ನಗರದಲ್ಲಿ ಆಯೋಜಿಸಿದ್ದ ಹಂಸಲೇಖ ಅವರ ಸಿನಿಮಾ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ರವಿ ಕುಮಾರನಪುರ, ಎಂ.ಶಿವಕುಮಾರ್, ಡಾ.ಕೃಷ್ಣಮೂರ್ತಿ ಚಮರಂ, ಆರ್.ಮಹೇಂದ್ರ, ಗಾನಾ ಸುಮಾ ಪಟ್ಟಸೋಮನಹಳ್ಳಿ ಇನ್ನಿತರರಿದ್ದರು.
- ಸಾಹಿತಿ ರವಿ ಕುಮಾರನಪುರ ಆಶಯ
- ‘ನಾಲ್ವಡಿ ನಾಡಿನಲ್ಲಿ ನಾದಬ್ರಹ್ಮ ಹಂಸಲೇಖ’ ಅವರ ಸಿನಿಮಾ, ಸಾಹಿತ್ಯ ಸಂವಾದ ಕಾರ್ಯಕ್ರಮ
- ತಮಿಳುನಾಡಿನ ಗೀತರಚನಕಾರ ವೈರಮುತ್ತುರಿಗೆ ಜ್ಞಾನಪೀಠ ಪ್ರಶಸ್ತಿ ಬರುವುದಾದರೆ ಹಂಸಲೇಖರ ಅವರಿಗೆ ಏಕೆ ಬರುವುದಿಲ್ಲ?
- ಹಂಸಲೇಖ ಅವರ ಗೀತ-ಸಂಗೀತಗಳು ಜನರ ಮನದಲ್ಲಿ ಮನೆಮಾಡಿದೆ
ಮೈಸೂರು: ಕನ್ನಡ ಚಲನಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಅವರು ಹತ್ತು ಹಲವು ಹೊಸತುಗಳಿಗೆ ಕಾರಣರಾಗಿದ್ದಾರೆ. ಕವಿಯಾಗಿ ಸಾಹಿತಿಯಾಗಿ ಸಂಗೀತಗಾರರಾಗಿ ನಾಡಿನ ಹೆಮ್ಮೆ ಎಂದು ಸಾಹಿತಿ ರವಿ ಕುಮಾರನಪುರ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನದ ಅಂಗವಾಗಿ ಲಯನ್ಸ್ ಕ್ಲಬ್ ಆಫ್ ಮೈಸೂರು, ಪರಿವರ್ತನ ಸಂಸ್ಥೆ ವತಿಯಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ನಾಲ್ವಡಿ ನಾಡಿನಲ್ಲಿ ನಾದಬ್ರಹ್ಮ ಹಂಸಲೇಖ’ ಅವರ ಸಿನಿಮಾ, ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಂದಾಗ ಅಪಸ್ವರ ಬರುತ್ತದೆ. ತಮಿಳುನಾಡಿನ ಗೀತರಚನಕಾರ ವೈರಮುತ್ತುರಿಗೆ ಜ್ಞಾನಪೀಠ ಪ್ರಶಸ್ತಿ ಬರುವುದಾದರೆ ಹಂಸಲೇಖರ ಅವರಿಗೆ ಏಕೆ ಬರುವುದಿಲ್ಲ? ಈ ಬಗ್ಗೆ ಅವಲೋಕನ ಅಗತ್ಯವಿದೆ ಎಂದರು.
ಸಮಾಜಮುಖಿ ಚಿಂತನೆಯ ಸಾಹಿತಿಗೆ ಯಾವುದೇ ಪಕ್ಷ, ಜಾತಿ, ಧರ್ಮಗಳಿಲ್ಲ. ಅವರು ಕಾಲ, ದೇಶವನ್ನು ಮೀರಿದವರು. ಬಾಬಾ ಸಾಹೇಬರು ಹಿಡಿದ ಪೆನ್ನು ದೇಶಕ್ಕೆ ಊರುಗೋಲಾಯಿತು. ಸಾಹಿತಿಗಳ ಪೆನ್ನು ಮನಸ್ಸು ಕಟ್ಟಬೇಕಿತ್ತು. ಆದರೀಗ ಒಡೆಯುತ್ತಿದೆ. ಕಟ್ಟುವ ಪ್ರಕ್ರಿಯೆಯಲ್ಲಿ ಹಂಸಲೇಖರ ಸಾಹಿತ್ಯ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಪತ್ರಕರ್ತ ಕೆ.ನರಸಿಂಹಮೂರ್ತಿ ಮಾತನಾಡಿ, ಹಂಸಲೇಖ ಅವರ ಗೀತ-ಸಂಗೀತಗಳು ಜನರ ಮನದಲ್ಲಿ ಮನೆಮಾಡಿದೆ. ಅವರ ಹಾಡುಗಳನ್ನು ಕೇಳುವವರು ತಮ್ಮ ವಯಸ್ಸನ್ನು ಮರೆಯುತ್ತಾರೆ. ಅವರ ಕ್ಲಾಸಿಕ್ ಹಾಡುಗಳನ್ನು ಆಲಿಸುವಾಗ ಭಾವದಲ್ಲಿ ತಲ್ಲೀನರಾಗುತ್ತಾರೆ ಎಂದರು.
‘ಹಂಸಲೇಖ ಸಾಹಿತ್ಯದಲ್ಲಿ ಪ್ರಕೃತಿ-ಪರಿಸರ ಪ್ರೇಮ’ ಕುರಿತು ಹಾಸನ ಆಕಾಶವಾಣಿ ನಿವೃತ್ತ ಮುಖ್ಯಸ್ಥ ಎಂ.ಶಿವಕುಮಾರ್, ‘ಹಂಸಲೇಖ ಸಾಹಿತ್ಯದಲ್ಲಿ ದೇಸಿಯತೆ’ ಕುರಿತು ಡಾ.ಕೃಷ್ಣಮೂರ್ತಿ ಚಮರಂ, ‘ಹಂಸಲೇಖರ ಸಂಗೀತ ಮತ್ತು ಒಡನಾಟ’ ಕುರಿತು ಆರ್.ಮಹೇಂದ್ರ, ‘ಹಂಸಲೇಖರು ಬೆಳೆದುಬಂದ ಹಾದಿ’ ಕುರಿತು ಗಾನಾ ಸುಮಾ ಪಟ್ಟಸೋಮನಹಳ್ಳಿ ಮಾತನಾಡಿದರು.
ಸಂವಾದದಲ್ಲಿ ಸಾಹಿತಿ ಸ್ವಾಮಿ ಪೊನ್ನಾಚಿ, ಬರಹಗಾರ ರಾಘವೇಂದ್ರ ಅಪುರಾ, ಕವಿ ಮಹೇಶ್ ಇರಸವಾಡಿ, ಲಯನ್ಸ್ ಕ್ಲಬ್ ಆಫ್ ಮೈಸೂರು ಪರಿವರ್ತನ ಖಜಾಂಚಿ ಸವಿತಾ ಎಸ್.ಗೌಡ, ಕರವೇ ರಾಜ್ಯ ಯುವ ಘಟಕದ ಅಧ್ಯಕ್ಷ ಸಂಜಯ್, ಜಿಲ್ಲಾಧ್ಯಕ್ಷ ಲೋಹಿತಾಶ್ವ ಭಾಗವಹಿಸಿದ್ದರು. ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಅಧ್ಯಕ್ಷತೆ ವಹಿಸಿದ್ದರು.
ಸತೀಶ್ ಹೆಗ್ಗೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಯತ್ರಿ ನಂದಾದೀಪ ನಿರೂಪಿಸಿದರು.