ಮೈಸೂರು ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಗುಲ್ಮೊಹರ್ ಮರ 
ಮೈಸೂರು

ಪ್ರವಾಸಿಗರನ್ನು ಆಕರ್ಷಿಸಲಿ ಗುಲ್ಮೊಹರ್

ಸದೇಶ್ ಕಾರ್ಮಾಡ್

ಪ್ರಮುಖ ಮುಖ್ಯಾಂಶಗಳು

  • ಚೆರ್ರಿ ಬ್ಲಾಸಮ್ ರೀತಿ ಪ್ರಚಾರ ಅಗತ್ಯ
  • ಮೈಸೂರಿನ ಸೊಬಗು ಹೆಚ್ಚಿಸಿದ ಮೇ ಫ್ಲವರ್
ಸದೇಶ್ ಕಾರ್ಮಾಡ್ ಮೈಸೂರು
ಪ್ರಕೃತಿಯ ಅತಿ ಸುಂದರ ಅಲಂಕಾರಿಕ ಮರಗಳಲ್ಲಿ ಗುಲ್ಮೊಹರ್ ಕೂಡ ಒಂದು. ಪ್ರತಿ ವರ್ಷ ಬೇಸಿಗೆಯ ಸಂದರ್ಭದಲ್ಲಿ ಸಾಂಸ್ಕೃತಿಕ ಮೈಸೂರಿನ ಸೊಬಗನ್ನು ಗುಲ್ಮೊಹರ್ ಮತ್ತಷ್ಟು ಹೆಚ್ಚಿಸುತ್ತದೆ. ಜಪಾನ್ ದೇಶದ ಚೆರ್ರಿ ಬ್ಲಾಸಮ್ ಮಾದರಿಯಲ್ಲಿ ಗುಲ್ಮೊಹರ್ ಪ್ರವಾಸೋದ್ಯಮದ ಆಕರ್ಷಣೆಯ ಕೇಂದ್ರವಾಗಿಸುವ ಪ್ರಯತ್ನ ನಡೆಯುವ ಅವಶ್ಯಕತೆ ಇದೆ.
ಬೇಸಿಗೆಯ ಕಾಲದಲ್ಲಿ ಕೆಂಪು ಮತ್ತು ಕಿತ್ತಳೆ ಬಣ್ಣದ ಹೂಗಳಿಂದ ಮರವೇ ಹೊಳೆಯುವಂತೆ ಕಾಣುತ್ತದೆ. ಇದರ ಸೌಂದರ್ಯದಿಂದಾಗಿ ಇದನ್ನು ಅಗ್ನಿ ಮರ ಅಥವಾ ಮೇ ಫ್ಲವರ್‌ಎಂದೂ ಕರೆಯುತ್ತಾರೆ. ನಗರದ ರಸ್ತೆ ಬದಿಗಳು, ಉದ್ಯಾನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಗುಲ್ಮೊಹರ್ ಮೂಲತಃ ಆಫ್ರಿಕಾದ ಪೂರ್ವ ಭಾಗದಲ್ಲಿರುವ ಮಡಗಾಸ್ಕರ್ ದ್ವೀಪಕ್ಕೆ ಸೇರಿದ ಮರ. ನಂತರ ಇದರ ಸೌಂದರ್ಯ ಮತ್ತು ನೆರಳಿನ ಗುಣದಿಂದ ಜಗತ್ತಿನ ಅನೇಕ ಉಷ್ಣವಲಯ ರಾಷ್ಟ್ರಗಳಿಗೆ ಪರಿಚಯಿಸಲಾಯಿತು. ಭಾರತಕ್ಕೆ ಈ ಮರವನ್ನು ಬ್ರಿಟಿಷರ ಆಡಳಿತ ಕಾಲದಲ್ಲಿ 19ನೇ ಶತಮಾನದಲ್ಲಿ ತರಲಾಯಿತು ಎಂದು ಹೇಳಲಾಗುತ್ತದೆ. ಆರಂಭದಲ್ಲಿ ಉದ್ಯಾನ ಮತ್ತು ರಸ್ತೆ ಅಲಂಕಾರಕ್ಕಾಗಿ ನೆಡಲಾಗಿದ್ದ ಈ ಮರ ನಂತರ ದೇಶದ ಬಹುತೇಕ ನಗರಗಳಿಗೆ ವ್ಯಾಪಿಸಿತು.
ಗುಲ್ಮೊಹರ್ ಮರ
ಗುಲ್ಮೊಹರ್ ನೋಡಲು ಅತ್ಯಂತ ಸುಂದರವಾಗಿದ್ದರೂ ಸಹ ಜಪಾನ್‌ನ ಚೆರ್ರಿ ಬ್ಲಾಸಮ್ (ಸುಕುರಾ) ಮರದ ಹೂವಿನ ಮಾದರಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿಲ್ಲ. ಜಪಾನ್ ಸರ್ಕಾರದ ಮಾದರಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಗುಲ್ಮೊಹರ್ ಹೂವು ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿ ಮಾರ್ಪಡಿಸಲು ಯೋಜನೆ ರೂಪಿಸುವ ಅವಶ್ಯಕತೆ ಇದೆ.
ಗುಲ್ಮೊಹರ್ ಮರಗಳು ಅತ್ಯಂತ ಸುಂದರವಾದರೂ, ಜಪಾನ್‌ನ ಚೆರ್ರಿ ಬ್ಲಾಸಮ್ ನಂತೆ ಜಾಗತಿಕ ಪ್ರವಾಸೋದ್ಯಮದ ಸಂಕೇತವಾಗಿಲ್ಲ. ಇದಕ್ಕೆ ಹಲವು ಸಾಮಾಜಿಕ, ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಸಂಬಂಧಿತ ಕಾರಣಗಳಿವೆ. ಚೆರ್ರಿ ಬ್ಲಾಸಮ್ ಜಪಾನ್ ಸಂಸ್ಕೃತಿಯ ಭಾಗವಾಗಿದೆ. ಹನಾಮಿ ಎಂಬ ಹಬ್ಬದ ಮೂಲಕ ಜನರು ಹೂವಿನ ಸೌಂದರ್ಯವನ್ನು ಆಚರಿಸುತ್ತಾರೆ. ಗುಲ್ಮೊಹರ್‌ಗೆ ಭಾರತದಲ್ಲಿ ಅಷ್ಟೊಂದು ದೊಡ್ಡ ಸಾಂಸ್ಕೃತಿಕ ಹಬ್ಬ ಅಥವಾ ಪರಂಪರೆ ನಿರ್ಮಾಣವಾಗಿಲ್ಲ.
ಜಪಾನ್ ತನ್ನ ಸಕುರಾವನ್ನು ಜಾಗತಿಕ ಪ್ರವಾಸಿ ಬ್ರಾೃಂಡ್ ಆಗಿ ರೂಪಿಸಿದೆ. ಹೂ ಬಿಡುವ ಸಮಯದ ವಿಶೇಷ ಕಾರ್ಯಕ್ರಮಗಳು, ಬೆಳಕು ಅಲಂಕಾರ, ಪ್ರವಾಸಿ ಪ್ಯಾಕೇಜ್‌ಗಳು ಮತ್ತು ಮಾಧ್ಯಮ ಪ್ರಚಾರದಿಂದ ಅದು ವಿಶ್ವಪ್ರಸಿದ್ಧವಾಗಿದೆ. ಜಪಾನ್‌ನಲ್ಲಿ ಸಕುರಾ ಮರಗಳ ಸುತ್ತ ಉತ್ತಮ ಉದ್ಯಾನಗಳು, ನದಿತೀರ ಮಾರ್ಗಗಳು ಮತ್ತು ಪ್ರವಾಸಿ ಸೌಲಭ್ಯಗಳನ್ನು ನಿರ್ಮಿಸಲಾಗಿದೆ. ಭಾರತದಲ್ಲಿ ಗುಲ್ಮೊಹರ್ ಮರಗಳ ಸೌಂದರ್ಯ ಇದ್ದರೂ, ಅದನ್ನು ವಿಶೇಷ ಪ್ರವಾಸಿ ಹಬ್ಬ ಅಥವಾ ಬ್ರಾೃಂಡ್ ಆಗಿ ಅಭಿವೃದ್ಧಿಪಡಿಸಿರುವುದು ಕಡಿಮೆ.
ಆಕರ್ಷಕ ಹೂಗಳು
ಗುಲ್ಮೊಹರ್ ಮರದ ಪ್ರಮುಖ ಆಕರ್ಷಣೆ ಅದರ ಹೂಗಳು. ಕೆಂಪು, ಕಿತ್ತಳೆ ಹಾಗೂ ಹಳದಿ ಮಿಶ್ರಿತ ಹೂಗಳು ಬೇಸಿಗೆಯಲ್ಲಿ ಮರವನ್ನು ಸಂಪೂರ್ಣ ಆವರಿಸುತ್ತವೆ. ಈ ಮರದ ಶಾಖೆಗಳು ಅಗಲವಾಗಿ ಹರಡುವುದರಿಂದ ಉತ್ತಮ ನೆರಳು ನೀಡುತ್ತದೆ. ಆದ್ದರಿಂದ ರಸ್ತೆ ಬದಿಗಳಲ್ಲಿ ಇದನ್ನು ಹೆಚ್ಚಾಗಿ ನೆಡುತ್ತಾರೆ. ಸಣ್ಣ ಸಣ್ಣ ಹಸಿರು ಎಲೆಗಳು ಮರಕ್ಕೆ ವಿಶಿಷ್ಟ ರೂಪವನ್ನು ನೀಡುತ್ತವೆ. ಗುಲ್ಮೊಹರ್ ಮರವು ಸಾಮಾನ್ಯವಾಗಿ ಮೇ ತಿಂಗಳಲ್ಲಿ ಅತ್ಯಧಿಕ ಹೂ ಬಿಡುತ್ತದೆ. ಆದ್ದರಿಂದ ಜನರು ಇದನ್ನು ಮೇ ಫ್ಲವರ್ ಎಂದು ಕರೆಯಲು ಆರಂಭಿಸಿ ದರು. ಗುಲ್ಮೊಹರ್ ಕೇವಲ ಅಲಂಕಾರಿಕ ಮರ ಮಾತ್ರವಲ್ಲ, ಇದು ಪರಿಸರ ಸಂರಕ್ಷಣೆಗೆ ಸಹಾಯಕವಾದ ಅಮೂಲ್ಯ ಮರವಾಗಿದೆ.

ಸರ್ಕಾರ ಏನು ಮಾಡಬೇಕು?

ರಾಜ್ಯದ ಬೆಂಗಳೂರು, ಮೈಸೂರಿನಲ್ಲಿ ಗುಲ್ಮೊಹರ್ ಹೆಚ್ಚಾಗಿ ಕಂಡು ಬರುತ್ತಿದೆ. ಈ ನಗರಗಳಲ್ಲಿ ಭವಿಷ್ಯದಲ್ಲಿ ಮೇ ಫ್ಲವರ್ ಫೆಸ್ಟಿವಲ್ , ಫೋಟೋಗ್ರಫಿ ವಾಕ್, ಸೈಕಲ್ ಟೂರ್, ಹೂ ಮಾರ್ಗಗಳ ಅಭಿವೃದ್ಧಿ, ಗುಲ್ಮೊಹರ್ ಕುರಿತು ಜಾಗತಿಕವಾಗಿ ಪ್ರಚಾರ ಮಾಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಬಹುದು. ಇಂತಹ ಕ್ರಮಗಳಿಂದ ವಿಶೇಷವಾಗಿ ಕೆಂಪು-ಕಿತ್ತಳೆ ಬಣ್ಣದಲ್ಲಿ ಹೊತ್ತಿ ಉರಿಯುವಂತೆ ಕಾಣುವ ಗುಲ್ಮೊಹರ್ ಮರಗಳ ದೃಶ್ಯವು ಭಾರತೀಯ ನಗರಗಳಿಗೆ ವಿಶಿಷ್ಟ ಗುರುತಾಗಬಹುದು.
ಜಪಾನ್ ದೇಶದ ಚೆರ್ರಿ ಬ್ಲಾಸಮ್

ಯಾವುದು ಹೆಚ್ಚು ಆಕರ್ಷಕ?

ಚೆರ್ರಿ ಬ್ಲಾಸಮ್ ಹಾಗೂ ಗುಲ್ಮೊಹರ್ ಎರಡೂ ಮರಗಳು ತಮ್ಮದೇ ಆದ ವೈಶಿಷ್ಟುೃ ಮತ್ತು ಸೌಂದರ್ಯದಿಂದ ಜನರನ್ನು ಆಕರ್ಷಿ ಸುತ್ತವೆ. ಇದರಲ್ಲಿ ಯಾವುದು ಹೆಚ್ಚು ಆಕರ್ಷಕ ಎಂಬ ಪ್ರಶ್ನೆ ಎದುರಾದಾಗ ಇದು ವ್ಯಕ್ತಿಗತ ಅಭಿರುಚಿಗೆ ಅವಲಂಬಿತವಾಗಿದೆ. ಶಾಂತ, ಮೃದು ಹಾಗೂ ಭಾವನಾತ್ಮಕ ಸೌಂದರ್ಯ ಇಷ್ಟವಿದ್ದರೆ ಚೆರ್ರಿ ಬ್ಲಾಸಮ್ ಆಕರ್ಷಿಸುತ್ತದೆ. ಪ್ರಕಾಶಮಾನ, ಆಕರ್ಷಕ ಹಾಗೂ ಉತ್ಸಾಹಭರಿತ ದೃಶ್ಯ ಇಷ್ಟವಿದ್ದರೆ ಗುಲ್ಮೊಹರ್ ಎಲ್ಲರಿಗೂ ಅಚ್ಚುಮೆಚ್ಚಾಗುತ್ತದೆ.
ಹೂ ಬಿಡುವ ಸಮಯ
ಗುಲ್ಮೊಹರ್ ಮರ ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಹೂ ಬಿಡುತ್ತದೆ. ಭಾರತದಲ್ಲಿ ವಿಶೇಷವಾಗಿ ಏಪ್ರಿಲ್ನಿಂದ ಜೂನ್ ತಿಂಗಳುಗಳ ನಡುವೆ ಹೆಚ್ಚು ಹೂ ಬೀಳುತ್ತದೆ. ಕೆಲವೆಡೆ ಮಾರ್ಚ್ ಅಂತ್ಯದಿಂದಲೇ ಹೂ ಕಾಣಿಸಿಕೊಳ್ಳುತ್ತದೆ. ಮಳೆಯ ಆರಂಭವಾದ ನಂತರ ಹೂವುಗಳ ಪ್ರಮಾಣ ಕಡಿಮೆಯಾಗುತ್ತದೆ. ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ನಗರಗಳಲ್ಲಿ ಮೇನಿಂದ ಜೂನ್ ನಡುವೆ ರಸ್ತೆ ಬದಿಗಳಲ್ಲಿ ಗುಲ್ಮೊಹರ್ ಮರಗಳು ಅತ್ಯಂತ ಆಕರ್ಷಕವಾಗಿ ಕಾಣಿಸುತ್ತವೆ.