆಗೊಳ್ಳುತ್ತಿದೆ. ಆದರೆ ಕೇವಲ ದಸರಾ ಸಮಯದಲ್ಲಿ 90 ದಿನಗಳು ಮಾತ್ರ ನಡೆಯುತ್ತಿದೆ. ನಗರಕ್ಕೆ ವರ್ಷಪೂರ್ತಿ ಪ್ರವಾಸಿಗರು ಬರುವುದರಿಂದ ಅವರನ್ನು ಆಕರ್ಷಿಸಲು ವರ್ಷಪೂರ್ತಿ ನಡೆಯುವ ಅಮ್ಯೂಸ್ಮೆಂಟ್ ಪಾರ್ಕ್ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ಸರ್ಕಾರದಿಂದ ಸಹಕಾರ ದೊರೆಯುವ ನಿರೀಕ್ಷೆ ಇದೆ ಎಂದರು.
ಈ ಬಾರಿ ಅಕ್ಟೋಬರ್ 11ರಿಂದ 2027ರ ಜನವರಿ 8 ರವರೆಗೆ ದಸರಾ ವಸ್ತು ಪ್ರದರ್ಶನ ಆಯೋಜಿಸಲಾಗುವುದು. ಭೇಟಿ ನೀಡುವ ಜನರಿಗೆ ಸೌಲಭ್ಯ ಕಲ್ಪಿಸಲು ಹಲವು ಶಾಶ್ವತ ಕಾಮಗಾರಿಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಶಾಶ್ವತ ಫುಡ್‌ಕೋರ್ಟ್ ಗೆ ಚಾಲನೆ:
ವಸ್ತು ಪ್ರದರ್ಶನಕ್ಕೆ ಭೇಟಿ ನೀಡುವವರಿಗಾಗಿ ಆವರಣದಲ್ಲಿ ಶಾಶ್ವತ ಫುಡ್‌ಕೋರ್ಟ್ ಅನ್ನು ನಿರ್ಮಿಸಲಾಗುತ್ತಿದೆ. ಇಷ್ಟು ವರ್ಷಗಳು ತಾತ್ಕಾಲಿಕ ಮಳಿಗೆಗಳನ್ನು ನಿರ್ಮಿಸಲಾಗುತ್ತಿದ್ದು, ಸೂಕ್ತ ವ್ಯವಸ್ಥೆ ಇಲ್ಲ ಎನ್ನುವ ಮಾತು ಕೇಳಿ ಬರುತ್ತಿತ್ತು. ಆದರಿಂದ ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಮಳಿಗೆಯನ್ನು ನಿರ್ಮಿಸಿ ಕುಡಿಯುವ ನೀರು, ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಪ್ರಥಮ ಹಂತದಲ್ಲಿ 32 ಶಾಶ್ವತ ಮಳಿಗೆಗಳನ್ನು ನಿರ್ಮಿಸಿ, ಮಳೆ-ಬಿಸಿಲಿನಿಂದ ರಕ್ಷಣೆ ನೀಡುವ ಅತ್ಯಾಧುನಿಕ ಶೆಲ್ಟರ್‌ಅನ್ನು ಅಳವಡಿಸಲಾಗುವುದು. ಇದರಿಂದ ಪ್ರತಿ ವರ್ಷ ತಾತ್ಕಾಲಿಕ ಮಳಿಗೆಗಳನ್ನು ನಿರ್ಮಿಸುವ ವೆಚ್ಚ ತಪ್ಪಿಸಿದಂತಾಗುತ್ತದೆ. ಆವರಣದಲ್ಲಿರುವ ಸಿದ್ದರಾಮಯ್ಯ ಪ್ರದರ್ಶನ ಅಂಗಳದಲ್ಲಿ ಈಗಾಗಲೇ ಕಾಯಂ ಮಳಿಗೆಗಳನ್ನು ಕಲ್ಪಿಸಲಾಗಿದೆ. ಇದರೊಂದಿಗೆ ಸಾರ್ವಜನಿಕರ ನೆಚ್ಚಿನ ಆಕರ್ಷಣೆಗಳಾದ ಸಂಗೀತ ಕಾರಂಜಿ ಹಾಗೂ ಲೇಸರ್ ಶೋ, ಬೋಟಿಂಗ್ ಮತ್ತು ರಾಜೀವ್‌ಗಾಂಧಿ ಡ್ರ್ಯಾಗನ್ ಪಾಂಡ್ ಮನರಂಜನಾ ಕಾರ್ಯಕ್ರಮಗಳನ್ನು ಈ ಬಾರಿಯೂ ಮುಂದುವರಿಸಲಾಗುತ್ತಿದೆ. ಮೈದಾನದ ಒಳಭಾಗದಲ್ಲಿ ರಸ್ತೆ ಮತ್ತು ಕುಡಿಯುವ ನೀರಿನಂತಹ ಮೂಲಸೌಕರ್ಯವನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದರು.
ನಗರದ ಹೊರ ವಲಯ ಉತ್ತನಹಳ್ಳಿ ಮೈದಾನದಲ್ಲಿ ಈ ಬಾರಿಯೂ ಯುವ ದಸರಾ ಆಯೋಜಿಸಲಾಗುವುದು. ವಸ್ತು ಪ್ರದರ್ಶನ ಮೈದಾನ ಸೇರಿದಂತೆ ಸಮಾವೇಶ, ಸಮಾರಂಭ, ರ‌್ಯಾಲಿ, ದೊಡ್ಡ ಸಂಗೀತ ಕಾರ್ಯಕ್ರಮ ನಡೆಯುವ ಸ್ಥಳಗಳು ನಗರದ ಮಧ್ಯಭಾಗದಲ್ಲಿ ಇದ್ದು, ಇದರಿಂದ ಸಂಚಾರ ದಟ್ಟಣೆ ಅಗುತ್ತದೆ. ಆದ್ದರಿಂದ ಸಮಾರಂಭ, ರ‌್ಯಾಲಿ ನಡೆಸಲು ಸೂಕ್ತ ಜಾಗವನ್ನು ನಗರದ ಹೊರ ಭಾಗದಲ್ಲಿ ಗುರುತಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇರುವುದರಿಂದ ದಸರಾವನ್ನು ಸರಳವಾಗಿ ಆಚರಿಸಬೇಕೆಂಬ ಅಭಿಪ್ರಾಯಗಳು ಕೇಳಿ ಬಂದಿದ್ದವು. ಆದರೆ ಪ್ರವಾಸೋದ್ಯಮದ ದೃಷ್ಟಿಯಿಂದ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿಗಳು ಪ್ರತಿ ವರ್ಷದಂತೆ ಸಡಗರ, ವಿಜೃಂಭಣೆಯಿಂದಲೇ ದಸರಾ ಆಚರಣೆ ಮಾಡೋಣ ಎಂದು ತೀರ್ಮಾನಿಸಿದ್ದಾರೆ ಎಂದು ಹೇಳಿದರು.
ಕರಾವಳಿ ಭಾಗದ ಸಾಂಸ್ಕೃತಿಕ ಕ್ರೀಡೆಯಾದ ಕಂಬಳವನ್ನು ಕೇವಲ ಆ ಭಾಗಕ್ಕೆ ಸೀಮಿತಗೊಳಿಸದೆ, ಇಡೀ ರಾಜ್ಯದ ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ಬಾರಿ ಮೈಸೂರು ದಸರಾದಲ್ಲಿ ಕಂಬಳವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಬಹುತೇಕ ಶಾಸಕರು ಮತ್ತು ಸದಸ್ಯರು ಒಲವು ವ್ಯಕ್ತಪಡಿಸಿದ್ದು, ಈಗ ವಿರೋಧ ವ್ಯಕ್ತವಾಗುತ್ತಿರುವುದರಿಂದ ಈ ಕುರಿತು ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ದಸರಾ ಉದ್ಘಾಟನೆಯನ್ನು ಸುತ್ತೂರು ಶ್ರೀಗಳು ನೆರವೇರಿಸಬೇಕು ಎನ್ನುವ ಅಭಿಪ್ರಾಯವನ್ನು ಸಭೆಯಲ್ಲಿ ನಾನು ಸೇರಿದಂತೆ ಹಲವರು ವ್ಯಕ್ತಪಡಿಸಿದ್ದಾರೆ. ಅದರ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿಗಳಿಗೆ ಬಿಡಲಾಗಿದೆ ಎಂದು ತಿಳಿಸಿದರು.
ದಸರಾ ಆರಂಭವಾಗುವುದಕ್ಕಿಂತ ಮುಂಚಿತವಾಗಿಯೇ ಮೈಸೂರು ನಗರದ ರಸ್ತೆಗಳ ದುರಸ್ತಿ ಹಾಗೂ ಹೊಸ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ದಸರಾ ಉಪಸಮಿತಿಗಳನ್ನು ನಮ್ಮ ಪಕ್ಷ ಅಲ್ಲದೆ ಇತರರನ್ನು ಒಳಗೊಂಡಂತೆ ಬೇಗನೇ ರಚಿಸಲು ನಿರ್ಧರಿಸಲಾಗಿದೆ ಎಂದರು.
ದಸರಾ ವಸ್ತುಪ್ರದರ್ಶನಕ್ಕೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ದಸರಾ ಶಾಶ್ವತ ಪ್ರಾಧಿಕಾರ ರಚನೆ ಮಾಡಬೇಕೆಂಬ ಬೇಡಿಕೆ ಪ್ರತಿ ವರ್ಷದಂತೆ ಈ ಬಾರಿಯೂ ಬಂದಿದ್ದು, ಮುಖ್ಯಮಂತ್ರಿಗಳು ಇದನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡು ಕೇವಲ ಒಂದು ತಿಂಗಳಷ್ಟೇ ಆಗಿರುವುದರಿಂದ, ಮುಂದಿನ ತಿಂಗಳು ಕಡ್ಡಾಯವಾಗಿ ಕೆಡಿಪಿ ಸಭೆಯನ್ನು ಕರೆಯಲಾಗುವುದು ಎಂದು ತಿಳಿಸಿದರು.
ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ
ಬೆಂಗಳೂರಿನಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸುವುದು ಸಂಚಾರ ದಟ್ಟಣೆ ನಿಯಂತ್ರಿಸಲು ಅನಿವಾರ್ಯವಾಗಿದೆ. ಆದರೆ ಇತರ ನಗರಗಳಲ್ಲಿ ಮಾನವೀಯತೆಯ ದೃಷ್ಟಿಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ನೋಟಿಸ್ ನೀಡಿ, ಪರ್ಯಾಯ ಜಾಗ ಕಲ್ಪಿಸಿ ನಂತರ ತೆರವು ಮಾಡಲಾಗುವುದು. ಮೈಸೂರಿನಲ್ಲಿ ಫುಡ್ ಸ್ಟ್ರೀಟ್ ಮತ್ತು ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ ಎಂದರು.