ನಂಜನಗೂಡು ತಾಲೂಕು ದೇವನೂರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ದರ್ಶನ್ ಧ್ರುವನಾರಾಯಣ ಉದ್ಘಾಟಿಸಿದರು. ದೇವನೂರು ಮಠದ ಮಹಾದೇವ ಸ್ವಾಮೀಜಿ, ವಿಜಯಕುಮಾರ್ ನಾಗನಾಳ್ ಇತರರು ಇದ್ದರು. 
ಮೈಸೂರು

ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ

ಕೆಂಡಗಣ್ಣ ಎನ್

ಪ್ರಮುಖ ಮುಖ್ಯಾಂಶಗಳು

  • drinking-water
ಕಲ್ಕುಂದ: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ಇದಕ್ಕೆ ಬೇಕಾದ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು.
ನಂಜನಗೂಡು ತಾಲೂಕಿನ ದೇವನೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಗ್ರಾಮ ಪಂಚಾಯಿತಿ ಸಹಬಾಗಿತ್ವದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ನೀರಿನ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇವನೂರು ಒಂದು ದೊಡ್ಡ ಗ್ರಾಮ. ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಬೇಕು ಎಂದು ಗ್ರಾಮಸ್ಥರು ಬೇಡಿಕೆ ಇಟ್ಟಿದ್ದರು. ಇದೀಗ ಧರ್ಮಸ್ಥಳ ಸಂಘದಿಂದ 5 ಲಕ್ಷ ರೂ., ಗ್ರಾಪಂನಿಂದ 4 ಲಕ್ಷ ರೂ., ತಾಪಂನಿಂದ ಒಂದು ಲಕ್ಷ ರೂ. ಅನುದಾನವನ್ನು ನೀಡಿ ಘಟಕ ನಿರ್ಮಾಣ ಮಾಡಲಾಗಿದೆ. ಇದರ ನಿರ್ವಹಣೆಯನ್ನು ಧರ್ಮಸ್ಥಳ ಸಂಘದವರೇ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.
ನರಸಾಂಬುದಿಕೆರೆ ಹೂಳು ಎತ್ತಿ ನೀರು ತುಂಬಿಸಲಾಗುತ್ತಿದೆ. ದೇವನೂರು ಏತ ನೀರಾವರಿ ಯೋಜನೆಯಿಂದ ಉಳಿದ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಶೀಘ್ರದಲ್ಲಿ ಆಗಲಿದೆ. ಕೆರೆಗಳಿಗೆ ನೀರು ತುಂಬುವುದರಿಂದ ಅಂತರ್ಜಲ ಹೆಚ್ಚುತ್ತದೆ. ಮಹದೇವ ನಗರ ಬಹುಗ್ರಾಮ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು, ಕಾಮಗಾರಿಗೆ ಮತ್ತೆ ಜೀವ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ವಿಜಯಕುಮಾರ ನಾಗನಾಳ್, ಗ್ರಾಪಂ ಮಾಜಿ ಅಧ್ಯಕ್ಷ ಅವಿನಾಶ್, ಮಾಜಿ ಉಪಾಧ್ಯಕ್ಷೆ ಶಶಿಕಲಾ, ಗುರುಮಲ್ಲೇಶ್ವರ ಸೇವಾ ಸಮಿತಿ ಅಧ್ಯಕ್ಷ ರವೀಶ್ ಮೂರ್ತಿ, ಅನುರಾಗ ಸೇವಾ ಟ್ರಸ್ಟ್ ಅಧ್ಯಕ್ಷ ಸೋಮಶೇಖರ್ ಮೂರ್ತಿ, ನಂಜನಗೂಡು ವಲಯಧಿಕಾರಿ ಧರ್ಮರಾಜ್, ಪಿಡಿಒ ಶಭಾನಾ ಎಂ.ಬಿ., ಶಿವಪ್ಪ ದೇವರು, ಚಂದ್ರು, ರೇವಣಸಿದ್ದೇಶ, ಶುದ್ಧ ಗಂಗಾ ಮೇಲ್ವಿಚಾರಕರು ಸೇರಿ ಗ್ರಾಮಸ್ಥರು ಹಾಜರಿದ್ದರು.