ಸರಗೂರು ತಾಲೂಕಿನ ಮಸಹಳ್ಳಿ ಗ್ರಾಮದಲ್ಲಿ ಬಹಿಷ್ಕಾರ ವಿಚಾರದಲ್ಲಿ ಅಧಿಕಾರಿಗಳ ಜೊತೆ ಗ್ರಾಮದ ಮುಖಂಡರ ಶಾಂತಿ ಸಭೆ ನಡೆಸಲಾಯಿತು. ಕಂದಾಯ ನಿರೀಕ್ಷಕ ರವಿಚಂದ್ರನ್, ಪಿಡಿಒ ಸಿದ್ದಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಮತ್ತು ಗ್ರಾಮದ ಮುಖಂಡರು ಇದ್ದರು.  
ಮೈಸೂರು

ಶಾಂತಿ, ಸೌಹಾರ್ದತೆ ಪಾಲನೆಗೆ ಮಹತ್ವ ನೀಡಬೇಕು

ಎ. ಆರ್. ರಘುರಾಮ
ಸರಗೂರು : ಸರಗೂರು: ತಾಲೂಕಿನ ಹಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸಹಳ್ಳಿ ಗ್ರಾಮದಲ್ಲಿ ಕೆಲ ವ್ಯಕ್ತಿಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಕಂದಾಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಯಿತು.
ಸಾಮಾಜಿಕ ಬಹಿಷ್ಕಾರದ ಹೆಸರಿನಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಗ್ರಾಮದ ಯಜಮಾನರು, ಮುಖಂಡರನ್ನು ಸಭೆಗೆ ಆಹ್ವಾನಿಸಿ, ಎಲ್ಲರ ಸಮ್ಮುಖದಲ್ಲಿ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ
ರಮೇಶ್, ಗ್ರಾಮದಲ್ಲಿ ಪ್ರತಿಯೊಬ್ಬರೂ ಕಾನೂನಿನ ಚೌಕಟ್ಟಿನಲ್ಲಿ ನಡೆದುಕೊಳ್ಳಬೇಕು. ಯಾವುದೇ ವ್ಯಕ್ತಿ ಅಥವಾ ಕುಟುಂಬವನ್ನು ಸಾಮಾಜಿಕವಾಗಿ ಬಹಿಷ್ಕರಿಸುವುದು, ಅವರ ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟುಮಾಡುವುದು ಸರಿಯಲ್ಲ. ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆ ಕಾಪಾಡಿಕೊಳ್ಳುವಂತೆ ಗ್ರಾಮಸ್ಥರಿಗೆ ಮನವಿ ಮಾಡಿದರು.
ಗ್ರಾಮದ ಯಜಮಾನರು ಹಾಗೂ ಮುಖಂಡರ ಅಭಿಪ್ರಾಯವನ್ನೂ ಈ ಸಂದರ್ಭ ಪಡೆದುಕೊಳ್ಳಲಾಯಿತು. ಯಾವುದೇ ಸಮಸ್ಯೆಗೆ ಪರಸ್ಪರ ಚರ್ಚೆಯ ಮೂಲಕ ಶಾಶ್ವತ ಪರಿಹಾರ ಕಂಡುಕೊಂಡು, ಗ್ರಾಮದಲ್ಲಿ ಸಾಮರಸ್ಯದ ವಾತಾವರಣ ನಿರ್ಮಾಣ ಮಾಡುವಲ್ಲಿ ಎಲ್ಲರೂ ಸಹಕಾರ ನೀಡಬೇಕೆಂದು ಸಲಹೆ ನೀಡಲಾಯಿತು.
ಕಂದಾಯ ನಿರೀಕ್ಷಕ ರವಿಚಂದ್ರನ್, ಪಿಡಿಒ ಸಿದ್ದಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಗ್ರಾಮದ ಯಜಮಾನರು, ಮುಖಂಡರು ಉಪಸ್ಥಿತರಿದ್ದರು.