ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ವಿಚಾರಸಂಕಿರಣವನ್ನು ಸಂತೋಷ್ ಗಜಾನನ ಭಟ್ ಉದ್ಘಾಟಿಸಿದರು. ಪಿ.ವಿಶ್ವನಾಥ್, ಶ್ರೀಶೈಲ ರಾಮಣ್ಣವರ್, ಕೆ.ಎಂ.ರಾಜಶೇಖರ್, ಡಾ.ಪಿ.ದೀಪು, ಎಂ.ಜೆ.ಇಂದುಮತಿ, ಡಾ.ಶ್ರೀದೇವಿ ಕೃಷ್ಣಾ ಇತರರು ಇದ್ದರು. 
ಮೈಸೂರು

ನ್ಯಾಯ ಪಡೆಯಲು ಮಧ್ಯಸ್ಥಿಕೆ ಸುಲಭ ಮಾರ್ಗ: ನ್ಯಾಯಾಧೀಶ ಸಂತೋಷ್ ಗಜಾನನ ಭಟ್

ಪ್ರಮುಖ ಮುಖ್ಯಾಂಶಗಳು

  • ಸಂವಿಧಾನ, ಕಾನೂನು ಬರುವ ಮುನ್ನವೇ ಗ್ರಾಮಾಂತರ ಮಟ್ಟದಲ್ಲಿಯೂ ನ್ಯಾಯ ಪಂಚಾಯಿತಿ ವ್ಯವಸ್ಥೆ ಇತ್ತು
  • ಇಂದು ನ್ಯಾಯ ಪಡೆಯುವ ಮಾರ್ಗಗಳು ಅತ್ಯಂತ ದುಬಾರಿ ಅನ್ನಿಸಿಕೊಳ್ಳುತ್ತಿರುವ ದಿನಗಳಲ್ಲಿ ಪರ್ಯಾಯ ಕಾನೂನು ವೇದಿಕೆಗಳು ಸುಲಭ ಮಾರ್ಗವಾಗಿವೆ
ಮೈಸೂರು:ನ್ಯಾಯ ಪಡೆಯುವ ಮಾರ್ಗಗಳು ಅತ್ಯಂತ ದುಬಾರಿ ಅನ್ನಿಸಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಪರ್ಯಾಯ ಕಾನೂನು ವೇದಿಕೆಗಳು ನ್ಯಾಯ ಪಡೆಯುವ ಮಾರ್ಗಗಳನ್ನು ಸುಲಭ ಮಾಡುತ್ತಿವೆ ಎಂದು ಕರ್ನಾಟಕ ಮಧ್ಯಸ್ಥಿಕೆ ಕೇಂದ್ರದ ನಿರ್ದೇಶಕ ಹಾಗೂ ಜಿಲ್ಲಾ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಹೇಳಿದರು.
ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಪ್ರೊ.ಪಿ.ಎಂ.ಚಿಕ್ಕಬೋರಯ್ಯ ಸ್ಮರಣಾರ್ಥ ಆಯೋಜಿಸಿದ್ದ ‘ಪರ್ಯಾಯ ವ್ಯಾಜ್ಯ ಪರಿಹಾರ: ನ್ಯಾಯವನ್ನು ಪಡೆಯುವ ಮಾರ್ಗ’ ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಇಡೀ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ಹಾಗೂ ಅಷ್ಟೇ ಶ್ರೇಷ್ಠ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತದ ಗ್ರಾಮಾಂತರ ಮಟ್ಟದಲ್ಲಿಯೂ ನ್ಯಾಯ ಪಂಚಾಯಿತಿ ವ್ಯವಸ್ಥೆಯನ್ನು ನಮ್ಮ ಹಿರಿಯರು ನಡೆಸಿಕೊಂಡು ಬಂದಿದ್ದರು ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ತಲೆದೋರುವ ಬಿಕ್ಕಟ್ಟು, ವ್ಯಾಜ್ಯಗಳನ್ನು ಸ್ಥಳೀಯ ಮಟ್ಟದಲ್ಲಿ ಮುಖಂಡರು ಪಂಚಾಯಿತಿ ನಡೆಸಿ ಶೀಘ್ರವಾಗಿ ನ್ಯಾಯ ತೀರ್ಮಾನ ಮಾಡುತ್ತಿದ್ದರು. ಈ ವ್ಯವಸ್ಥೆಯು ಚಾರಿತ್ರಿಕವಾಗಿ ಮಹತ್ವವಾಗಿತ್ತು ಎಂದರು.
ಪಂಚಾಯಿತಿಯ ಮುಖಂಡರು ಕೊಡುವ ತೀರ್ಪಿಗೆ ಎಲ್ಲರೂ ಬದ್ಧವಾಗಿರುತ್ತಿದ್ದರು. ಹಳ್ಳಿಗಳ ನೈತಿಕ ಎಲ್ಲೆಗಳನ್ನು ಈ ಬಗೆಯ ಪಂಚಾಯಿತಿಗಳು ನಿಯಂತ್ರಿಸುತ್ತಾ ಹದ್ದು ಮೀರಿ ವರ್ತಿಸುವವರನ್ನು ದಂಡಿಸುತ್ತಿತ್ತು. ದೇಶದ ಸಾಮಾಜಿಕ ಸಾಮರಸ್ಯ ಎಂಬುದು ಗ್ರಾಮಪಂಚಾಯಿತಿಗಳಲ್ಲಿ ಇರುತ್ತಿದ್ದುದ್ದನ್ನು ನಾವು ಗಮನಿಸಬಹುದಾಗಿದೆ ಎಂದು ಹೇಳಿದರು.
ಆದರೆ ಇಂದು ನ್ಯಾಯ ಪಡೆಯುವ ಮಾರ್ಗಗಳು ಅತ್ಯಂತ ದುಬಾರಿ ಅನ್ನಿಸಿಕೊಳ್ಳುತ್ತಿರುವ ದಿನಗಳಲ್ಲಿ ಪರ್ಯಾಯ ಕಾನೂನು ವೇದಿಕೆಗಳು ಸುಲಭ ಮಾರ್ಗವಾಗಿವೆ. ಲೋಕ ಅದಾಲತ್, ಮಧ್ಯಸ್ಥಿಕೆ ಕೇಂದ್ರ ಸೇರಿದಂತೆ ಇನ್ನಿತರೆ ಪರ್ಯಾಯ ವ್ಯವಸ್ಥೆಯ ಮೂಲಕ ನ್ಯಾಯ ಪಡೆಯುವ ದಾರಿಯನ್ನು ಸುಲಭ ಮಾಡುತ್ತಿವೆ ಎಂದು ಹೇಳಿದರು.
ಸಮಾನ ನ್ಯಾಯ ಮತ್ತು ಉಚಿತ ಕಾನೂನು ನೆರವು ತತ್ವದ ಮೇಲೆ ಆರ್ಟಿಕಲ್ 39ಎ ನಿಂತಿದೆ. ರಾಜ್ಯವು ಸಮಾನ ಅವಕಾಶದ ಆಧಾರದ ಮೇಲೆ ನ್ಯಾಯವು ಸಿಗುವಂತೆ ಕಾನೂನು ವ್ಯವಸ್ಥೆಯ ನಿರ್ವಹಣೆಯನ್ನು ಮಾಡಬೇಕು. ವಿಶೇಷವಾಗಿ ಆರ್ಥಿಕ ಅಥವಾ ಇತರ ಅಸಮರ್ಥತೆಗಳ ಕಾರಣದಿಂದಾಗಿ ಶೋಷಿತ ಸಮುದಾಯಗಳ ಜತೆಗೆ, ಈ ದೇಶದ ಯಾವುದೇ ನಾಗರಿಕರಿಗೆ ನ್ಯಾಯ ವಂಚಿತರನ್ನಾಗಿ ಮಾಡಬಾರದು ಎಂದರು.
ನ್ಯಾಯ ನೀಡಿಕೆಯ ಕ್ರಮಗಳನ್ನು ಹೆಚ್ಚು ಸಂಕೀರ್ಣ ಮತ್ತು ಕಠಣಗೊಳಿಸದೆ ಪರ್ಯಾಯ ಕಾನೂನು ವೇದಿಕೆಗಳ ಮೂಲಕ ಎಲ್ಲರಿಗೂ ಕಾನೂನು ನೆರವು ನೀಡಿ ನಮ್ಮ ಸಂವಿಧಾನದ ಆಶಯಗಳನ್ನು ಈಗ ನಾವು ಎತ್ತಿ ಹಿಡಿಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣವರ್, ವಿದ್ಯಾವರ್ಧಕ ಕಾನೂನು ಕಾಲೇಜಿನ ಮೇಲ್ವಿಚಾರಣಾ ಸಮಿತಿಯ ಮುಖ್ಯಸ್ಥ ಕೆ.ಎಂ.ರಾಜಶೇಖರ್, ಪ್ರಾಂಶುಪಾಲ ಡಾ. ಪಿ. ದೀಪು, ಕಾರ್ಯಕ್ರಮದ ಸಂಯೋಜಕಿ ಎಂ.ಜೆ.ಇಂದುಮತಿ, ಸಹಾಯಕ ಪ್ರಾಧ್ಯಾಪಕಿ ಡಾ.ಶ್ರೀದೇವಿ ಕೃಷ್ಣಾ ಇತರರಿದ್ದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಆಯೋಜಿಸಿದ್ದ ಪರ್ಯಾಯ ವ್ಯಾಜ್ಯ ಪರಿಹಾರ: ನ್ಯಾಯವನ್ನು ಪಡೆಯುವ ಮಾರ್ಗ ಕುರಿತ ಎರಡು ತಾಂತ್ರಿಕ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಜಿ.ಎನ್. ವಿಶ್ವವಿದ್ಯಾಲಯದ ಡೀನ್ ಪ್ರೊ.ಬಿ.ಎಸ್.ರೆಡ್ಡಿ, ಕೇರಳದ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ ಡಾ.ಅನೀಶ್ ವಿ. ಪಿಳ್ಳೈ, ಬೆಂಗಳೂರಿನ ವಿ.ವಿ.ಪುರಂ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಎಸ್.ಸಂಜೀವೇಗೌಡ, ಭದ್ರಾವತಿಯ ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಎಚ್.ಹನುಮಂತ ಇತರರು ಭಾಗವಹಿಸಿದ್ದರು.