ಅಗ್ನಿಗೆ ಆಹುತಿಯಾದ ಮಾರಾ ರೆಸ್ಟೋ ಪಬ್  
ಮೈಸೂರು

ಮಾರಾ ರೆಸ್ಟೋ ಪಬ್ ಅಗ್ನಿ ದುರಂತ: ಪಬ್, ಕಟ್ಟಡ ಮಾಲೀಕರ ವಿರುದ್ಧ ಎಫ್'ಐಆರ್

ಮೈಸೂರು: ಅಗ್ನಿ ದುರಂತಕ್ಕೆ ಒಳಗಾದ ದಟ್ಟಗಳ್ಳಿಯ ರಿಂಗ್ ರಸ್ತೆಯ ಮಾರಾ ರೆಸ್ಟೋ ಪಬ್ ಗ್ರಾಹಕರಿಗೆ ಲಿಕ್ಕರ್ ಪೂರೈಕೆ ಮಾಡಲು ಪರವಾನಗಿ ಪಡೆಯದೆ ಇರುವುದು ಬೆಳಕಿಗೆ ಬಂದಿದ್ದು, ಈ ಕುರಿತು ಕಟ್ಟಡ ಹಾಗೂ ಪಬ್ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದರ ಜತೆಗೆ ಪಬ್ ಹಲವು ಕಾನೂನುಗಳನ್ನು ಉಲ್ಲಂಘಿಸಿದೆ.
ಚಿತ್ರ ನಟ, ಪಬ್ ಮಾಲೀಕ ಪ್ರೀತಮ್ ಪುನೀತ್ ಹಾಗೂ ಕಟ್ಟಡ ಮಾಲೀಕ ಕೇಶವಮೂರ್ತಿ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಡಿಯಲ್ಲಿ ರೆಸ್ಟೋರೆಂಟ್ ನಡೆಸಲು ಮಾತ್ರ ಅನುಮತಿ ನೀಡಲಾಗಿತ್ತು. ಆದರೆ, ಕಾನೂನು ಬಾಹಿರವಾಗಿ ಗ್ರಾಹಕರಿಗೆ ಮದ್ಯ ಪೂರೈಕೆ ಮಾಡಲಾಗುತಿತ್ತು. ಯಾವುದೇ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಮಾಲೀಕರ ವಿರುದ್ಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲವು ಲೋಪಗಳು: ಶಾಲಾ, ಕಾಲೇಜು, ಧಾರ್ಮಿಕ ಸ್ಥಳಗಳು, ಆಸ್ಪತ್ರೆ, ವಸತಿ ಪ್ರದೇಶದ ಬಳಿಯಲ್ಲಿ ಮದ್ಯದ ಅಂಗಡಿ ತೆರೆಯಲು ಅವಕಾಶವಿಲ್ಲ. ಆದರೆ, ಮಾರಾ ರೆಸ್ಟೋ ಪಬ್ ಬಳಿಯಲ್ಲಿಯೇ ಆಸ್ಪತ್ರೆ ಹಾಗೂ ಮನೆಗಳು ಇದ್ದರೂ ಪಬ್ ರಾಜಾರೋಷವಾಗಿ ನಡೆಯುತಿತ್ತು. ಅದೂ ಸಹ ಕಾನೂನು ಬಾಹಿರವಾಗಿ. ಅಕ್ರಮವಾಗಿ ಪಬ್ ನಡೆಸುತ್ತಿದ್ದರೂ ಅಬಕಾರಿಯ ಅಧಿಕಾರಿಗಳು ಯಾವುದೇ ಶಿಸ್ತು ಕ್ರಮಕ್ಕೆ ಮುಂದಾ ಗದೆ ಇರುವುದು ಅಚ್ಚರಿ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಅಬಕಾರಿ ಡಿಸಿಯನ್ನು ಅಮಾನತುಗೊಳಿಸಲು ಸರ್ಕಾರಕ್ಕೆ ಶಿಫಾರಸು ಮಾಡುವಂತೆ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮಂಗಳವಾರ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿಗೆ ನಿರ್ದೇಶನ ನೀಡಿದ್ದಾರೆ.
ಎನ್‌ಒಸಿ ಪಡೆದಿಲ್ಲ: ಯಾವುದೇ ವಾಣಿಜ್ಯ ಕಟ್ಟಡದಲ್ಲಿ ವಹಿವಾಟು ಪ್ರಾರಂಭಿಸುವಾಗ ಅಗ್ನಿ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದಂತೆ ಅಗ್ನಿ ಶಾಮಕ ದಳದಿಂದ ಎನ್‌ಒಸಿ ಪಡೆಯಬೇಕು. ಆದರೆ, ಮಾರಾ ರೆಸ್ಟೋ ಪಬ್ ಎನ್‌ಒಸಿ ಪಡೆಯದೆ ಹಾಗೂ ಯಾವುದೇ ರೀತಿಯ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಇರುವುದು ಕಂಡು ಬಂದಿದೆ.