ಟೆರಿಷಿಯನ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಮಾದಕ ವ್ಯಸನದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಿದರು. ತನ್ವೀರ್ ಸೇಠ್, ಜಿ.ಲಕ್ಷ್ಮೀಕಾಂತ್ ರೆಡ್ಡಿ, ಸೀಮಾ ಲಾಟ್ಕರ್, ಮಲ್ಲಿಕಾರ್ಜುನ್ ಬಾಲದಂಡಿ, ಡಾ. ಹರ್ಷ ಪ್ರಿಯಂವದ, ಕೆ.ಎಸ್ ಸುಂದರ್ ರಾಜ್, ರೆ.ಡಾ. ಸಿಸ್ಟರ್ ಪ್ರಪುಲ್ಲಾ, ರೆ.ಸಿಸ್ಟರ್ ಅಂಜಲಿ ಇದ್ದರು.
- ಮಾದಕ ವ್ಯಸನದ ಕುರಿತು ಜಾಗೃತಿ
- ಮಾದಕ ವ್ಯಸನ ಕುರಿತು ಜಾಗೃತಿ ಕಾರ್ಯಕ್ರಮ
ಮೈಸೂರು; ಪ್ರಸ್ತುತ ದಿನಗಳಲ್ಲಿ ಕೇವಲ ನಗರ ಪ್ರದೇಶಗಳಲ್ಲದೆ, ಗ್ರಾಮೀಣ ಭಾಗದಲ್ಲೂ ಸಹ ಜನರು ಮಾದಕ ದ್ರವ್ಯಗಳಿಗೆ ದಾಸರಾಗುತ್ತಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.
ನಗರ ಪೊಲೀಸ್ ಘಟಕದಿಂದ ಟೆರಿಷಿಯನ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಮಾದಕ ವ್ಯಸನ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ಭವಿಷ್ಯವಿರುವುದು ಯುವ ಜನತೆಯಲ್ಲಿ. ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ದೃಢವಿದ್ದಾಗ ಮಾತ್ರ ದೇಶ ಯಶಸ್ಸು ಕಾಣಲು ಸಾಧ್ಯ. ಮಾದಕ ವಸ್ತು ನಿರ್ಮೂಲನೆಗೆ ಕೇವಲ ಸರ್ಕಾರ ಮತ್ತು ಪೊಲೀಸರು ಮಾತ್ರ ಹೋರಾಟ ಮಾಡಿದರೆ ಸಾಲದು ಯುವಪೀಳಿಗೆಯೂ ಸಹ ಸಹಕರಿಸಬೇಕು ಎಂದರು.
ಮಾದಕ ವಸ್ತುಗಳ ವ್ಯಸನಗಳಿಂದ ಮುಕ್ತಗೊಳಿಸುವ ಉದ್ದೇಶದಿಂದ ನಮ್ಮ ಸರ್ಕಾರ ಮತ್ತು ಪೊಲೀಸ್ ಇಲಾಖೆ ಹಲವಾರು ಯೋಜನೆ ಹಾಗೂ ಕಠಿಣ ಕ್ರಮ ಕೈಗೊಂಡಿದ್ದು, ಇಡೀ ರಾಜ್ಯವನ್ನು ಮಾದಕ ವ್ಯಸನ ಮುಕ್ತ ರಾಜ್ಯವನ್ನಾಗಿ ಮಾಡುವುದು ನಮ್ಮ ಗುರಿ ಎಂದು ತಿಳಿಸಿದರು.
ಶಾಲೆ ಮತ್ತು ಕಾಲೇಜುಗಳಲ್ಲಿ ನಿಯಮಿತವಾಗಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನ ನಡೆಸಬೇಕು. ಮಾದಕ ವಸ್ತುಗಳ ಮಾರಾಟ ಅಥವಾ ಬಳಕೆಯ ಬಗ್ಗೆ ಸಾರ್ವಜನಿಕರು ಉಚಿತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಉತ್ತೇಜಿಸಬೇಕು.
ವ್ಯಸನಕ್ಕೆ ತುತ್ತಾದವರನ್ನು ಅಪರಾಧಿಗಳಂತೆ ನೋಡದೆ, ಸೂಕ್ತ ಕೌನ್ಸೆಲಿಂಗ್ ಹಾಗೂ ವೈದ್ಯಕೀಯ ಚಿಕಿತ್ಸೆ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರಿ ಮಟ್ಟದಲ್ಲಿ ಉಚಿತ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವ ಆಲೋಚನೆ ಮಾಡುವಂತಹ ಸಂದರ್ಭ ಇದಾಗಿದೆ. ಯುವಜನತೆ ದೇಶದ ಆಸ್ತಿ. ಆದರೆ, ಅನೇಕ ಯುವಕ-ಯುವತಿಯರು ಕ್ಷಣಮಾತ್ರದ ಸಂತೋಷಕ್ಕಾಗಿ ಮಾದಕ ದ್ರವ್ಯಗಳ ದಾಸರಾಗಿ ಸುಂದರ ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಮಾದಕ ವಸ್ತುಗಳ ಸೇವನೆಯಿಂದ ಖಿನ್ನತೆ, ಮಾನಸಿಕ ಅಸ್ವಸ್ಥತೆ ಮತ್ತು ಅಕಾಲಿಕ ಮರಣ ಸಂಭವಿಸಬಹುದು. ಒಬ್ಬ ವ್ಯಕ್ತಿ ವ್ಯಸನಿಯಾದರೆ, ಆತನ ಕುಟುಂಬ ದಿನವೂ ನರಕಯಾತನೆ ಅನುಭವಿಸುತ್ತದೆ. ಹಣಕಾಸಿನ ಶೋಷಣೆ, ನೆಮ್ಮದಿ ನಾಶವಾಗುತ್ತದೆ. ಅಪರಾಧ ಕೃತ್ಯಗಳು ಹೆಚ್ಚಾಗುತ್ತವೆ.
ಯುವಶಕ್ತಿ ಹಾದಿತಪ್ಪಿದಾಗ ಇಡೀ ದೇಶದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಆದ್ದರಿಂದ ಬದುಕನ್ನು ನಾವೇ ಹಾಳುಮಾಡಿಕೊಂಡು ಸಮಾಜಕ್ಕೆ ಹೊರೆಯಾಗುವ ಬದಲು, ಮಾದಕ ವ್ಯಸನದಿಂದ ದೂರವಿದ್ದು, ಸಾಧನೆಯ ಮೂಲಕ ಸಮಾಜಕ್ಕೆ ದಾರಿದೀಪವಾಗಬೇಕು ಎಂದರು.
ಯುವಜನತೆಯ ಶಕ್ತಿ ಮತ್ತು ಸಾಮರ್ಥ್ಯವು ದೇಶವನ್ನು ಕಟ್ಟಲು ಬಳಕೆಯಾಗಬೇಕೇ ಹೊರತು, ವ್ಯಸನಗಳ ಕತ್ತಲಲ್ಲಿ ನಾಶವಾಗಬಾರದು. ಜೀವನದಲ್ಲಿ ಎದುರಾಗುವ ಒತ್ತಡ, ಸೋಲು ಅಥವಾ ನಿರಾಸೆಗಳಿಗೆ ಮಾದಕ ವಸ್ತುಗಳ ಸೇವನೆ ಎಂದಿಗೂ ಪರಿಹಾರವಾಗುವುದಿಲ್ಲ. ಧೈರ್ಯ ಮತ್ತು ಆತ್ಮವಿಶ್ವಾಸವೇ ನಿಜವಾದ ಪರಿಹಾರ ಎಂದು ತಿಳಿಸಿದರು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾತನಾಡಿ, ರೈಸ್ ಮತ್ತು ಬೇಡ ಬ್ರೋ ಎಂಬ ಜಾಗೃತಿ ಅಭಿಯಾನ ಶುರು ಮಾಡಿದ್ದು, ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯು 2028ರ ವೇಳೆಗೆ ‘ಮಾದಕ ವಸ್ತು ಮುಕ್ತ ಕರ್ನಾಟಕ’ ನಿರ್ಮಿಸುವ ಮಹತ್ವಾಕಾಂಕ್ಷೆಯ ಗುರಿ ಹೊಂದಿದೆ. ಅದೇ ಹಾದಿಯಲ್ಲಿ ನಾವೂ ಸಹ ಕಳೆದ ಒಂದು ವರ್ಷದಿಂದ ನಮ್ಮ ಜಿಲ್ಲೆಯನ್ನು ಮಾದಕ ವಸ್ತು ಮುಕ್ತವಾಗಿಸಲು ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ಈ ಅಭಿಯಾನದಲ್ಲಿ ನಾವು ಮುಖ್ಯವಾಗಿ ಯುವಜನತೆಯನ್ನು ಗಮನದಲ್ಲಿಟ್ಟುಕೊಂಡಿದ್ದು, ಕೇವಲ ಕುತೂಹಲಕ್ಕಾಗಿ ‘ಒಮ್ಮೆ ಮಾದಕ ವಸ್ತು ಸೇವನೆಗೆ ಯತ್ನಿಸಿ ನೋಡೋಣ’ ಎಂಬ ಮನಸ್ಥಿತಿಯಿಂದ ಆರಂಭವಾಗುವ ಈ ಅಭ್ಯಾಸ, ಕಾಲಕ್ರಮೇಣ ವ್ಯಕ್ತಿಯನ್ನು ಸಂಪೂರ್ಣವಾಗಿ ಅದಕ್ಕೆ ದಾಸನನ್ನಾಗಿ ಮಾಡುತ್ತದೆ ಎಂದು ತಿಳಿಸಿದರು.
ಈ ದುರಂತವನ್ನು ತಡೆಯಲು ನಾವು ಪ್ರತಿಯೊಂದು ಕಾಲೇಜನ್ನು ಗುರುತಿಸಿ, ಅಲ್ಲಿ ಕಡ್ಡಾಯವಾಗಿ ಮಾದಕ ದ್ರವ್ಯ ತಡೆ ಸಮಿತಿ ಇರಲೇಬೇಕು ಎಂದು ನಿಯಮಿಸಿ, ಸಮಿತಿ ಸ್ಥಾಪಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ಡಿಸಿಪಿಗಳಾದ ಡಾ. ಹರ್ಷ ಪ್ರಿಯಂವದ, ಕೆ.ಎಸ್ ಸುಂದರ್ ರಾಜ್, ಟೆರಿಷಿಯನ್ ಕಾಲೇಜಿನ ನಿರ್ದೇಶಕ ರೆ.ಡಾ. ಸಿಸ್ಟರ್ ಪ್ರಪುಲ್ಲಾ ಹಾಗೂ ಟೆರಿಷಿಯನ್ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಸಿಸ್ಟರ್ ಅಂಜಲಿ ಉಪಸ್ಥಿತರಿದ್ದರು.