ಆಯಿಷ್‌ನಲ್ಲಿ ಕ್ಷೇಮ ಕೇಂದ್ರವನ್ನು ಪ್ರೇರಣಾ ಆಸ್ಪತ್ರೆಯ ನಿರ್ದೇಶಕ ಡಾ. ಅಭಿಜಿತ್ ರಮಣ ಹೊನ್ನಗೊಡು ಉದ್ಘಾಟಿಸಿದರು. ಕ್ಷೇಮ ಕೇಂದ್ರದ ಉಸ್ತುವಾರಿ ಡಾ. ಋಷಿ ಇದ್ದರು.
ಮೈಸೂರು: ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್) ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಮಾನಸಿಕ ಕ್ಷೇಮ ಬಲಪಡಿಸುವ ಉದ್ದೇಶದಿಂದ ಸಂಸ್ಥೆಯ ಆವರಣದಲ್ಲಿ ಸುಸಜ್ಜಿತ ಕ್ಷೇಮ ಕೇಂದ್ರ ಸ್ಥಾಪಿಸಿದೆ.
ಈ ಕೇಂದ್ರದ ಮೂಲಕ ಅರ್ಹ ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ನೆರವಿನಿಂದ ಮಾನಸಿಕ ಮೌಲ್ಯಮಾಪನ, ಆಪ್ತ ಸಮಾಲೋಚನೆ ಹಾಗೂ ವಿವಿಧ ಚಿಕಿತ್ಸಾ ವಿಧಾನಗಳನ್ನು ಒಳಗೊಂಡ ಸಮಗ್ರ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸಲಾಗುವುದು. ಜತೆಗೆ ಮನೋವೈದ್ಯಕೀಯ ಸಮಾಲೋಚನೆಯನ್ನೂ ನೀಡುವ ಮೂಲಕ ಮಾನಸಿಕ ಆರೋಗ್ಯದತ್ತ ಸಮಗ್ರ ದೃಷ್ಟಿಕೋನವನ್ನು ಕೇಂದ್ರ ಹೊಂದಿದೆ.
ಪ್ರೇರಣಾ ಆಸ್ಪತ್ರೆ ಮತ್ತು ನ್ಯೂರೋಕೇರ್‌ನ ನಿರ್ದೇಶಕ, ಹಿರಿಯ ನರಮನೋವೈದ್ಯ ಡಾ. ಅಭಿಜಿತ್ ರಮಣ ಹೊನ್ನಗೊಡು ಅವರು ಕೇಂದ್ರವನ್ನು ಉದ್ಘಾಟಿಸಿದರು. ಈ ಕೇಂದ್ರದಲ್ಲಿ ನಿಯಮಿತವಾಗಿ ಮನೋವೈದ್ಯಕೀಯ ಸಮಾಲೋಚನಾ ಸೇವೆಗಳನ್ನು ನೀಡಲು ಅವರು ಒಪ್ಪಿಗೆ ಸೂಚಿಸಿದ್ದು, ಇದರೊಂದಿಗೆ ಆಯಿಷ್‌ನ ಮಾನಸಿಕ ಆರೋಗ್ಯ ಸೇವಾ ವ್ಯವಸ್ಥೆ ಮತ್ತಷ್ಟು ಬಲಗೊಂಡಿದೆ.
ಕ್ಷೇಮ ಕೇಂದ್ರ ಸ್ಥಾಪನೆಯೊಂದಿಗೆ ಆಯಿಷ್‌ನ ಕ್ಲಿನಿಕಲ್ ಸೈಕಾಲಜಿ ವಿಭಾಗವು ರೋಗಿಗಳು, ಪಾಲಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಲ್ಲಿ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಅಕ್ಟೋಬರ್ ತಿಂಗಳಲ್ಲಿ ಒಂದು ತಿಂಗಳ ಕಾಲ ವಿವಿಧ ಜಾಗೃತಿ ಕಾರ್ಯಕ್ರಮಗಳು, ಸಾಮರ್ಥ್ಯ ವೃದ್ಧಿ ಹಾಗೂ ಭಾವನಾತ್ಮಕ ಸ್ಥೈರ್ಯವನ್ನು ಉತ್ತೇಜಿಸುವ ಚಟುವಟಿಕೆಗಳನ್ನು ನಡೆಸಲಾಯಿತು.
ಈ ಸಂದರ್ಭ ವಿದ್ಯಾರ್ಥಿಗಳಿಗಾಗಿ ಮಾನಸಿಕ ಆರೋಗ್ಯ ವಿಷಯದ ಚಿತ್ರಕಲೆ ಸ್ಪರ್ಧೆ, ಸಿಬ್ಬಂದಿ ಹಾಗೂ ಪೋಷಕರಿಗಾಗಿ ಒತ್ತಡ ನಿರ್ವಹಣಾ ಕಾರ್ಯಾಗಾರಗಳನ್ನು ಆಯೋಜಿಸಲಾಗಿತ್ತು. ಅಲ್ಲದೆ, ಸೆಪ್ಟೆಂಬರ್‌ನಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನದ ಅಂಗವಾಗಿ ಸ್ವಯಂ-ಹಾನಿ ತಡೆಗಟ್ಟುವಿಕೆ ಹಾಗೂ ಹೊಂದಿಕೊಳ್ಳುವ (ಅಡಾಪ್ಟಿವ್) ಕೋಪಿಂಗ್ ತಂತ್ರಗಳ ಕುರಿತು ವಿಶೇಷ ಕಾರ್ಯಾಗಾರ ನಡೆಸಲಾಗಿದೆ.
ಕ್ಲಿನಿಕಲ್ ಸೈಕಾಲಜಿ ವಿಭಾಗದ ಮುಖ್ಯಸ್ಥರು ಹಾಗೂ ಕ್ಷೇಮ ಕೇಂದ್ರದ ಉಸ್ತುವಾರಿ ಡಾ. ಋಷಿ ಮಾತನಾಡಿ, ಈ ಉಪಕ್ರಮವು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹಾಗೂ ಶಿಕ್ಷಣ ಸಚಿವಾಲಯದ ಮಾರ್ಗಸೂಚಿಗಳಿಗೆ ಅನುಗುಣವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾಲೋಚನಾ ಸೇವೆಗಳನ್ನು ಅಳವಡಿಸಿಕೊಳ್ಳುವುದು, ಮಾನಸಿಕ ಸಮಸ್ಯೆಗಳ ಕುರಿತ ಸಾಮಾಜಿಕ ಕಳಂಕವನ್ನು ಕಡಿಮೆ ಮಾಡುವುದು ಹಾಗೂ ಆರಂಭಿಕ ಹಂತದಲ್ಲೇ ಸಮಸ್ಯೆಗಳನ್ನು ಗುರುತಿಸಿ ಚಿಕಿತ್ಸೆ ನೀಡುವುದು ಕೇಂದ್ರದ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ಆಯಿಷ್ ನಿರ್ದೇಶಕಿ ಡಾ. ಎಂ. ಪುಷ್ಪಾವತಿ ಅವರು ಈ ಎಲ್ಲಾ ಚಟುವಟಿಕೆಗಳಿಗೆ ನಿರಂತರ ಬೆಂಬಲ ನೀಡುತ್ತಿದ್ದು, ಸಂಸ್ಥೆಯ ಸಮುದಾಯಕ್ಕೆ ಸ್ಫೂರ್ತಿಯಾಗಿದ್ದಾರೆ ಎಂದು ಅವರು ತಿಳಿಸಿದರು.