ನಗರದಲ್ಲಿ ಆಯೋಜಿಸಿದ್ದ ಶ್ರೀರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಡಾ.ಪಿ.ಶಿವರಾಜು, ಡಾ.ಮೀನಾಕ್ಷಿ ಖಂಡಿಮಠ, ಶ್ರೀಡಾ.ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಡಾ.ಎಂ.ಡಿ.ಸುದರ್ಶನ್, ಬಿ.ಎಸ್.ಶ್ರೀಶೈಲ, ಹಿನಕಲ್ ಬಸವರಾಜು, ಅಶೋಕ್, ಜ್ಞಾನ ಶಂಕರ ಇತರರು ಇದ್ದರು.
- ‘ಮಾನವ ಕುಲಕ್ಕೆ ಒಳಿತಾಗಲಿ’ ಎಂಬ ಉದಾತ್ತ ಚಿಂತನೆ ನಮಗೆ ಎಂದೆಂದಿಗೂ ಆದರ್ಶವಾಗಿರಬೇಕು
- ಇಡೀ ಸಮುದಾಯಕ್ಕೆ ಆದರ್ಶದಾಯಕ ಸಿದ್ಧಾಂತ ಪರಿಚಯಿಸಿದಂತಹ ಮಹನೀಯ ವ್ಯಕ್ತಿ ರೇಣುಕಾಚಾರ್ಯ
ಮೈಸೂರು:ಮನುಷ್ಯ ಕುಲಕ್ಕೆ ಬೆಳಕಾಗಿ ಬಂದಂತಹ ಮಹನೀಯರ ಜಯಂತಿಯನ್ನು ಆಚರಿಸುವುದರ ಜತೆಗೆ ಅವರ ಆದರ್ಶಗಳನ್ನು ನಾವು ಪಾಲನೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ಶ್ರೀರೇಣುಕಾಚಾರ್ಯ ಜಯಂತ್ಯುತ್ಸವ ಸಮಿತಿಯಿಂದ ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀರೇಣುಕಾಚಾರ್ಯರ ತತ್ವ, ಸಿದ್ಧಾಂತಗಳು ಜಗತ್ತಿನ ಎಲ್ಲರ ಒಳಿತನ್ನು ಬಯಸುತ್ತದೆ. ‘ಮಾನವ ಕುಲಕ್ಕೆ ಒಳಿತಾಗಲಿ’ ಎಂಬ ಉದಾತ್ತ ಚಿಂತನೆ ನಮಗೆ ಎಂದೆಂದಿಗೂ ಆದರ್ಶವಾಗಿರಬೇಕು. ಅವರ ಆದರ್ಶದ ದಾರಿದೀಪದಲ್ಲಿ ಶಾಂತಿ, ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು.
ಸರ್ಕಾರದಿಂದ ಮಹಾನೀಯರ 30ಕ್ಕೂ ಹೆಚ್ಚು ಜಯಂತಿಯನ್ನು ಪ್ರತಿ ವರ್ಷ ಆಚರಿಸುತ್ತೇವೆ. ಒಂದು ಸಮಾಜದ ಕಣ್ಣಾಗಿ ಇಡೀ ಸಮಾಜದ ಮಾನವೀಯತೆಯ ಪ್ರತಿರೂಪವಾಗಿ ಹಾಗೂ ಮನುಷ್ಯ ಕುಲಕ್ಕೆ ಬೆಳಕಾಗಿ ಬಂದಂತಹ ವ್ಯಕ್ತಿಗಳ ಜಯಂತಿಯನ್ನು ಆಚರಿಸುವುದರ ಜತೆಗೆ ಅವರ ಆದರ್ಶಗಳನ್ನು ಜೀವನದಲ್ಲಿ ನಾವೇಲ್ಲ ಅಳಡಿಸಿಕೊಳ್ಳಬೇಕು ಎಂದು ಹೇಳಿದರು.
ರೇಣುಕಾಚಾರ್ಯ ತತ್ವಗಳು ಹಾಗೂ ಅವರು ಈ ಸಮಾಜಕ್ಕೆ ನೀಡಿದಂತಹ ಸಿದ್ಧಾಂತಗಳು, ಮಾನವೀಯ ಮೌಲ್ಯಗಳು, ಆದರ್ಶಗಳು ಹಾಗೂ ಅವರು ಬಿತ್ತಿದಂತಹ ಬೀಜ ಇಂದು ಹೆಮ್ಮೆರವಾಗಿ ನಮ್ಮೆಲ್ಲರ ಮನಸ್ಸಿನಲ್ಲಿ ಒಂದು ಫಲ ಕೊಡುವ ಮರವಾಗಿ ಬೆಳೆದಿದೆ. ವೀರಶೈವ ಪರಂಪರೆಯಲ್ಲಿ ಇಡೀ ಸಮುದಾಯಕ್ಕೆ ಆದರ್ಶದಾಯಕ ಸಿದ್ಧಾಂತ ಪರಿಚಯಿಸಿದಂತಹ ಮಹನೀಯ ವ್ಯಕ್ತಿ ರೇಣುಕಾಚಾರ್ಯ. ಅವರು ಅಮರವಾಗಿರುತ್ತಾರೆ. ಅದರ ಆದರ್ಶವನ್ನು ನಮ್ಮೆಲ್ಲರ ಜೀವನದಲ್ಲಿ ಪಾಲಿಸಬೇಕು ಎಂದರು.
ರಾಯಚೂರು ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ಖಂಡಿಮಠ ಮಾತನಾಡಿ, ರೇಣುಕಾಚಾರ್ಯರ ವ್ಯಕ್ತಿತ್ವವನ್ನು ಪರಿಚಯಿಸುವುದಕ್ಕಿಂತ ಅವರ ಬೋಧನೆಗಳನ್ನು ಮರೆತಿರುವ ಜನರಿಗೆ ಅವರ ತತ್ವಗಳನ್ನು ನೆನಪಿಸಬೇಕೆಂಬ ಕಾಳಜಿಯಿಂದ ಜಯಂತಿ ಆಚರಿಸಲಾಗುತ್ತಿದೆ ಎಂದರು.
ರೇಣುಕಾಚಾರ್ಯರು ಸಮಾನತೆ ಎಂಬ ತತ್ವಕ್ಕೆ ಮಹತ್ವ ನೀಡಿದರು. ಎಲ್ಲ ವರ್ಣಗಳು ಸಮಾನ ಎಂಬ ನಂಬಿಕೆ ಹರಡಿದರು. ಇಷ್ಟಲಿಂಗವನ್ನು ಧರಿಸುವ ಮೂಲಕ ನಿತ್ಯ ಶಿವನೊಂದಿಗೆ ಸಂಬಂಧವನ್ನು ಕಾಪಾಡಬೇಕೆಂಬ ತತ್ವವನ್ನು ಅವರು ಬೋಧಿಸಿದರು ಎಂದು ಹೇಳಿದರು.
ಎಲ್ಲ ಪೋಷಕರು ಶ್ರೀರೇಣುಕಾಚಾರ್ಯರ ತತ್ವ ಆದರ್ಶಗಳನ್ನು ತಮ್ಮ ಮಕ್ಕಳಿಗೆ ಹೇಳಿಕೊಡುವುದರ ಮೂಲಕ ತಮ್ಮ ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿ ಎಂದು ಸಲಹೆ ನೀಡಿದರು.
ಅರಮನೆಯ ಜಪದಕಟ್ಟೆ ಮಠದ ಶ್ರೀಡಾ. ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಜಯಂತ್ಯುತ್ಸವ ಸಮಿತಿಯ ಅಧ್ಯಕ್ಷ ಬಿ.ಎಸ್.ಶ್ರೀಶೈಲ, ಮುಖಂಡರಾದ ಹಿನಕಲ್ ಬಸವರಾಜು, ಅಶೋಕ್, ಜ್ಞಾನ ಶಂಕರ ಇತರರು ಇದ್ದರು.