ಕೆ.ಆರ್.ನಗರ ತಾಲೂಕಿನ ಹೆಬ್ಬಾಳು ಗ್ರಾಮದದಲ್ಲಿ ಹೆಬ್ಬಾಳಮ್ಮ(ಮಸಣಮ್ಮ) ದೇವಿಯ ಪೂಜಾ ಮಹೋತ್ಸವದಲ್ಲಿ ಕಂಡು ಬಂದ ಭಕ್ತರು. 
ಮೈಸೂರು

ಮಸಣಮ್ಮದೇವಿ ಪೂಜಾ ಮಹೋತ್ಸವ ಸಂಪನ್ನ

ಕೆ.ಆರ್.ನಗರ: ತಾಲೂಕಿನ ಹೆಬ್ಬಾಳು ಗ್ರಾಮದ ಹೆಬ್ಬಾಳಮ್ಮ(ಮಸಣಮ್ಮ) ದೇವಿಯ ಪೂಜಾ ಮಹೋತ್ಸವ ಗುರುವಾರ ಸಂಪನ್ನವಾಯಿತು.
15 ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಹೆಬ್ಬಾಳಮ್ಮ ತಾಯಿಯ ಉತ್ಸವ ಹಲವು ದಶಕಗಳಿಂದ ನಿಂತುಹೋಗಿತ್ತು. 25 ವರ್ಷಗಳ ನಂತರ ಮಂಗಳವಾರದಿಂದ ಪೂಜಾ ಮಹೋತ್ಸವ ಸಂಭ್ರಮದಿಂದ ಜರುಗಿತು.
ಮಂಗಳವಾರ ಅಡಗನಹಳ್ಳಿ ಗುರುಗಳಾದ ಮಹದೇವಪ್ಪ ಅವರ ನೇತೃತ್ವದಲ್ಲಿ ಬೆಳಗ್ಗೆ ಹೆಬ್ಬಾಳಮ್ಮ ದೇವಿಯ ಉತ್ಸವ ಮೂರ್ತಿಗೆ ಪವಿತ್ರ ಕ್ಷೇತ್ರ ಕಪ್ಪಡಿ ಬಳಿಯಲ್ಲಿರುವ ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮತ್ತು ಹೋಮ ಹವನ ನಡೆಸಲಾಯಿತು. ಒಡವೆ, ವಸ್ತ್ರ, ಹೂವುಗಳಿಂದ ಅಲಂಕರಿಸಿ ನದಿಯ ದಡದಲ್ಲಿ ಪೂಜೆ ನೆರವೇರಿಸಲಾಯಿತು. ನಂತರ ದೇವರ ಮೂರ್ತಿಯನ್ನು ತಮಟೆ, ಛತ್ರಿ, ಛಾಮರ ಮತ್ತು ಮಂಗಳವಾದ್ಯದೊಂದಿಗೆ ಕಳಸಗಳನ್ನು ಹೊತ್ತ ಬಾಲಕಿಯರು, ವೀರಕುಣಿತಗಳೊಂದಿಗೆ ಮೆರವಣಿಗೆ ಮೂಲಕ ತಂದು ಹೆಬ್ಬಾಳು ಗ್ರಾಮದ ವಿವಿಧ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ದೇವಸ್ಥಾನಕ್ಕೆ ತಂದು ಇರಿಸಲಾಯಿತು.
ಬುಧವಾರ ಬೆಳಗ್ಗೆ 7.30 ರಿಂದ ಅಭಿಷೇಕ, ಮಹಾಮಂಗಳಾರತಿ ಮತ್ತು ವಿಶೇಷ ಪೂಜಾ ಕೈಂಕರ್ಯ ನೆರವೇರಿದವು. ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಸರತಿಯಲ್ಲಿ ನಿಂತು ದೇವರಿಗೆ ಪೂಜೆ ಸಲ್ಲಿಸಿದರು. ದಶಕಗಳ ನಂತರ ನಡೆಯುತ್ತಿರುವ ಪೂಜಾ ಕಾರ್ಯಕ್ರಮಕ್ಕೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರಿಂದ ಹೆಬ್ಬಾಳು ಗ್ರಾಮ ಜನ ಜಂಗುಳಿ ಕಂಡು ಬಂತು.
ದೇವರ ಉತ್ಸವದ ಹಿನ್ನೆಲೆಯಲ್ಲಿ ಸಿಹಿ ತಿಂಡಿಗಳ ವ್ಯಾಪಾರಸ್ಥರು, ಆಟಿಕೆಗಳ ಮಾರಾಟಗಾರರು, ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿಗಳನ್ನು ತೆರೆದಿದ್ದರು. ಉತ್ಸವದಲ್ಲಿ ಪಾಲ್ಗೊಂಡ ಭಕ್ತರು ಮತ್ತು ಗ್ರಾಮಸ್ಥರಿಗೆ ದೇವಸ್ಥಾನದ ಸಮಿತಿಯಿಂದ ಸಾಮೂಹಿಕ ಮಾಂಸದೂಟ ಪ್ರಸಾದ ಏರ್ಪಡಿಸಲಾಗಿತ್ತು.
ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಸೇರಿದಂತೆ ವಿವಿಧ ಗಣ್ಯರು ದೇವರ ದರ್ಶನ ಪಡೆದರು. ಗ್ರಾಪಂ ಮಾಜಿ ಉಪಾಧ್ಯಕ್ಷ ಎಚ್.ಕೆ.ನಾಗೇಶ್, ಮಾಜಿ ಸದಸ್ಯ ಎಚ್.ಎಸ್.ವೆಂಕಟರಾಮು, ಸಮಾಜ ಸೇವಕ ಎಚ್.ವಿ.ಪುನೀತ್‌ರಾಜ್ ಹೆಬ್ಬಾಳು, ಗ್ರಾಮದ ಮುಖಂಡರಾದ ಸ್ವಾಮಿಗೌಡ, ಶಿವಣ್ಣೇಗೌಡ, ಕೃಷ್ಣೇಗೌಡ, ವಿಠಲೇಗೌಡ, ಶಿವರಾಜೇಗೌಡ, ಕೃಷ್ಣೇಗೌಡ, ಈರಪ್ಪ, ಸುರೇಶ್‌ನಾಯಕ, ದೇವರಾಜ್, ಇತರರು ಇದ್ದರು. ಅರ್ಚಕರಾದ ಎಚ್.ಎ.ಸುನೀಲ್, ಮಹದೇವಪ್ಪ ಧಾರ್ಮಿಕ ಕೈಂಕರ್ಯ ನೆರವೇರಿಸಿದರು.