- ಪ್ರತಿನಿತ್ಯ 9.27 ಲಕ್ಷ ಲೀಟರ್ ಹಾಲು ಉತ್ಪಾದನೆ
- ಪ್ರಸಕ್ತ ಸಾಲಿನಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ
ಪಶುಪಾಲಕರಿಗೆ ದೊರೆಯುತ್ತಿರುವ ಉತ್ತಮ ಸೌಲಭ್ಯಗಳ ಪರಿಣಾಮವಾಗಿ ಜಿಲ್ಲೆಯು ಹಾಲು ಉತ್ಪಾದನೆಯಲ್ಲಿ ದಾಖಲೆ ನಿರ್ಮಾಣ ಮಾಡಿದ್ದು, ಜಿಲ್ಲೆಯಲ್ಲಿ ಕ್ಷೀರಕ್ರಾಂತಿ ಪ್ರಾರಂಭವಾಗಿದೆ.
ಜಿಲ್ಲೆಯಲ್ಲಿ ಹಲವಾರು ರೈತರು ಜಾನುವಾರುಗಳನ್ನು ಸಾಕಾಣೆ ಮಾಡುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ರೈತರಿಗೆ ಹಲವಾರು ಸವಲತ್ತುಗಳನ್ನು ಒದಗಿಸುತ್ತಿರುವ ಪರಿಣಾಮ ಸಾಕಷ್ಟು ರೈತರು ಪಶುಸಂಗೋಪನೆಯ ಕಡೆಗೆ ಒಲವು ತೋರಲು ಪ್ರಾರಂಭಿಸಿದ್ದಾರೆ.
ದಾಖಲೆ ನಿರ್ಮಾಣ: ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ ಪ್ರತಿನಿತ್ಯ ಸರಾಸರಿ 6.90 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಲಾಗಿತ್ತು. 2025-26ನೇ ಸಾಲಿನಲ್ಲಿ ಪ್ರತಿನಿತ್ಯ ಸರಾಸರಿ 9.27 ಲಕ್ಷ ಲೀಟರ್ ದಾಖಲೆಯ ಪ್ರಮಾಣದ ಹಾಲು ಉತ್ಪಾದನೆಯಾಗಿದೆ. ಹಿಂದಿನ ಸಾಲಿಗೆ ಹೋಲಿಕೆ ಮಾಡಿದರೆ 2.37 ಲಕ್ಷ ಲೀಟರ್‌ನಷ್ಟು ಹೆಚ್ಚುವರಿ ಹಾಲು ಉತ್ಪಾದನೆಯಾಗಿದೆ. 2026-27ನೇ ಸಾಲಿನಲ್ಲಿ ಹಾಲಿನ ಉತ್ಪಾದನೆ ಪ್ರಮಾಣ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.
ಹೆಚ್ಚಳಕ್ಕೆ ಕಾರಣವೇನು?: ಜಿಲ್ಲೆಯಲ್ಲಿ ಹಾಲಿನ ಪ್ರಮಾಣ ಉತ್ಪಾದನೆಯಾಗಲು ಹಲವಾರು ಕಾರಣಗಳು ಇವೆ. ಜಾನುವಾರುಗಳ ರೋಗಳನ್ನು ತಡೆಗಟ್ಟಲು ಇಲಾಖಾ ಅಧಿಕಾರಿ, ಸಿಬ್ಬಂದಿಗಳು ರೈತರ ಮನೆಬಾಗಿಲಿಗೆ ತೆರಳಿ ಲಸಿಕೆ ನೀಡುತ್ತಿದ್ದು, ಇದರ ಪರಿಣಾಮ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಯಿಲೆಯ ಪ್ರಮಾಣ ಇಳಿಮುಖವಾಗಿ ಉತ್ತಮ ಪ್ರಮಾಣದಲ್ಲಿ ಹಾಲು ನೀಡುತ್ತಿವೆ. ಜಂತುನಾಶಕ ತಡೆಯಲು ಖನಿಜ ಮಿಶ್ರಣಗಳನ್ನು ನಿಯಮಿತವಾಗಿ ವಿತರಣೆ ಮಾಡಲಾಗುತ್ತಿದೆ.
ರೈತರಿಗೆ ಉಚಿತವಾಗಿ ಮೇವಿನ ಕಿರುಪೊಟ್ಟಣಗಳ ವಿತರಣೆ ಮಾಡಲಾಗುತ್ತಿದೆ. ಶೇ.50 ಸಬ್ಸಿಡಿ ದರದಲ್ಲಿ ಮೇವು ಕತ್ತರಿಸುವ ಯಂತ್ರ ಹಾಗೂ ರಬ್ಬರ್ ನೆಲಹಾಸುಗಳ ವಿತರಣೆ ಮಾಡಲಾಗುತ್ತಿದೆ. ರೈತರ ಮನೆ ಬಾಗಿಲಿಗೆ ಪಶುವೈದ್ಯಕೀಯ ಸೇವೆ ಒದಗಿಸಲು 10 ಸಂಚಾರಿ ಪಶುಚಿಕಿತ್ಸಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಉತ್ತಮ ಕೃತಕಗರ್ಭಧಾರಣೆ ಮುಖಾಂತರ ಹೆಚ್ಚು ಇಳುವರಿ ನೀಡುವ ಉತ್ತಮ ರಾಸುಗಳ ಕರುಗಳ ಜನನವಾಗುತ್ತಿದೆ. ಮತ್ತಷ್ಟು ಸೇವೆ ಒದಗಿಸುವ ಉದ್ದೇಶದಿಂದ ಜಿಲ್ಲೆಗೆ 31 ನೂತನ ಪಶುವೈದ್ಯಕೀಯ ಇಲಾಖೆಯ ಕಟ್ಟಡ, 9 ಪ್ರಯೋಗಾಲಯಗಳು, 3 ಪಾಲಿಕ್ಲಿನಿಕ್, 1 ತರಬೇತಿ ಕೇಂದ್ರ, ಹೆಚ್ಚುವರಿಯಾಗಿ 17 ನೂತನ ಪಶುವೈದ್ಯ ಸಂಸ್ಥೆಗಳು ಮಂಜೂರಾಗಿದೆ. ಹೊಸದಾಗಿ ಗುತ್ತಿಗೆ ಮೇರೆಗೆ 12 ಪಶುವೈದ್ಯರು ಮತ್ತು 175 ಡಿ.ದರ್ಜೆ ನೌಕರರ ನೇಮಕಾತಿ ಮಾಡಿ ಅವರ ಸೇವೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಜಾನುವಾರುಗಳ ವಿವರ: ಜಿಲ್ಲೆಯಲ್ಲಿ ದನ, ಎಮ್ಮೆ, ಕುರಿ, ಮೇಕೆ, ಹಂದಿ ಸೇರಿದಂತೆ ಒಟ್ಟು 9,33,298 ಜಾನುವಾರುಗಳು ಇವೆ. ಮೈಸೂರು ತಾಲೂಕಿನಲ್ಲಿ 1,45,809 ನಂಜನಗೂಡಿನಲ್ಲಿ 1,67,465, ಕೆ.ಆರ್. ನಗರದಲ್ಲಿ 1,32,613, ಹುಣಸೂರಿನಲ್ಲಿ 1,16,616, ಪಿರಿಯಾಪಟ್ಟಣ 1,16,365, ತಿ.ನರಸೀಪುರದಲ್ಲಿ 1,18,199, ಎಚ್.ಡಿ. ಕೋಟೆಯಲ್ಲಿ 91,032, ಸರಗೂರು ತಾಲೂಕಿನಲ್ಲಿ 45,199 ಜಾನುವಾರುಗಳು ಇವೆ.
ಮೇವಿಗಿಲ್ಲ ಕೊರತೆ: ಬೇಸಿಗೆ ಸಂದರ್ಭದಲ್ಲಿ ಮೇವಿನ ಕೊರತೆ ಕಂಡು ಬಂದರೆ ಹಾಲಿನ ಉತ್ಪಾದನೆಯ ಪ್ರಮಾಣ ತೀವ್ರವಾಗಿ ಇಳಿಮುಖವಾಗುತ್ತದೆ. ಈ ರೀತಿಯ ಸಮಸ್ಯೆ ಎದುರಾಗಬಾರದು ಎಂಬ ಉದ್ದೇಶದಿಂದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಅಗತ್ಯ ಕ್ರಮವನ್ನು ವಹಿಸಿದೆ. ಈ ಬಾರಿ ಬೇಸಿಗೆಗೆ ಅಗತ್ಯವಾದಷ್ಟು ಮೇವು ದಾಸ್ತಾನು ಇದೆ. ಒಂದುವೇಳೆ ಪರಿಸ್ಥಿತಿ ಕೈ ಮೇರಿ ಹೋದರೆ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಕೈಗೊಳ್ಳಲು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಿದ್ಧತೆ ಕೈಗೊಂಡಿದೆ. ರೈತರು ಸಾಕಷ್ಟು ಪ್ರಮಾಣದಲ್ಲಿ ಭತ್ತ, ರಾಗಿ ಹುಲ್ಲು, ಜೋಳದ ಕಡ್ಡಿಯನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಇದರ ಜತೆಗೆ ರೈತರಿಗೆ ಈ ಹಿಂದೆ ನೀಡಿದ್ದ ಮೇವಿನ ಮರದ ಸಸಿಗಳನ್ನು ರೈತರು ತಮ್ಮ ಹೊಲದ ಬದುಗಳಲ್ಲಿ ಬೆಳೆಸಿದ್ದು, ಈ ಸಸಿಗಳು ಮರಗಳಾಗಿ ಬೆಳೆದು ನಿಂತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಸಿ ಮೇವು ಸಹ ಜಾನುವಾರುಗಳಿಗೆ ದೊರೆಯಲಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೈತರಿಗೆ ಇಲಾಖೆಯಿಂದ ಮೇವಿನ 1500 ಮಿನಿ ಕಿಟ್ ವಿತರಣೆ ಮಾಡಲಾಗಿದೆ. ಜಾನುವಾರುಗಳಿಗೆ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಎಂಬ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದ್ದು, ಈ ತೊಟ್ಟಿಗಳಿಗೆ ನೀರು ತುಂಬಿಸಿ ಜಾನುವಾರುಗಳಿಗೆ ನೀರು ಒದಗಿಸುವ ಕಾರ್ಯ ನಡೆಯುತ್ತಿದೆ.
ರೈತರಿಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಹಲವಾರು ಸವಲತ್ತುಗಳನ್ನು ನೀಡಲಾಗುತ್ತಿದೆ. ಇದರ ಪರಿಣಾಮ ರೈತರು ಜಾನುವಾರುಗಳ ಸಾಕಾಣಿಕೆಗೆ ಹೆಚ್ಚಿನ ಆಸಕ್ತಿ ತೋರಲು ಪ್ರಾರಂಭಿಸಿದ್ದಾರೆ. ಹೀಗಾಗಿ ಕಳೆದ ಸಾಲಿನಲ್ಲಿ ದಾಖಲೆಯ ಪ್ರಮಾಣದಲ್ಲಿ ಪ್ರತಿನಿತ್ಯ ಸರಾಸರಿ 9.27 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಲಾಗಿತ್ತು. ಈ ಬಾರಿ ಅದಕ್ಕಿಂತ ಹೆಚ್ಚು ಹಾಲು ಉತ್ಪಾದನೆಯಾಗುವ ನಿರೀಕ್ಷೆಯನ್ನು ಹೊಂದಿದ್ದೇವೆ.
ಸಿ.ನಾಗರಾಜು, ಉಪ ನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ