ಹುಣಸೂರು ನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಾಧಕ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಕೆ.ಡಿ.ಶೈಲಾ, ಕೆ.ಮಾನಸಾ, ಶರ್ಮಿಳಾ, ರಾಚಯ್ಯ, ಸೌಮ್ಯ, ಕೃಷ್ಣೇಗೌಡ ಇತರರಿದ್ದರು.
ಹುಣಸೂರು: ಜಾಗತಿಕ ಮಟ್ಟದಲ್ಲಿ ಭಾರತೀಯ ಮಹಿಳೆಯನ್ನು ಗುರುತಿಸುವಂತಾಬೇಕಾದರೆ ಸರ್ಕಾರಗಳು ಅಗತ್ಯ ಶಿಕ್ಷಣ ನೀಡುವಂತಾಗಲು ಕ್ರಮ ವಹಿಸಬೇಕು ಎಂದು ಸಾಹಿತಿ ಡಾ.ಮಾದುಪ್ರಸಾದ್ ಅಭಿಪ್ರಾಯಪಟ್ಟರು.
ರಾಜ್ಯ ಪೌರಸೇವಾ ನೌಕರರ ಸಂಘದ ತಾಲೂಕು ಘಟಕ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು. ಮಹಿಳೆಯರು ಬೃಹತ್ ಮಾನವ ಸಂಪನ್ಮೂಲವಾಗಿದ್ದು ಭಾರತದ ಪ್ರಧಾನ ಶಕ್ತಿ ಆಗಿದ್ದಾರೆ. ಅವರನ್ನು ಅವಕಾಶಗಳಿಂದ ವಂಚಿತರನ್ನಾಗಿಸಬಾರದು ಎಂದರು.
ಮಹಿಳೆಯರನ್ನು ಸಮಾನತೆಯಿಂದ ಕಾಣುವ ಮನೋಭಾವ ಅತ್ಯಗತ್ಯ. ಆಧುನಿಕ ಮಹಿಳೆಯರು ಅವಕಾಶ ಬಯಸಲಿದ್ದು, ಅದರಂತೆ ಅವಕಾಶ ನೀಡಬೇಕು. ಲಿಂಗ ತಾರತಮ್ಯ ತೊಲಗಬೇಕು. ಪಾಶ್ಚಾತ್ಯ ದೇಶಗಳಲ್ಲಿ ಲಿಂಗಸಮಾನತೆ ಆಧಾರದಡಿ ಮಹಿಳೆಯರು ಮುನ್ನುಗ್ಗುತ್ತಿರುತ್ತಾರೆ. ಆದರೆ ಭಾರತದಲ್ಲಿ ಮಹಿಳೆಯರಿಗೆ ಗೌರವ ನೀಡುತ್ತಲೇ ಅವರ ಸಂಪೂರ್ಣ ಬೆಳವಣಿಗೆಗೆ ಕಡಿವಾಣ ಹಾಕುವ ಕಾರ್ಯ ನಡೆದಿದೆ. ಇದು ನಿಲ್ಲಬೇಕಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಪೌರಸೇವಾ ನೌಕರರ ಸಂಘದ ಅಧ್ಯಕ್ಷೆ ಕೆ.ಡಿ.ಶೈಲಾ ಮಾತನಾಡಿ, ಪೌರ ಸೇವಾ ಸಿಬ್ಬಂದಿ ದಿನದ ವಿವಿಧ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿ ಊರಿನ ಸ್ವಚ್ಛತೆ ಕಾಪಾಡುತ್ತಾರೆ. ಈ ಸಿಬ್ಬಂದಿಯನ್ನು ಅರೆಸರ್ಕಾರಿ ನೌಕರರು, ದಿನಗೂಲಿ, ಹೊರಗುತ್ತಿಗೆ ಸಿಬ್ಬಂದಿ, ಎಂಬಿತ್ಯಾದಿ ವಿಭಾಗಗಳನ್ನು ಮಾಡಿ ಸರ್ಕಾರದಿಂದ ಸಿಗಬೇಕಿದ್ದ ಹಲವಾರು ಸವಲತ್ತುಗಳಿಂದ ವಂಚಿತರನ್ನಾಗಿಸಲಾಗಿದೆ. ರಾಜ್ಯ ಪೌರ ಸೇವಾ ನೌಕರರ ಸಂಘ ಈಗಾಗಲೇ ಸರ್ಕಾರದ ಗಮನಕ್ಕೆ ತಂದು ಪೌರಕಾರ್ಮಿಕರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ ಸವಲತ್ತು ಕಲ್ಪಿಸಬೇಕೆಂದು ಒತ್ತಡ ಹಾಕಿದ್ದು ಯಶಸ್ವಿಯಾಗುವ ವಿಶ್ವಾಸವಿದೆ ಎಂದರು.
ನಗರಸಭೆ ಆಯುಕ್ತೆ ಕೆ.ಮಾನಸ ಮಾತನಾಡಿ, ಮಹಿಳೆ ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಶಿಕ್ಷಣ ಅಗತ್ಯ. ಪೌರಸೇವಕರಾಗಿ ಕೆಲಸ ನಿರ್ವಹಿಸುತ್ತಿರುವ ಬಹುತೇಕ ಮಹಿಳೆಯರು ಅಕ್ಷರಜ್ಞಾನ ಇಲ್ಲದವರಾಗಿ ಹಲವು ಸಾಮಾಜಿಕ ಸಮಸ್ಯೆಗಳಿಗೆ ತಲೆ ಕೊಡುವಂತಾಗಿದೆ. ಮಹಿಳೆಯರು ಅಕ್ಷರ ಕಲಿತು ಪ್ರಥಮ ಹೆಜ್ಜೆ ಹಾಕಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆಯ ಆರೋಗ್ಯ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪೌರ ಸೇವಕರಾದ ಮಂಜುಳಾ, ಪ್ರೇಮ, ಜ್ಯೋತಿ, ಲಕ್ಷ್ಮಿ, ಸುಶೀಲ, ಶೋಭಾ, ನಾಗಮ್ಮ, ಸಮುದಾಯ ಸಂಚಾಲಕರಾಗಿ ಕರ್ತವ್ಯ ನಿರ್ವಹಿಸುತ್ರಿರುವ ಸುಗಂಧ, ಲೀಲಮ್ಮ, ನಾಗಮ್ಮ, ಲಕ್ಷ್ಮಿ, ಇಇ ಆಗಿ ಮುಂಬಡ್ತಿ ಪಡೆದು ಹಾಸನ ಜಿಲ್ಲೆಗೆ ವರ್ಗಾವಣೆಗೊಂಡ ಎಇಇ ಶರ್ಮಿಳ ಅವರನ್ನು ಸನ್ಮಾನಿಸಲಾಯಿತು. ಪೌರ ಸೇವಕ ಸಂಘದ ಅಧ್ಯಕ್ಷ ರಾಚಯ್ಯ ಮಾತನಾಡಿದರು. ವೇದಿಕೆಯಲ್ಲಿ ಪರಿಸರ ಇಂಜಿನಿಯರ್ ಸೌಮ್ಯಾ, ವಿಭಾಗ ಅಧಿಕಾರಿಗಳಾದ ಶಮಂತ್ ಕುಮಾರ್, ಸೌಮ್ಯಾ, ಶಾರದಮ್ಮ, ಮೋಹನ್ ಕುಮಾರ್, ಸುಭಾಷ್, ಮಧುಸೂಧನ್, ಸೋಮಶೇಖರ್, ಸಿದ್ದಯ್ಯ ಇದ್ದರು.