ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿ.ವಿ.ಗೋಪಿನಾಥ್, ಗುಂಡಪ್ಪ ಗೌಡ, ಶ್ರೀಶೈಲ ರಾಮಣ್ಣವರ್, ಕೆ.ಎಂ.ರಾಜಶೇಖರ್, ಡಾ. ಪಿ. ದೀಪು ಇದ್ದರು. 
ಮೈಸೂರು

ನ್ಯಾಯಾಧೀಶರಿಗೆ ಅಂತಃಕರಣ ಇರಲಿ

ಪ್ರಮುಖ ಮುಖ್ಯಾಂಶಗಳು

  • ಭಾರತ ಸರ್ಕಾರದ ಮಾಜಿ ಹೆಚ್ಚುವರಿ ಕಾರ್ಯದರ್ಶಿ ಸಿ.ವಿ.ಗೋಪಿನಾಥ್ ಅಭಿಪ್ರಾಯ
  • ಸಮಾರೋಪ ಕಾರ್ಯಕ್ರಮ
ಮೈಸೂರು: ನ್ಯಾಯದ ತಕ್ಕಡಿ ಹಿಡಿದಿರುವವರಿಗೆ ತಾಯಿಯ ಅಂತಃಕರಣ ಮತ್ತು ಆತ್ಮಸಾಕ್ಷಿಯೂ ಇರಲೇಬೇಕು. ಅದುವೇ ನಿಜವಾದ ನ್ಯಾಯ, ಅದುವೇ ನೈಸರ್ಗಿಕ ನ್ಯಾಯ ಎಂದು ಭಾರತ ಸರ್ಕಾರದ ಹೆಚ್ಚುವರಿ ಮಾಜಿ ಕಾರ್ಯದರ್ಶಿ ಸಿ.ವಿ.ಗೋಪಿನಾಥ್ ಅಭಿಪ್ರಾಯಪಟ್ಟರು.
ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪದಲ್ಲಿ ಮಾತನಾಡಿದರು.
ಕಾನೂನು, ಕಾನೂನು ಪುಸ್ತಗಳು ಯಾವ ತಪ್ಪಿಗೆ ಯಾವ ಶಿಕ್ಷೆ ಅನ್ನುವುದನ್ನು ಖಚಿತವಾಗಿ ಹೇಳುತ್ತವೆ. ಶಿಕ್ಷೆ ನೀಡಿಕೆಯ ಪ್ರಕ್ರಿಯೆಗಳು ನಮ್ಮಲ್ಲಿ ಕರಾರುವಕ್ಕಾಗಿವೆ. ಶಿಕ್ಷೆ ನೀಡುತ್ತಿರುವ ನ್ಯಾಯಾಧೀಶ ತನ್ನ ಆತ್ಮಸಾಕ್ಷಿಯ ದನಿಕೇಳಿ ಆ ತೀರ್ಪು ಕೊಡುತ್ತಿರುವವರೇ ಎಂಬುದು ಮುಖ್ಯವಾಗಬೇಕು ಎಂದು ಹೇಳಿದರು.
ಬೌದ್ಧರಲ್ಲಿ ಮನೋಗಥ, ಜೈನರಲ್ಲಿ ಸಂಕಲ್ಪ ಮತ್ತು ಮುಸ್ಲಿಮರಲ್ಲಿ ತಕ್ವಾ ಸಿದ್ಧಾಂತಗಳು ನ್ಯಾಯನೀಡಿಕೆಯ ಮಾರ್ಗಗಳು ಸದಾ ಅಂತಃಕರಣ ಮತ್ತು ಆತ್ಮಸಾಕ್ಷಿಗೆ ಪೂರಕವಾಗಿರಬೇಕು ಅನ್ನುತ್ತವೆ. ತಪ್ಪು ಮತ್ತು ಅಪರಾಧ ಮಾಡಿದವರಿಗೆ ದಂಡನೆ ಮತ್ತು ಪಶ್ಚಾತ್ತಾಪ ಎರಡಕ್ಕೂ ಅವಕಾಶಗಳು ನ್ಯಾಯಾಧೀಶರು ಮಾಡಿಕೊಡಬೇಕು. ಅದುವೇ ಆತ್ಮಸಾಕ್ಷಿಯ ನ್ಯಾಯದಾನವಾಗುತ್ತದೆ ಎಂದು ಹೇಳಿದರು
ಭಾರತ ಜ್ಞಾನ ಪರಂಪರೆ ಅಧ್ಯಯನ ಯೋಗ್ಯವಾಗಿರುವ ಈ ಕಾಲದಲ್ಲಿ ನಮ್ಮ ಪುರಾಣಗಳಲ್ಲಿ, ರಾಮಾಯಣ, ಮಹಾಭಾರತ, ವಿಕ್ರಮಾದಿತ್ಯನ ಕಾಲಘಟ್ಟಗಳಲ್ಲಿ ಜಾರಿಯಲ್ಲಿದ್ದ ನ್ಯಾಯ ನೀಡಿಕೆಯ ಕ್ರಮಗಳನ್ನು ಈಗಲೂ ಅನುಸರಿಸಬಹುದಾಗಿದೆ. ಈ ಹಿಂದೆ ವಿವೇಚನೆ, ನೈತಿಕತೆ, ಅಂತಃಕರಣಗಳ ಒಳಪ್ರಜ್ಞೆಗಳ ಮೂಲಕ ಎರಡು ಕಡೆಯ ವಾದ-ವಿವಾದ ಕೇಳಿಸಿಕೊಂಡು ನ್ಯಾಯದಾನ ಮಾಡಲಾಗುತ್ತಿತ್ತು ಎಂದರು.
ರಾಜ್ಯ ಮತ್ತು ರಾಷ್ಟ್ರಮಟ್ಟದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಖಜಾಂಚಿ ಶ್ರೀಶೈಲ ರಾಮಣ್ಣವರ್, ಕಾಲೇಜಿನ ಮೇಲ್ವಿಚಾರಣಾ ಸಮಿತಿ ಮುಖ್ಯಸ್ಥ ಕೆ.ಎಂ.ರಾಜಶೇಖರ್, ಪ್ರಾಂಶುಪಾಲೆ ಡಾ. ಪಿ. ದೀಪು, ಕಾರ್ಯಕ್ರಮದ ಸಂಯೋಜಕ ಡಾ.ಟಿ.ಎಂ.ಪ್ರಶಾಂತ್ ಇದ್ದರು.