ಮೈಸೂರು ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಗಣಿತ ವಿಷಯದ ಕುರಿತು ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನವನ್ನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕರಾದ ಪ್ರೊ. ಬಿ. ವಿ. ಸಾಂಬಶಿವಯ್ಯ ಉದ್ಘಾಟಿಸಿದರು. ಪ್ರೊ.ರಾಮಜಯಂ ಸಹದೇವನ್, ಡಾ.ಎಂ.ಪ್ರಭು ಹಾಗೂ ಇತರರು ಇದ್ದರು.
ಮೈಸೂರು: ಗಣಿತವು ಸ್ಪಷ್ಟತೆಯ ಸಾಧನವಾಗಿದ್ದು, ಅದು ಕೇವಲ ಗಣಿತದ ಸಮಸ್ಯೆಗಳನ್ನಷ್ಟೇ ಅಲ್ಲ, ನೈಜ ಜೀವನದ ಸಮಸ್ಯೆಗಳನ್ನೂ ಪರಿಹರಿಸುತ್ತದೆ. ಜಗತ್ತಿನಿಂದ ಆಕಾಶಗಂಗೆವರೆಗೆ ಗಣಿತದ ವಿವರಣೆ ಕಂಡುಬರುತ್ತದೆ ಎಂದು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕರಾದ ಪ್ರೊ. ಬಿ. ವಿ. ಸಾಂಬಶಿವಯ್ಯ ಅಭಿಪ್ರಾಯಪಟ್ಟರು.
ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಗಣಿತ ವಿಭಾಗ ಹಾಗೂ ಐಕ್ಯೂಎಸಿ ವಿಭಾಗದ ವತಿಯಿಂದ ಗಣಿತದ ಉದಯೋನ್ಮುಖ ವಿಷಯಗಳು ಮತ್ತು ಅದರ ಅನ್ವಯಗಳು ವಿಷಯದ ಕುರಿತು ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಗಣಿತವು ವ್ಯವಹಾರ, ಅರ್ಥಶಾಸ್ತ್ರ ಸೇರಿದಂತೆ ಎಲ್ಲ ವಿಷಯಗಳಲ್ಲಿ ಅಭಿವೃದ್ಧಿ ಹೊಂದಿದ್ದು, ಮಾನವನ ಅರಿವು ಮತ್ತು ನೈಜ ಸಮಸ್ಯೆಗಳ ನಡುವೆ ಸೇತುವೆಯಾಗಿದೆ. ವಿದ್ಯಾರ್ಥಿಗಳು ಈ ಸಮ್ಮೇಳನವನ್ನು ಪ್ರಶ್ನೆಗಳನ್ನು ಕೇಳಿ, ಚರ್ಚೆ ಮಾಡಿ, ಪಠ್ಯ ಮತ್ತು ಪಠ್ಯೇತರ ವಾಗಿ ಗಣಿತದ ಬೆಳವಣಿಗೆಯನ್ನು ಅರಿಯಲು ಬಳಸಿಕೊಳ್ಳಬೇಕು ಎಂದರು.
ಮದ್ರಾಸ್ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಮಜಯಂ ಸಹದೇವನ್ ಮಾತನಾಡಿ, ಗಣಿತವು ಸ್ಥಿರವಾಗಿರುವ ವಿಷಯವಲ್ಲ, ಇದು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿದೆ. ಆರಂಭದಲ್ಲಿ ಸಂಖ್ಯೆಗಳ ಮಟ್ಟಿಗೆ ಸೀಮಿತವಾಗಿದ್ದ ಗಣಿತ ಇಂದು ನೈಜ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಸ್ಥಾನವನ್ನು ಪಡೆದಿದೆ. ಡೇಟಾ ಸೈನ್ಸ್, ಮಷಿನ್ ಲನಿರ್ಂಗ್, ಕೃತಕ ಬುದ್ಧಿಮತ್ತೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಗಣಿತದ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಪಠ್ಯಪುಸ್ತಕದ ಓದಿನಷ್ಟೇ ಅಲ್ಲದೆ, ನೈಜ ಜೀವನದಲ್ಲಿ ಗಣಿತದ ಅನ್ವಯಗಳನ್ನು ಅನ್ವೇಷಿಸಬೇಕು ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲ ಡಾ.ಎಂ.ಪ್ರಭು ಮಾತನಾಡಿ, ಸಮಾಜದ ಪ್ರತಿಯೊಂದು ಹಂತದಲ್ಲಿಯೂ ಗಣಿತ ಅಡಕವಾಗಿದೆ. ಬೀದಿ ವ್ಯಾಪಾರಿಯಿಂದ ಹಿಡಿದು ಉದ್ಯಮಿಗಳವರೆಗೂ ಎಲ್ಲರೂ ಸಂಖ್ಯೆಗಳೊಂದಿಗೆ ವ್ಯವಹರಿಸುತ್ತಿದ್ದಾರೆ. ಗಣಿತವು ಸಂಶೋಧನೆ, ಅಂಕಿಅಂಶ, ವ್ಯವಹಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅಗತ್ಯವಾಗಿದ್ದು, ಇದು ಎಲ್ಲಾ ವಿಜ್ಞಾನ ಮತ್ತು ಸಮಾಜದ ಮೂಲಭೂತ ಆಧಾರವಾಗಿದೆ ಎಂದು ಅಭಿಪ್ರಾಯಪಟ್ಟರು.