ವಿವಿಧ ಕ್ಷೇತ್ರದ ಪ್ರತಿನಿಧಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಈ.ಸಿ.ನಿಂಗರಾಜ್ ಗೌಡ, ಅಂಶಿ ಪ್ರಸನ್ನಕುಮಾರ್, ಕ್ಯಾತನಹಳ್ಳಿ ಪ್ರಕಾಶ್, ಅರುಣ್‌ಕುಮಾರ್, ಸಾಲುಂಡಿ ದೊರೆಸ್ವಾಮಿ, ಎಸ್.ಬಾಲಕೃಷ್ಣ ಇನ್ನಿತರರಿದ್ದರು.
ಮೈಸೂರು: ಸಾವಿತ್ರಿಬಾಯಿ ಫುಲೆ ದೇಶದ ಮೊದಲ ಶಿಕ್ಷಕಿ. ಮಹಾನ್ ಸಮಾಜ ಸುಧಾರಕಿ. ಮಹಿಳಾ ಶಿಕ್ಷಣ, ದಲಿತರ ಹಕ್ಕುಗಳು ಮತ್ತು ಸಾಮಾಜಿಕ ಸಮಾನತೆಗಾಗಿ ಜೀವನವನ್ನೇ ಸಮರ್ಪಿಸಿದವರು. ಇಂತಹ ಮಹನೀಯರ ತತ್ವ ಆದರ್ಶವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ಹೇಳಿದರು.
ಮೈಸೂರು ಕನ್ನಡ ವೇದಿಕೆ ವತಿಯಿಂದ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಹಾಗೂ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾಮಿ ವಿವೇಕಾನಂದರ ಚಿಂತನೆಗಳು ಇಂದಿಗೂ ಶಿಕ್ಷಣ, ಸೇವೆ ಮತ್ತು ಸ್ವಾಭಿಮಾನದ ಮೂಲಕ ಸಮಾಜವನ್ನು ಮುನ್ನಡೆಸುವ ಶಕ್ತಿಯಾಗಿವೆ. ಸಾವಿತ್ರಿಬಾಯಿ ಫುಲೆ ಅವರ ಜೀವನವು ಶಿಕ್ಷಣವೇ ಸಾಮಾಜಿಕ ಕ್ರಾಂತಿಯ ಮೂಲ ಎಂಬ ಸಂದೇಶ ನೀಡುತ್ತದೆ ಎಂದರು.
ವಿವೇಕಾನಂದ ಭಾರತೀಯ ಆತ್ಮಚಿಂತನೆಯ ಜಾಗತಿಕ ರಾಯಭಾರಿ. ಯುವಶಕ್ತಿಗೆ ದಾರಿ ತೋರಿದ ಗುರು ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಆಧ್ಯಾತ್ಮಿಕ ನೆಲೆ ನೀಡಿದ ಚಿಂತಕ. ಭಾರತ ದೇಶ ಹಾಗೂ ಹಿಂದೂ ಧರ್ಮದ ತಾಕತ್ತನ್ನು ಇಡೀ ವಿಶ್ವಕ್ಕೆ ಸಾರಿದವರು. ಯುವಕರಿಗೆ ಸ್ಫೂರ್ತಿದಾತರು. ಅವರು ಕಟ್ಟಿದ ರಾಮಕೃಷ್ಣ ಆಶ್ರಮ ದೇಶದ ಉನ್ನತಿಗೆ ಕೆಲಸ ಮಾಡುತ್ತಿದೆ. ಭಾರತ ವಿಶ್ವಗುರು ಆಗಬೇಕು ಎಂಬುದು ಅವರ ಕನಸಾಗಿತ್ತು ಎಂದರು.
ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ ಮಾತನಾಡಿ, ನಾಡುನುಡಿಗೆ ಧಕ್ಕೆಯಾದಾಗ ಸುಮ್ಮನಿರುವುದಿಲ್ಲ. ಎಲ್ಲ ಮಹನೀಯರ ಬಗ್ಗೆಯೂ ನಮಗೆ ಗೌರವವಿದೆ ಎಂದು ತಿಳಿಸಿದರು.
ಸಮಾಜ ಸೇವಕಿ ಪಾರ್ವತಮ್ಮ, ಸಹ ಶಿಕ್ಷಕಿ ಎಲ್.ಕೆ.ರೂಪಾ ಪ್ರಮೋದ್, ಪೌರಕಾರ್ಮಿಕ ಮಹಿಳೆ ಮಂಜುಳಾ ಅವರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ, ಪತ್ರಕರ್ತ ಎಂ.ಮಹೇಶ್ ಭಗೀರಥ, ಜ್ಯೋತಿಷಿ ಕೆ.ಎನ್.ಸುಬ್ರಹ್ಮಣ್ಯ ಶಾಸ್ತ್ರಿ, ಸಾಮಾಜಿಕ ಹೋರಾಟಗಾರ ಸಾಯಿ ಚಾಮರಾಜ ಹಾಗೂ ಉದ್ಯಮಿ ನಂದಕುಮಾರ್ ಅವರಿಗೆ ಸ್ವಾಮಿ ವಿವೇಕಾನಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕದ ಉಪಾಧ್ಯಕ್ಷ ಸಾಲುಂಡಿ ದೊರೆಸ್ವಾಮಿ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ರಾಜ್ಯ ವೈಚಾರಿಕ ಚಿಂತಕರ ವೇದಿಕೆಯ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ರೈತ ಸಂಘದ ಅಧ್ಯಕ್ಷ ಅರುಣ್‌ಕುಮಾರ್, ನಿವೃತ್ತ ಶಿಕ್ಷಕ ಮನೋಹರ್ ಇದ್ದರು