ಕೊಪ್ಪ ಗ್ರಾಮದಲ್ಲಿ ನಡೆದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಕೆ.ಮಹದೇವ್ ಮಾತನಾಡಿದರು. ಅಣ್ಣಯ್ಯ ಶೆಟ್ಟಿ, ಸಿ.ಎಸ್.ರೇಣುಕಸ್ವಾಮಿ, ಚಂದ್ರಶೇಖರ್, ಶಿವಣ್ಣ, ರವಿ ಇದ್ದರು. 
ಮೈಸೂರು

ಸ್ಥಳೀಯ ಸಂಸ್ಥೆ ಚುನಾವಣೆಗೆ ಪಕ್ಷ ಬಲಪಡಿಸಿ

ಲಲಾಟಾಕ್ಷ ಎಸ್
ಬೈಲುಕುಪ್ಪೆ: ಮತದಾರರ ತೀರ್ಪಿಗೆ ನಾನು ಬದ್ಧನಾಗಿದ್ದು ಪಕ್ಷದ ಕಾರ್ಯಕರ್ತರಿಗೆ ನೋವುಂಟು ಮಾಡಿದರೆ ಬೀದಿಗಿಳಿದು ಹೋರಾಟ ಮಾಡಲು ಸಿದ್ಧನಿದ್ದೇನೆ ಎಂದು ಮಾಜಿ ಶಾಸಕ ಕೆ.ಮಹದೇವ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಕೊಪ್ಪದ ಖಾಸಗಿ ಹೋಟೆಲ್ ಆವರಣದಲ್ಲಿ ಬುಧವಾರ ನಡೆದ ಪಂಚಾಯಿತಿ ಮಟ್ಟದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನಾನು ಮೂರು ಚುನಾವಣೆಯಲ್ಲಿ ಸೋತು ನಾಲ್ಕನೇ ಚುನಾವಣೆಯಲ್ಲಿ ಗೆದ್ದೆ. ತಾಲೂಕಿನ 350 ಹಳ್ಳಿಗಳಿಗೂ ಕೋವಿಡ್ ನಡುವೆಯೂ ಭೇಟಿ ನೀಡಿ ಎರಡೇ ವರ್ಷದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಆದರೆ, ಸೋಲಿಗೆ ಹತಾಶನಾಗಿ ಕೂರದೆ ಕಾರ್ಯಕರ್ತರ ನಡುವೆ ಕೆಲಸ ಮಾಡಲು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿದ್ದು ತಳಮಟ್ಟದ ಕಾರ್ಯಕರ್ತರು ಸಕ್ರಿಯರಾಗಿ ಇಂದಿನಿಂದಲೇ ಪಕ್ಷ ಬಲಪಡಿಸಲು ಮುಂದಾಗಬೇಕು. ಗ್ರಾಮ ಮಟ್ಟದಲ್ಲಿ ಇರುವ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ತಾವೇ ಸರಿಪಡಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಕೊಪ್ಪ ಗ್ರಾಮ ಪಂಚಾಯಿತಿ ಮಟ್ಟದ ಅಧ್ಯಕ್ಷರನ್ನಾಗಿ ಸಿ.ಎಸ್.ರೇಣುಕಾ ಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷರನ್ನಾಗಿ ದೊಡ್ಡ ಹೊಸೂರು ಶಫಿವುಲ್ಲಾ ಖಾನ್ ಅವರನ್ನು ಆಯ್ಕೆ ಮಾಡಿ ಹೆಸರನ್ನು ಸೂಚಿಸಿದರು. ಕೊಪ್ಪ ಗ್ರಾಮದ ಮಂಜು, ಪ್ರಭುಸ್ವಾಮಿ ಪಕ್ಷಕ್ಕೆ ಸೇರ್ಪಡೆಗೊಂಡರು. ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಸ್.ರೇಣುಕಾ ಸ್ವಾಮಿ, ಮುತ್ತಿನ ಮುಳಸೋಗೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ರವಿ, ಮರೂರು ಶಿವಣ್ಣ, ಸುರೇಶ್, ಚಂದ್ರು, ನಟೇಶ್, ಶೇಖರ್, ಮಹಮದ್ ಹೂಷಿ, ಸಬೀರ್ ಸಾಬ್, ಸಲೀಂ, ಕಾರ್ಯಕರ್ತರು ಇದ್ದರು.