reservation 
ಮೈಸೂರು

23ರಂದು ಒಳ ಮೀಸಲಾತಿ ವಿರೋಧಿಸಿ ಕಾಲ್ನಡಿಗೆ ಜಾಥಾ

ಜ್ಞಾನಿಕವಾಗಿ ಹಂಚಿಕೆ ಮಾಡಲಾಗದ ಒಳ ಮೀಸಲಾತಿ ಕಾಯ್ದೆ ರದ್ದುಗೊಳಿಸಬೇಕೆಂದು ಆಗ್ರಹಿಸಿ ಮಾ.23ರ ಬೆಳಗ್ಗೆ 10.30ಕ್ಕೆ ವರುಣ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾವನ್ನು ವರುಣ ವಿಧಾನಸಭಾ ಕ್ಷೇತ್ರದ ಬಲಗೈ ಸಮುದಾಯಗಳ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ಹಿರಿಯ ಮುಖಂಡ ಚೋರನಹಳ್ಳಿ ಶಿವಣ್ಣ ತಿಳಿಸಿದರು.
ಸುಮಾರು 600 ರಿಂದ 800 ಜನ ಪಾಲ್ಗೊಂಡು ಜಿಲ್ಲಾಧಿಕಾರಿ ಕಚೇರಿ ತಲುಪಿ ಮನವಿಪತ್ರ ಸಲ್ಲಿಸಲಾಗುವುದು. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿನ 101 ಜಾತಿಗಳಿಗೆ ಒಳ ಮೀಸಲಾತಿಯನ್ನು ವೈಜ್ಞಾನಿಕವಾಗಿ ಹಂಚಿಕೆ ಮಾಡಲು ಸಾಧ್ಯವೇ ಇಲ್ಲ. ಅದು ಸರ್ಕಾರ, ನ್ಯಾಯಾಲಯಗಳಿಗೂ ತಿಳಿದಿರುವ ವಿಷಯವಾಗಿದೆ. ಶಾಲಾ ದಾಖಲಾತಿ, ನೇಮಕಾತಿ, ಬಡ್ತಿ ವಿಚಾರಗಳಲ್ಲಿ ಇದು ಇನ್ನಷ್ಟು ಕಗ್ಗಂಟಾಗಲಿದೆ. ಆದರೂ ಆಳುವ ಸರ್ಕಾರಗಳು ಒಳ ಮೀಸಲಾತಿ ವಿಚಾರವನ್ನು ಮುನ್ನೆಲೆಗೆ ತಂದು ಇಡೀ ಪರಿಶಿಷ್ಟ ಜಾತಿಯನ್ನು ಬಗೆಹರಿಸಲಾಗದ ಗೊಂದಲಕ್ಕೆ ಸಿಲುಕಿಸಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಪ್ರಸಕ್ತ ನಾಗಮೋಹನ್ ದಾಸ್ ವರದಿಯಲ್ಲಿ ಮಾಡಿರುವ ವರ್ಗೀಕರಣಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಸಮಾನ ಶೋಷಿತ ಸಮುದಾಯಗಳನ್ನು ಯಾವುದೇ ಕುಲಶಾಸ್ತ್ರೀಯ ಅಧ್ಯಯನಗಳಿಲ್ಲದೆ ಬೇರೆ ಬೇರೆ ಗುಂಪುಗಳನ್ನಾಗಿ ವರ್ಗೀಕರಿಸಿರುವುದು ಶತ ಶತಮಾನಗಳಿಂದ ವಂಚನೆಗೊಳಗಾದ ಬಹು ಸಂಖ್ಯಾತ ಅಸ್ಪಶ್ಯ ಸಮುದಾಯಗಳಿಗೆ ಹಲವು ನೇಮಕಾತಿಗಳಲ್ಲಿ ಅರ್ಜಿಯನ್ನೇ ಹಾಕಲಾಗದೇ ಮತ್ತೊಮ್ಮೆ ಶೋಷಣೆಗೊಳಗಾಗಬೇಕಾದ ಪರಿಸ್ಥಿತಿಗೆ ದೂಡಲಾಗಿದೆ ಎಂದರು.
ಮುಖಂಡರಾದ ಭುಗತಗಳ್ಳಿ ಸಣ್ಣಮಾದು, ಶ್ರೀಧರ್ ದಂಡಿಕೆರೆ, ಎಡದೊರೆ ಮಹದೇವಯ್ಯ, ಮಹಾದೇವಸ್ವಾಮಿ, ಮರಿಸ್ವಾಮಿ ಹಾಗೂ ಸುನಿಲ್ ಮತ್ತಿತರರು ಇದ್ದರು.