ಹಾಲು ಕರೆಯುವ ಸ್ಪರ್ಧೆ  
ಮೈಸೂರು

24ರಂದು ಹಾಲು ಕರೆಯುವ ಸ್ಪರ್ಧೆ

ಅವಿನಾಶ್ ಜೈನಹಳ್ಳಿ
ಮೈಸೂರು: ನಗರದ ದೇವರಾಜ ಮೊಹಲ್ಲಾ ಕಾಟಪ್ಪ ಗರಡಿ ರಸ್ತೆಯಲ್ಲಿನ ಮೈಸೂರು ನಗರ ಗೋಪಾಲಕರ ಸಂಘದ ವತಿಯಿಂದ ಜ.24 ಮತ್ತು 25ರಂದು ಜೆ.ಕೆ. ಮೈದಾನದಲ್ಲಿ ಹಾಲು ಕರೆಯುವ ಸ್ಪರ್ಧೆ ಹಾಗೂ ಬಹುಮಾನ ವಿತರಣಾ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಹಾಗೂ ಪಾಲಿಕೆ ಮಾಜಿ ಸದಸ್ಯ ಡಿ.ನಾಗಭೂಷಣ್ ತಿಳಿಸಿದರು.
ಎರಡು ದಿನವೂ ಬೆಳಗ್ಗೆ 6.30 ಹಾಗೂ ಸಂಜೆ 5.30ಕ್ಕೆ ಸ್ಪರ್ಧೆ ನಡೆಯಲಿದೆ. ಮೊದಲನೇ ಬಹುಮಾನವಾಗಿ 1.50 ಲಕ್ಷ ರೂ., 2ನೇ ಬಹುಮಾನವಾಗಿ 1 ಲಕ್ಷ ರೂ., 3ನೇ ಬಹುಮಾನವಾಗಿ 75 ಸಾವಿರ ರೂ., 4ನೇ ಬಹುಮಾನವಾಗಿ 50 ಸಾವಿರ ರೂ. ಹಾಗೂ 5ನೇ ಬಹುಮಾನವಾಗಿ 25 ಸಾವಿರ ರೂ.ಗಳಲ್ಲದೆ ಎಲ್ಲ ವಿಜೇತರಿಗೆ ಟ್ರೋಫಿ ಸಹ ನೀಡಲಾಗುವುದು. ಸ್ಪರ್ಧೆಯಲ್ಲಿ ಮೈಸೂರು ಜಿಲ್ಲೆ ಮಾತ್ರವಲ್ಲದೆ, ಬೆಂಗಳೂರು, ಕೋಲಾರ, ದೇವನಹಳ್ಳಿ, ಆನೇಕಲ್ ಹಾಗೂ ಹಾಸನ ಮೊದಲಾದ ಕಡೆಗಳಿಂದಲೂ ಗೋಪಾಲಕರು ತಮ್ಮ ಹಸುಗಳನ್ನು ಕರೆತರುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜ.25ರಂದು ಮಧ್ಯಾಹ್ನ 12ಕ್ಕೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿಂದ ಕೃಷ್ಣನ ಮೂರ್ತಿಯನ್ನೊಳಗೊಂಡ ಭವ್ಯ ಮೆರವಣಿಗೆ ಹೊರಟು ನಾರಾಯಣ ಶಾಸ್ತ್ರಿ ರಸ್ತೆಯ ಜೆ.ಕೆ ಮೈದಾನ ತಲುಪಲಿದೆ. ಸಂಜೆ 6.30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ವಿಜೇತ ಹಸುಗಳ ಮಾಲೀಕರಿಗೆ ಬಹುಮಾನ ವಿತರಿಸಲಾಗುವುದು. ಶಾಸಕ ಕೆ.ಹರೀಶ್‌ಗೌಡ ಅಧ್ಯಕ್ಷತೆ ವಹಿಸುವರು, ಬಸವರಾಜು, ಎಸ್.ಕೆ.ದಿನೇಶ್, ಚೇತನರಾಜ್, ರಾಕೇಶ್ ಪಾಪಣ್ಣ, ಡಾ.ಜ್ಯೋತಿ ಉಮೇಶ್ ಇನ್ನಿತರರು ವೇದಿಕೆಯಲ್ಲಿರುವರು. ಮಧ್ಯಾಹ್ನದ ಮೆರವಣಿಗೆಯನ್ನು ಡಾ.ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಆಯೋಜಕರಾದ ಗೋಪಿ, ಬಸವರಾಜ್, ಶೇಖರ್, ಮಹದೇವ್, ಶಿವಣ್ಣ, ಮಂಜುನಾಥ್ ಹಾಜರಿದ್ದರು.