ಭಾರತ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಸ್ಥೆಯಲ್ಲಿ ಆಯೋಜಿಸಿದ್ದ ದಾದಿಯರ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿನ ಉತ್ತಮ ಕಾರ್ಯನಿರ್ವಹಿಸಿದ ನರ್ಸ್‌ಗಳನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ವೈ.ಎಸ್. ಮಾಧವಿ, ಪಿ.ಎಸ್.ಪ್ರೇಮಾ, ಡಾ.ಬಿ. ಕವಿತಾ ಇತರರು ಇದ್ದರು. 
ಮೈಸೂರು

ದಾದಿಯರು ಉದಾತ್ತ ಸೇವೆ ಮುಂದುವರಿಸಲಿ

ಪ್ರಮುಖ ಮುಖ್ಯಾಂಶಗಳು

  • ಬಿಎಚ್‌ಐಒ ಸಂಸ್ಥೆ ವೈದ್ಯಕೀಯ ಅಧೀಕ್ಷಕಿ ಡಾ. ವೈ.ಎಸ್.ಮಾಧವಿ ಸಲಹೆ
  • ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ
  • ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನರ್ಸ್‌ಗಳಿಗೆ ಪ್ರಶಸ್ತಿ ಪ್ರದಾನ
ಮೈಸೂರು: ಭಾರತ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಸ್ಥೆ(ಬಿಎಚ್‌ಐಒ) ತನ್ನ ಶುಶ್ರೂಷ ಸಿಬ್ಬಂದಿಯ ನಿರಂತರ ಸಮರ್ಪಣೆ ಮತ್ತು ಕರುಣಾಮಯಿ ಸೇವೆಯನ್ನು ಗೌರವಿಸಲು ಕೃತಜ್ಞತಾ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಿತು.
ಪ್ರಶಸ್ತಿ ಪ್ರದಾನ, ಸೇವಾ ಸನ್ಮಾನ, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಫ್ಯಾಷನ್ ಶೋ ಒಳಗೊಂಡಿದ್ದ ಕಾರ್ಯಕ್ರಮ, ಆರೋಗ್ಯ ಕ್ಷೇತ್ರದ ಬೆನ್ನೆಲುಬು ಆಗಿರುವ ದಾದಿಯರಿಗೆ ಸಲ್ಲಿಸಿದ ಸ್ಮರಣೀಯ ಗೌರವದ ನಮನವಾಗಿ ಮೂಡಿಬಂತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಬಿಎಚ್‌ಐಒ ಸಂಸ್ಥೆ ಮುಖ್ಯ ವಿಕಿರಣ ದ್ರವ್ಯಶಾಸ್ತ್ರಜ್ಞೆ ಮತ್ತು ವೈದ್ಯಕೀಯ ಅಧೀಕ್ಷಕಿ ಡಾ. ವೈ.ಎಸ್.ಮಾಧವಿ, ರೋಗಿಗಳ ಆರೈಕೆ ಜತೆಗೆ ದಾದಿಯರು ತಮ್ಮ ಸ್ವಂತ ಆರೋಗ್ಯ ಮತ್ತು ಸಂತೋಷಕ್ಕೂ ಆದ್ಯತೆ ನೀಡಬೇಕು.
 ಸಮಾಜಕ್ಕೆ ನಿಮ್ಮ ಉದಾತ್ತ ಸೇವೆಯನ್ನು ಮುಂದುವರಿಸುವುದರ ಜತೆಗೆ, ನಿಮ್ಮನ್ನು ನೀವು ಸದೃಢವಾಗಿ ಮತ್ತು ಆರೋಗ್ಯವಾಗಿಟ್ಟುಕೊಳ್ಳಿ, ವ್ಯಾಯಾಮವನ್ನು ನಿಮ್ಮ ದೈನಂದಿನ ದಿನಚರಿಯ ಭಾಗವಾಗಿಸಿಕೊಳ್ಳಿ ಮತ್ತು ಜೀವನವನ್ನು ಆನಂದಿಸಿ ಎಂದ ಅವರು, ದಾದಿಯರು ಪ್ರತಿದಿನ ತೋರುವ ದಣಿವರಿಯದ ಬದ್ಧತೆಯನ್ನು ಶ್ಲಾಘಿಸಿದರು.
ಹಿರಿಯ ಶಸ್ತ್ರಚಿಕಿತ್ಸಾ ಕ್ಯಾನ್ಸರ್ ತಜ್ಞ ಹಾಗೂ ರೋಬಾಟಿಕ್ ಸರ್ಜನ್ ಡಾ.ಎಂ.ವಿಜಯಕುಮಾರ್ ಮಾತನಾಡಿ, ದಾದಿಯರ ಕರುಣೆ ಮತ್ತು ಮಾನವೀಯತೆ ಶ್ಲಾಘನೀಯ. ಆರೋಗ್ಯ ರಕ್ಷಣೆಯನ್ನು ಎರಡು ಚಕ್ರಗಳ ಮೇಲೆ ಸಮಾನವಾಗಿ ಅವಲಂಬಿತವಾಗಿರುವ ಎತ್ತಿನ ಬಂಡಿಯಂತೆ. ವೈದ್ಯರು ಮತ್ತು ದಾದಿಯರು ಒಟ್ಟಾಗಿ ರೋಗಿಗಳ ಗುಣಮಟ್ಟದ ಆರೈಕೆಯ ಅಡಿಪಾಯವನ್ನು ರೂಪಿಸುತ್ತಾರೆ. 
ನಿಮ್ಮ ದಯೆ, ಸಮರ್ಪಣೆ ಮತ್ತು ನಿಸ್ವಾರ್ಥ ಸೇವೆಯು ಅಸಂಖ್ಯಾತ ಜೀವಗಳಲ್ಲಿ ಮಹತ್ವದ ಬದಲಾವಣೆಯನ್ನು ತರುತ್ತದೆ ಎಂದು ಆಶಿಸಿದರು.
ಬಿಎಚ್‌ಐಒ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೌತಮ್ ಧಮೇರ್ಲಾ ಮಾತನಾಡಿ, ದಾದಿಯರು ಪ್ರತಿಯೊಂದು ಆರೋಗ್ಯ ಸಂಸ್ಥೆಯ ನಿಜವಾದ ಶಕ್ತಿ. ಬೆನ್ನೆಲುಬು ಇಡೀ ದೇಹವನ್ನು ಬೆಂಬಲಿಸುವಂತೆ, ದಾದಿಯರು ತಾಳ್ಮೆ, ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದ ಇಡೀ ಆರೋಗ್ಯ ವ್ಯವಸ್ಥೆ ಮುನ್ನಡೆಸುತ್ತಾರೆ. ಈ ಕೊಡುಗೆಯನ್ನು ಎಂದಿಗೂ ಬೇರೊಬ್ಬರಿಂದ ತುಂಬಲು ಸಾಧ್ಯವಿಲ್ಲ ಎಂದು ಹೇಳಿದರು.
ಶುಶ್ರೂಷ ಅಧೀಕ್ಷಕಿ ಪಿ.ಎಸ್.ಪ್ರೇಮಾ, ಮುಖ್ಯ ಸಲಹೆ ರೋಗಶಾಸ್ತ್ರಜ್ಞೆ ಡಾ.ಬಿ.ಕವಿತಾ ಇದ್ದರು. 

ಉತ್ತಮವಾಗಿ ಕಾರ್ಯನಿರ್ವಹಿಸಿದವರಿಗೆ ಸನ್ಮಾನ 

ವಿವಿಧ ವಿಭಾಗಗಳಲ್ಲಿನ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಗುರುತಿಸಿ 14 ಪ್ರಶಸ್ತಿ ಪ್ರದಾನ ಮಾಡಲಾಯಿತು.
ಫ್ಲಾರೆನ್ಸ್ ನೈಟಿಂಗೇಲ್ ಎಕ್ಸಲೆನ್ಸ್ ಪ್ರಶಸ್ತಿ - ನಟರಾಜು, ವರ್ಷದ ಅತ್ಯುತ್ತಮ ದಾದಿ -ಡಿ.ಎಸ್.ಗಿರೀಶ್, ಪೇಷಂಟ್ ಕೇರ್ ಚಾಂಪಿಯನ್ -  ಕೆ.ಎನ್.ಚಂದನಾ, ಕ್ಲಿನಿಕಲ್ ಎಕ್ಸಲೆನ್ಸ್-ಎಂ. ಚಂದನ್, ರೈಸಿಂಗ್ ಸ್ಟಾರ್- ಅಚು ಜಾಕೋಬ್, ಬೆಸ್ಟ್ ಡಾಕ್ಯುಮೆಂಟೇಷನ್ -ಸಿ.ಎನ್. ನಾಗಲಕ್ಷ್ಮೀ, ಬೆಸ್ಟ್ ಟೀಮ್ ಪ್ಲೇಯರ್ -ಎಸ್. ವಾಣಿಶ್ರೀ, ಲೀಡರ್‌ಷಿಪ್ ಎಕ್ಸಲೆನ್ಸ್ - ಡಿ.ಎಸ್. ಸುಧಾಕರ್ ಮತ್ತು ಎಚ್.ವಿ.ಪವಿತ್ರಾ, ಡೆಡಿಕೇಷನ್ ಆ್ಯಂಡ್ ಕಮಿಟ್‌ಮೆಂಟ್-ಎಚ್.ಎಚ್. ಲಾವಣ್ಯ, ಎಮರ್ಜೆನ್ಸಿ ಕೇರ್ ಎಕ್ಸಲೆನ್ಸ್ - ಗೀತಾ ಮತ್ತು ಪಾಪಣ್ಣ, ಅತ್ಯುತ್ತಮ ಒಪಿಡಿ ದಾದಿ -ಎಂ.ಎಸ್.ರಾಧಿಕಾ ಮತ್ತು ಪಿ.ಬಿ.ಸುಧಾ ಪ್ರಶಸ್ತಿ ಪುರಸ್ಕೃತರು. ಸೇವಾ ಸನ್ಮಾನ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಎಚ್.ವಿ.ಚಂದನಾ, ಜಿ.ರೇಣುಕಾ,  ಆರ್.ಸೌಮ್ಯಾ, ಗೀತಾ ಮತ್ತು ಡಿ.ಎಸ್.ಸುಧಾಕರ್, ಎಚ್.ವಿ.ಪವಿತ್ರಾ ಅವರನ್ನು ಸನ್ಮಾನಿಸಲಾಯಿತು.