ಮೈಸೂರು ನಗರದ ಮಾನಸಗಂಗೋತ್ರಿಯ ಇಎಂಆರ್‌ಸಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕದಿರು ಕೃತಿಯನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಬಿಡುಗಡೆ ಮಾಡಿದರು. ಪ್ರೊ.ಸುಕನ್ಯಾ ಮಾರುತಿ, ಡಾ.ಸಬಿಹಾ ಭೂಮಿಗೌಡ, ಡಾ.ಸೋಮಶೇಖರ್ ಹಾಗೂ ಇತರರು ಇದ್ದರು.
ಮೈಸೂರು: ಇಂದಿನ ಪ್ರಾಧ್ಯಾಪಕರು, ಮೇಷ್ಟ್ರುಗಳು ಬರೆಯಲು, ಚಳವಳಿಯಲ್ಲಿ ಭಾಗವಹಿಸಲು ಕುಂಟು ನೆಪ ಹೇಳುತ್ತಾರೆ. ಸಮಾನತೆಯ ಬಗ್ಗೆ ಒಲವು, ಸಾಮಾಜಿಕ ಬದ್ಧತೆ ಇದ್ದರೆ ಮಾತ್ರ ಚಳವಳಿಯಲ್ಲಿ ತೊಡಗಲು ಸಾಧ್ಯ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ನಗರದ ಮಾನಸಗಂಗೋತ್ರಿಯ ಇಎಂಆರ್‌ಸಿ ಸಭಾಂಗಣದಲ್ಲಿ ಭಾನುವಾರ ‘ಚಳುವಳಿಗಳ ಸಂಗಾತಿ ಮಂಜುಳಾ ಮೇಡಂ ನೆನಪಿನ ಕಾರ್ಯಕ್ರಮ’ ಅಂಗವಾಗಿ ಆಯೋಜಿಸಿದ್ದ ಸಾಕ್ಷೃಚಿತ್ರ ಪ್ರದರ್ಶನ, ಕದಿರು ಪುಸ್ತಕ ಬಿಡುಗಡೆ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅನೇಕ ಕಷ್ಟಗಳ ನಡುವೆ ಮಂಜುಳಾ ಹೋರಾಟಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡಿದ್ದರು. ಬರವಣಿಗೆ ಮತ್ತು ಚಳುವಳಿಯನ್ನು ಸಮನ್ವಯಗೊಳಿಸಿದ ಅವರು ಸಮಾನತೆ ಮತ್ತು ಸಾಮಾಜಿಕ ಬದ್ಧತೆಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಜ್ಞಾನ ದಾಹದಿಂದ ಸಾಹಿತ್ಯದ ವಿವಿಧ ಮಜಲುಗಳನ್ನು ಅಧ್ಯಯನ ಮಾಡಿ ಸಾಮಾಜಿಕ ಚಿಂತನೆಗಳಿಗೆ ಮಂಜುಳಾ ಅವರು ದಿಕ್ಕು ತೋರಿದರು.ಮಂಜುಳ ಅವರು ಪ್ರಾಚೀನ ಸಾಹಿತ್ಯದಿಂದ ಆಧುನಿಕ ಸಾಹಿತ್ಯದವರೆಗೆ ವ್ಯಾಪಕ ಅಧ್ಯಯನ ನಡೆಸಿ ವಚನ ಚಳುವಳಿ, ಮಹಿಳಾ ಸಾಹಿತ್ಯ, ಜಾನಪದ ಅಧ್ಯಯನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ಲೇಖನಗಳನ್ನು ರಚಿಸಿದ್ದಾರೆ. ಜಾನಪದ ಸಾಹಿತ್ಯದ ವಿಶ್ಲೇಷಣೆಗೆ ಅವರ ಬರಹಗಳು ಹೊಸ ದೃಷ್ಟಿಕೋನ ನೀಡುತ್ತವೆ ಎಂದರು.
ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಸುಕನ್ಯಾ ಮಾರುತಿ ಅವರಿಗೆ ‘ಮಂಜುಳ ಮೇಡಂ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ವಿಶ್ರಾಂತ ಕುಲಪತಿ ಡಾ.ಸಬಿಹಾ ಭೂಮಿಗೌಡ, ಮೈಸೂರು ವಿಶ್ವವಿದ್ಯಾಲದಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಸೋಮಶೇಖರ್ ಇದ್ದರು.