ನಾರ್ಕೋ ಸಮನ್ವಯ ಕೇಂದ್ರದ ಮೈಸೂರು ಜಿಲ್ಲಾ ಸಮಿತಿ ಸಭೆ ನಡೆಯಿತು.
- ಮಾದಕ ವಸ್ತುಗಳ ತಡೆಗೆ ಕಟ್ಟುನಿಟ್ಟಿನ ಕ್ರಮ
- ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಗಳ ಸಭೆ
- ವಿದ್ಯಾರ್ಥಿಗಳ ಮೇಲೆ ನಿಗಾ ಇಡಲು ನಿರ್ದೇಶನ
ಮೈಸೂರು: ನಾರ್ಕೋಟಿಕ್ ಡ್ರಗ್ಸ್ ಹಾಗೂ ಮಾದಕ ವಸ್ತುಗಳ ಮಾರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಾದಕ ವಸ್ತುಗಳ ಸರಬರಾಜನ್ನು ತಡೆಗಟ್ಟಲು ಹಾಗೂ ಮಾದಕ ವಸ್ತುಗಳ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲ ಅಧಿಕಾರಿಗಳು ಕೈ ಜೋಡಿಸಬೇಕು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾಗೇಶ್ ಮನವಿ ಮಾಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನಾರ್ಕೋ ಸಮನ್ವಯ ಕೇಂದ್ರದ ಜಿಲ್ಲಾ ಜಿಲ್ಲಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಹಿಂದೆ ಮದ್ಯಪಾನವನ್ನು ಊರಿನ ಹೊರಭಾಗದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇಂದು ಊರಿನ ಒಳಗೆ ಮಾರಾಟ ಮಾಡುತ್ತಿದ್ದಾರೆ. ನಾರ್ಕೋಟಿಕ್ ಡ್ರಗ್ಸ್ ಹಾಗೂ ಮಾದಕ ವಸ್ತುಗಳ ಮಾರಾಟ ಜಾಲವನ್ನು ಮಟ್ಟ ಹಾಕದಿದ್ದರೆ, ಮುಂದಿನ ದಿನಗಳಲ್ಲಿ ನಮ್ಮ ಮನೆಗಳನ್ನೇ ಆವರಿಸಬಹುದು. ಸಾರ್ವಜನಿಕರು ಇದರ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಂಡು ಎಚ್ಚರಿಕೆಯಿಂದ ಇರಬೇಕು ಎಂದರು.
ಮಾದಕ ವಸ್ತುಗಳ ಸೇವನೆ ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚಿದ್ದು, ಅವರ ಮೇಲೆ ಪ್ರಭಾವ ಬೀರುತ್ತಿರುವುದರಿಂದ ಕಾಲೇಜು ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕಾಲೇಜುಗಳ ಸುತ್ತಮುತ್ತ ಸಿಸಿ ಟಿವಿಗಳನ್ನು ಅಳವಡಿಸಿ ವಿದ್ಯಾರ್ಥಿಗಳ ಚಲನವಲನಗಳ ಬಗ್ಗೆ ನಿಗಾವಹಿಸಬೇಕು. ಕಾಲೇಜುಗಳ ಸುತ್ತ ಮುತ್ತ ಮಾದಕ ವಸ್ತುಗಳಿಂದಾಗುವ ದುಷ್ಟಪರಿಣಾಮಗಳ ಬಗ್ಗೆ ಮಾಹಿತಿ ಇರುವ ಬ್ಯಾನರ್‌ಗಳನ್ನು ಅಳವಡಿಸಬೇಕು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ನಿಲಯಗಳ ಸುತ್ತಮುತ್ತ ಸಿ.ಸಿ ಟಿವಿಯನ್ನು ಅಳವಡಿಸಿ ಅವುಗಳನ್ನು ಪರಿಶೀಲಿಸಬೇಕು. ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಹಾಸ್ಟೆಲ್ಗಳ ಸುತ್ತ ಯಾರಾದರು ಸಂಶಯಾಸ್ಪದವಾಗಿ ಓಡಾಡುತ್ತಿದ್ದಾರೆ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಹಾಸ್ಟೆಲ್ ವಿಧ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿರುವ ಅರಿವು ಕಾರ್ಯಕ್ರಮಗಳ ವರದಿಯನ್ನು ಸಲ್ಲಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ನಿಮ್ಮ ವ್ಯಾಪಿಗೆ ಬರುವಂತಹ ಎಲ್ಲ ಆಸ್ಪತ್ರೆಗಳಿಗೂ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಆಸ್ಪತ್ರೆಯ ವತಿಯಿಂದ ಮಾದಕ ವಸ್ತುಗಳ ನಿಯಂತ್ರಣದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಅರಿವು ಮೂಡಿಸಬೇಕು ಹಾಗೂ ಔಷಧ ನಿಯಂತ್ರಣಾಧಿಕಾರಿಗಳು ಮೆಡಿಕಲ್ ಸ್ಟೋರ್‌ಗಳಲ್ಲಿ ಕಾನೂನು ಬಾಹಿರವಾಗಿ ಡ್ರಗ್ಸ್ ಸರಬರಾಜು ಆಗದಂತೆ ಹಾಗೂ ಡ್ರಗ್ಸ್ ನಿಯಂತ್ರಣದ ಬಗ್ಗೆ ಕ್ರಮ ವಹಿಸಿ ನಿಮ್ಮ ವ್ಯಾಪ್ತಿಗೆ ಬರುವ ಮೆಡಿಕಲ್ ಸ್ಟೋರ್‌ಗಳ ಪಟ್ಟಿ ಮಾಡಿಕೊಂಡು ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದು ಸೂಚಿಸಿದರು.
ಅರಣ್ಯ ಇಲಾಖೆ ಮತ್ತು ಕೃಷಿ ಇಲಾಖೆಯವರು ಕಾಡಂಚಿನ ಗ್ರಾಮಗಳು ಹಾಗೂ ಹಾಡಿಗಳಲ್ಲಿ ಗಾಂಜಾವನ್ನು ಬೆಳೆಯುತ್ತಿರುವ ಬಗ್ಗೆ ಪರಿಶೀಲನೆ ಮಾಡಿ ಮಾಹಿತಿಯನ್ನು ಪಡೆದುಕೊಂಡು ಪೊಲೀಸರಿಗೆ ವರದಿ ನೀಡಬೇಕು. ಹಾಡಿ ಪ್ರದೇಶಗಳ ಸಾರ್ವಜನಿಕರಲ್ಲಿ ಮಾದಕ ವಸ್ತುಗಳಿಂದಾಗುವ ದುಷ್ಟ ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದರು.
ಜಿಲ್ಲೆಯಲ್ಲಿ ಇರುವ ಕೇಂದ್ರ ಕಾರಾಗೃಹ ಹಾಗೂ ಉಪ ಕಾರಾಗೃಹಗಳಿಗೆ ಅನಿರೀಕ್ಷಿತ ಭೇಟಿ ನೀಡಬೇಕು. ಕಾರಗೃಹದಲ್ಲಿ ಇರುವ ಬಂಧಿಗಳಿಗೆ ಅರಿವು ಕಾರ್ಯಕ್ರಮಗಳನ್ನು ನಡೆಸಬೇಕು. ಮಾದಕ ವಸ್ತುಗಳು ಸರಬರಾಜು ಆಗದಂತೆ ಅಗತ್ಯ ಕ್ರಮ ವಹಿಸಬೇಕು. ಎನ್‌ಜಿಒ ಮುಖ್ಯಸ್ಥರುಗಳು ಮಾದಕ ವಸ್ತು ಸರಬರಾಜು ಆಗುತ್ತಿರುವ ಬಗ್ಗೆ ಮಾಹಿತಿ ದೊರೆತರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮಾದಕ ವಸ್ತುಗಳು ಸರಬರಾಜು ಆಗದಂತೆ ಕ್ರಮ ವಹಿಸಬೇಕು. ಸರಕು ಸಾಗಾಣಿಕೆ ಗೂಡ್ಸ್‌ಗಳನ್ನು ಸರಕು ಮತ್ತು ಸೇವಾ ತೆರಿಗೆ ಇಲಾಖೆಯವರು ಪಾರ್ಸಲ್ಗಳಲ್ಲಿ ಮಾದಕ ವಸ್ತುಗಳ ಸಾಗಾಣಿಕೆಯಾಗುತ್ತಿರುವುದರ ಬಗ್ಗೆ ಮಾಹಿತಿ ಕಂಡುಬಂದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ದಾಳಿ ನಡೆಸಿ ಅಗತ್ಯ ಕ್ರಮ ವಹಿಸಿ ವರದಿ ನೀಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಎಎಸ್‌ಐ ನಾಗರಾಜ್ ನಾಯಕ್, ಸೈಬರ್ ಕ್ರೈಂ ವಿಭಾಗದ ಮನೋಜ್ ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.