Manipal Hospital Mysore 
ಮೈಸೂರು

ಮರುಕಳಿಸುವ ಮೂತ್ರನಾಳದ ಸಮಸ್ಯೆಗೆ ಮಣಿಪಾಲ್ ಆಸ್ಪತ್ರೆ ಮೈಸೂರಿನಲ್ಲಿ ಕನಿಷ್ಠ ಶಸ್ತ್ರಚಿಕಿತ್ಸೆಯ 'ಸ್ಟೆಮ್ ಸೆಲ್' ಚಿಕಿತ್ಸಾ ವಿಧಾನ

ಮೈಸೂರು: ಮೂತ್ರ ಸರಿಯಾಗಿ ಬರದೇ ಇರುವುದು ಅಥವಾ ಮೂತ್ರದ ಹರಿವು ಕಡಿಮೆಯಾಗುವುದು ಸಾಮಾನ್ಯ ಸಮಸ್ಯೆ ಎಂದು ಹಲವರು ಅದರ ಮೇಲೆ ಗಮನ ಕೊಡುವುದಿಲ್ಲ. ಆದರೆ ಕೆಲವೊಮ್ಮೆ ಇದು ಗಂಭೀರ ಸಮಸ್ಯೆಯ ಲಕ್ಷಣವಾಗಿರಬಹುದು. ಇದನ್ನು ಯೂರೇಥ್ರಲ್ ಸ್ಟ್ರಿಕ್ಚರ್ ಎಂದು ಕರೆಯುತ್ತಾರೆ, ಅಂದರೆ ಮೂತ್ರ ಹೋಗುವ ದಾರಿ ಕಿರಿದಾಗುವುದು.
ಇತ್ತೀಚೆಗೆ ಮಣಿಪಾಲ್ ಆಸ್ಪತ್ರೆ ಮೈಸೂರಿನಲ್ಲಿ 30 ವರ್ಷದ ವ್ಯಕ್ತಿಗೆ ಈ ಸಮಸ್ಯೆಗೆ ಹೊಸ ರೀತಿಯ ಸ್ಟೆಮ್ ಸೆಲ್ ಚಿಕಿತ್ಸೆ ನೀಡಿ ಯಶಸ್ವಿಯಾಗಿ ಗುಣಪಡಿಸಲಾಗಿದೆ. ಈ ವಿಧಾನದಲ್ಲಿ ದೊಡ್ಡ ಶಸ್ತ್ರಚಿಕಿತ್ಸೆ ಬೇಡವಾಗಿದ್ದು, ಪದೇ ಪದೇ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ.
ಈ ಬಗ್ಗೆ ನಡೆದ ಪತ್ರಿಕಾ ಸಭೆಯಲ್ಲಿ ಡಾ. ದಿನೇಶ್ ಕುಮಾರ್ ಟಿ. ಪಿ. (ಯೂರಾಲಜಿ ಮತ್ತು ಆಂಡ್ರಾಲಜಿ ತಜ್ಞರು ಹಾಗೂ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸಕರು), ಆಸ್ಪತ್ರೆಯ ನಿರ್ದೇಶಕ ಶ್ರೀ ಸಂದೀಪ್ ಪಟೇಲ್ ಬಿ. ಜೆ. ಹಾಗೂ ಮುಖ್ಯ ವೈದ್ಯಕೀಯ ಸೇವೆಗಳ ಮುಖ್ಯಸ್ಥರಾದ ಡಾ. ಉಪೇಂದ್ರ ಶೆಣೈ ಉಪಸ್ಥಿತರಿದ್ದರು.
30 ವರ್ಷದ ರಘು (ಹೆಸರು ಬದಲಿಸಲಾಗಿದೆ) ಅವರು ಮೂತ್ರ ಹೋಗಲು ತೊಂದರೆ ಹಾಗೂ ಮೂತ್ರದ ಹರಿವು ಕಡಿಮೆಯಾಗಿರುವ ಸಮಸ್ಯೆಯಿಂದ ಡಾ. ದಿನೇಶ್ ಅವರನ್ನು ಸಂಪರ್ಕಿಸಿದರು. ಅವರಿಗೆ ಒಂದು ವರ್ಷದ ಹಿಂದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅದರಿಂದ ತಾತ್ಕಾಲಿಕ ಉಪಶಮನ ಸಿಕ್ಕಿತ್ತಾದರೂ, ಕೇವಲ ಆರು ತಿಂಗಳ ಅವಧಿಯಲ್ಲೇ ಸಮಸ್ಯೆ ಮತ್ತೆ ಮರುಕಳಿಸಿತ್ತು.
ಈ ಬಗ್ಗೆ ವಿವರಿಸಿದ ಡಾ. ದಿನೇಶ್ ಕುಮಾರ್ ಟಿ. ಪಿ. ಅವರು, “ಯೂರೇಥ್ರಲ್ ಸ್ಟ್ರಿಕ್ಚರ್ ಸಾಮಾನ್ಯವಾಗಿ ಮೂತ್ರನಾಳದಲ್ಲಿ ಗಾಯವಾದಾಗ ಅಥವಾ ಸೋಂಕು ಉಂಟಾದಾಗ ಅಲ್ಲಿನ ಚರ್ಮ ಗಟ್ಟಿಯಾಗಿ ದಾರಿ ಕಿರಿದಾಗುತ್ತದೆ. ಶಸ್ತ್ರಚಿಕಿತ್ಸೆ ಮಾಡಿದರೂ ಅಲ್ಲಿ ಮತ್ತೆ ಹಳೆಯ ಮಾಂಸ ಬೆಳೆದು ಗಟ್ಟಿಯಾಗಿ ದಾರಿ ಮುಚ್ಚಿಕೊಳ್ಳುವ ಸಾಧ್ಯತೆ ಇರುತ್ತದೆ.” ಎಂದು ಹೇಳಿದರು.
ಸಾಮಾನ್ಯವಾಗಿ ಈ ಸಮಸ್ಯೆಗೆ ಬೇರೆ ಕಡೆಯಿಂದ ಚರ್ಮ ತೆಗೆದು ದೊಡ್ಡ ಸರ್ಜರಿ ಮಾಡಬೇಕಾಗುತ್ತದೆ. ಇದು ಪರಿಣಾಮಕಾರಿ ಆದರೆ ಹೆಚ್ಚು ಸಮಯ, ನೋವು ಮತ್ತು ಚೇತರಿಕೆ ಅವಧಿ ಬೇಕಾಗುತ್ತದೆ. ರೋಗಿಯ ಸ್ಥಿತಿಯನ್ನು ಗಮನಿಸಿ, ಈ ಬಾರಿ ವೈದ್ಯರು ಹೊಸ ವಿಧಾನವನ್ನು ಆಯ್ಕೆ ಮಾಡಿದರು. ಈ ವಿಧಾನದಲ್ಲಿ ರೋಗಿಯ ಬಾಯಿಯ ಒಳಭಾಗದಿಂದ (ಕೆನ್ನೆ) ಜೀವಕೋಶಗಳನ್ನು ತೆಗೆದು, ಪುಣೆಯ ವಿಶೇಷ ಪ್ರಯೋಗಾಲಯದಲ್ಲಿ ಅವನ್ನು ಹೆಚ್ಚಿಸಿ ಔಷಧ ರೂಪಕ್ಕೆ ತರಲಾಯಿತು. ನಂತರ ಸಿಸ್ಟೋಸ್ಕೋಪ್ ಮತ್ತು ಲೇಸರ್ ತಂತ್ರಜ್ಞಾನದ ನೆರವಿನಿಂದ, ವೃದ್ಧಿಸಿದ ಜೀವಕೋಶಗಳನ್ನು ದ್ರವ ರೂಪದಲ್ಲಿ ಸಿದ್ಧಪಡಿಸಿ ಯಾವುದೇ ಕತ್ತರಿಸುವ ಅಥವಾ ಹೊಲಿಗೆ ಇಲ್ಲದೆ ನೇರವಾಗಿ ಮೂತ್ರನಾಳದ ಪೀಡಿತ ಭಾಗಕ್ಕೆ ಸೇರಿಸಲಾಯಿತು. ಯಾವುದೇ ಹೊರಗಿನಿಂದ ಕತ್ತರಿಸುವ ಶಸ್ತ್ರಚಿಕಿತ್ಸೆ ಮಾಡಲಾಗಲಿಲ್ಲ ಹಾಗೂ ಇದು ಒಂದು ದಿನದಲ್ಲೇ ಪೂರ್ಣಗೊಳ್ಳುವ ಚಿಕಿತ್ಸೆ ಆಗಿದೆ.
ಈ ಹೊಸ ಚಿಕಿತ್ಸೆಯ ಬಗ್ಗೆ ಡಾ. ದಿನೇಶ್ ಹೇಳಿದರು: “ಈ ವಿಧಾನದಲ್ಲಿ ದೊಡ್ಡ ಶಸ್ತ್ರಚಿಕಿತ್ಸೆ ಬೇಡ. ರೋಗಿಯದೇ ಕೋಶಗಳನ್ನು ಬಳಸುವುದರಿಂದ ಯಾವುದೇ ಅಡ್ಡಪರಿಣಾಮ ಹಾಗೂ ತಿರಸ್ಕಾರ (rejection) ಸಮಸ್ಯೆಗಳು ಇರುವುದಿಲ್ಲ. ಬೇಗ ಗುಣಮುಖವಾಗಬಹುದು ಮತ್ತು ಸಮಸ್ಯೆ ಮತ್ತೆ ಬರುವ ಸಾಧ್ಯತೆ ಕಡಿಮೆ.” ಚಿಕಿತ್ಸೆಯ ನಂತರ ರೋಗಿಗೆ ಉತ್ತಮ ಫಲಿತಾಂಶ ಕಂಡುಬಂದಿದ್ದು, ಮೂತ್ರವಿಸರ್ಜನೆ ಸರಿಯಾಗಿದೆ. ಎರಡು ತಿಂಗಳ ನಂತರದ ಪರಿಶೀಲನೆಯಲ್ಲಿಯೂ ಸಮಸ್ಯೆ ಮತ್ತೆ ಕಾಣಿಸಿಕೊಳ್ಳಲಿಲ್ಲ.
ಈ ಕುರಿತು ಮಾತನಾಡಿದ ಆಸ್ಪತ್ರೆಯ ನಿರ್ದೇಶಕ ಶ್ರೀ ಸಂದೀಪ್ ಪಟೇಲ್ ಬಿ. ಜೆ. ಅವರು, “ಈ ಯಶಸ್ವಿ ಚಿಕಿತ್ಸೆಯು ಮಣಿಪಾಲ್ ಆಸ್ಪತ್ರೆಯ ನುರಿತ ವೈದ್ಯಕೀಯ ತಂಡ ಮತ್ತು ಆಧುನಿಕ ಸೌಲಭ್ಯಗಳಿಗೆ ಸಾಕ್ಷಿ. ಜೀವಕೋಶಗಳ ಸಂಗ್ರಹದಿಂದ ಹಿಡಿದು, ಅತ್ಯಾಧುನಿಕ ಪ್ರಯೋಗಾಲಯದಲ್ಲಿ ಅವುಗಳ ಸಿದ್ಧತೆ ಹಾಗೂ ಯಾವುದೇ ದೊಡ್ಡ ಶಸ್ತ್ರಚಿಕಿತ್ಸೆ ಇಲ್ಲದೆ ಚಿಕಿತ್ಸೆ ನೀಡುವವರೆಗಿನ ಎಲ್ಲಾ ಹಂತಗಳನ್ನು ನಮ್ಮ ಆಸ್ಪತ್ರೆಯು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತದೆ.” ಎಂದು ಹೇಳಿದರು.
ಮುಖ್ಯ ವೈದ್ಯಕೀಯ ಸೇವೆಗಳ ಮುಖ್ಯಸ್ಥರಾದ ಡಾ. ಉಪೇಂದ್ರ ಶೆಣೈ ಅವರು, “ಮೂತ್ರನಾಳದ ಸಮಸ್ಯೆ ಪದೇ ಪದೇ ಕಾಣಿಸಿಕೊಳ್ಳುವುದು ರೋಗಿಗಳಿಗೆ ದೈಹಿಕ ಮತ್ತು ಮಾನಸಿಕ ಕಿರಿಕಿರಿ ಉಂಟುಮಾಡುತ್ತದೆ. ಇಂತಹವರಿಗೆ 'ಸ್ಟೆಮ್ ಸೆಲ್' ಚಿಕಿತ್ಸೆಯು ನೈಸರ್ಗಿಕವಾಗಿ ಗುಣಮುಖರಾಗಲು ಸಹಾಯ ಮಾಡುತ್ತದೆ. ರೋಗಿಗಳಿಗೆ ನೋವಿಲ್ಲದ, ಅತ್ಯಾಧುನಿಕ ಚಿಕಿತ್ಸೆ ನೀಡಿ ಅವರು ಬೇಗನೆ ತಮ್ಮ ದೈನಂದಿನ ಕೆಲಸಗಳಿಗೆ ಮರಳುವಂತೆ ಮಾಡುವುದೇ ಮಣಿಪಾಲ್ ಆಸ್ಪತ್ರೆಯ ಮುಖ್ಯ ಗುರಿ.” ಎಂದು ಹೇಳಿದರು.
ಇಂತಹ ಆಧುನಿಕ ಮತ್ತು ಸರಳ ಚಿಕಿತ್ಸೆಗಳ ಮೂಲಕ ಮಣಿಪಾಲ್ ಆಸ್ಪತ್ರೆಯು ರೋಗಿಗಳ ಹಿತದೃಷ್ಟಿಯಿಂದ ನಿರಂತರವಾಗಿ ಹೊಸ ವೈದ್ಯಕೀಯ ಸೇವೆಗಳನ್ನು ನೀಡುತ್ತಿದೆ.