Marimallappa College 
ಮೈಸೂರು

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಮರಿಮಲ್ಲಪ್ಪ ಕಾಲೇಜು ಸಾಧನೆ

ಅವಿನಾಶ್ ಜೈನಹಳ್ಳಿ
ದ್ವಿತೀಯ ಪಿಯು ಪರೀಕ್ಷೆಯಲ್ಲಿ ನಗರದ ಪ್ರತಿಷ್ಠಿತ ಮರಿಮಲ್ಲಪ್ಪ ಪದವಿಪೂರ್ವ ಕಾಲೇಜಿಗೆ ಈ ಬಾರಿ ಶೇ.96 ರಷ್ಟು ಫಲಿತಾಂಶ ಬಂದಿದ್ದು, ಉತ್ತಮ ಸಾಧನೆ ಮಾಡಿದೆ. ಕಳೆದ ವರ್ಷ ಶೇ.92 ರಷ್ಟು ಇದ್ದ ಫಲಿತಾಂಶ ಈ ಬಾರಿ ಶೇ.4 ರಷ್ಟು ಹೆಚ್ಚಾಗಿದ್ದು, ಸಂಸ್ಥೆಯ ಸಾಧನೆ ರಾಜ್ಯಾದ್ಯಂತ ಗಮನ ಸೆಳೆದಿದೆ.
ಕಾಲೇಜಿನ 184 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ ವಿಜ್ಞಾನ ವಿಭಾಗದಲ್ಲಿ 113, ವಾಣಿಜ್ಯ ವಿಭಾಗದಲ್ಲಿ 44, ಕಲಾ ವಿಭಾಗದಲ್ಲಿ 27 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಮರಿಮಲ್ಲಪ್ಪ ಸಂಜೆ ಪಿಯು ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ 8 ವಿದ್ಯಾರ್ಥಿಗಳ ಪೈಕಿ 6 ಜನರು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ವಿ.ಅಶ್ವಿನಿ 531 ಅಂಕ ಪಡೆದಿದ್ದು, ಗೃಹಿಣಿಯಾಗಿ ಉತ್ತಮ ಸಾಧನೆ ಮಾಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಡಿ.ದಿವ್ಯಾಶ್ರೀ ಟಾಪರ್:

ಕಾಲೇಜಿನ ಡಿ.ವಿದ್ಯಾಶ್ರೀ ವಾಣಿಜ್ಯ ವಿಭಾಗದಲ್ಲಿ 598 ಅಂಕ ಪಡೆದು ಟಾಪರ್ ಆಗಿದ್ದಾಳೆ. ಕನ್ನಡ 97, ಇಂಗ್ಲಿಷ್ 95, ಎಕನಾಮಿಕ್ಸ್ 100, ಸ್ಟಾಟಿಸ್ಟಿಕ್ಸ್ 100, ಬಿಜಿನೆಸ್ 99, ಅಕೌಂಟ್ಸ್ 98 ಅಂಕ ಪಡೆದಿದ್ದಾಳೆ.
ಈಕೆಯ ತಂದೆ ದಕ್ಷಿಣಾಮೂರ್ತಿ ತಳ್ಳುವ ಗಾಡಿಯಲ್ಲಿ ಫಾಸ್ಟ್‌ಫುಡ್ ತಯಾರಿಸಿ ಮಾರಾಟ ಮಾಡುತ್ತಾರೆ. ಪಾಠಕ್ಕೂ ಹೋಗದೆ ತರಗತಿಯ ಪಾಠ ಕೇಳಿ ಉತ್ತಮ ಸಾಧನೆ ಮಾಡಿದ್ದಾಳೆ. ಈಕೆ ಕ್ರೀಡೆಯಲ್ಲೂ ಮುಂದಿದ್ದು, ಮನೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಎದೆಗುಂದದೆ ರಾಜ್ಯಮಟ್ಟದ ಕ್ರೀಡಾಕೂಟದಲ್ಲೂ ಸಾಧನೆ ಮಾಡಿದ್ದಾಳೆ.
ಹೂವಿನ ವ್ಯಾಪಾರಿ ಸ್ವಾಮಿಗೌಡ ಮಗಳು ಸ್ಫೂರ್ತಿ ವಾಣಿಜ್ಯ ವಿಭಾಗದಲ್ಲಿ 587 ಅಂಕ ಗಳಿಸಿ ಗಮನ ಸೆಳೆದಿದ್ದಾಳೆ. ಅಂದಿನ ಪಾಠವನ್ನು ಅಂದೇ ಅಭ್ಯಾಸ ಮಾಡುತ್ತಿದ್ದೆ ಎನ್ನುತ್ತಾರೆ ಸ್ಫೂರ್ತಿ. ಮುಂದೆ ಸಿಎ ಆಗಬೇಕು ಎನ್ನುವುದು ಇವರ ಕನಸು. ಮನೆಯಲ್ಲಿ ಎಲ್ಲ ಕೆಲಸವನ್ನು ಮುಗಿಸಿ ಓದುತ್ತಿದ್ದಳು.

ವಿಜ್ಞಾನದಲ್ಲಿ ಬಿ.ಎ.ಗಾಯತ್ರಿ ಪ್ರಥಮ:

ಬಿ.ಎ.ಗಾಯತ್ರಿ 590 ಅಂಕಗಳಿಸಿದ ಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಕನ್ನಡ 99, ಇಂಗ್ಲಿಷ್ 99, ಭೌತಶಾಸ 99, ರಾಸಾಯನಶಾಸ 93, ಗಣಿತ 100, ಕಂಪ್ಯೂಟರ್ ಸೈನ್ಸ್‌ನಲ್ಲಿ 100 ಅಂಕ ಪಡೆದಿದ್ದಾಳೆ.
ಹೀರಾ ಎಂ. ಕಂಬಲಿ ಕಲಾ ವಿಷಯದಲ್ಲಿ 590 ಅಂಕ ಪಡೆದಿದ್ದಾಳೆ. ಕನ್ನಡ 98, ಇಂಗ್ಲಿಷ್ 96, ಇತಿಹಾಸ 100, ಅರ್ಥಶಾಸ್ತ್ರ 100, ಭೂಗೋಳಶಾಸ್ತ್ರ 99, ರಾಜ್ಯಶಾಸ್ತ್ರ 97 ಅಂಕ ಪಡೆದಿದ್ದಾಳೆ. ಮೂಲತಃ ಹಾವೇರಿ ಜಿಲ್ಲೆಯ ಕರ್ಜಗಿಯ ಹೀರಾ ಮರಿಮಲ್ಲಪ್ಪ ಕಾಲೇಜಿನಲ್ಲೇ ಓದಬೇಕೆಂಬ ಆಸೆಯಿಂದ ಮೈಸೂರಿಗೆ ಬಂದು ತಮ್ಮ ಮಾಮನ ಮನೆಯಲ್ಲಿದ್ದುಕೊಂಡೇ ವ್ಯಾಸಂಗ ಮಾಡಿದ್ದಾಳೆ. ಇವರ ತಾಯಿ ಗೃಹಿಣಿ.
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಎನ್.ಪಂಚಾಕ್ಷರಸ್ವಾಮಿ, ಶೈಕ್ಷಣಿಕ ಅಧಿಕಾರಿ ಮಂಗಳಾ ಮುದ್ದುಮಾದಪ್ಪ, ಪ್ರಾಂಶುಪಾಲರಾದ ಎಚ್.ಬಿ.ಆಶಾ, ಸುಚೇತನ್ ಸೇರಿ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಸಿಬ್ಬಂದಿ ಅಭಿನಂದಿಸಿದರು.