ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಜಠರ ಹಾಗೂ ಲಿವರ್‌ಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚುತ್ತಿದ್ದು, ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ಮಣಿಪಾಲ್ ಆಸ್ಪತ್ರೆಯ ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.
ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಸೈನ್ಸಸ್ (MIGS) ವತಿಯಿಂದ ಕೊಡಗು ಜಿಲ್ಲೆಯ ಜನರಿಗೆ ಜಠರ, ಜೀರ್ಣಾಂಗ, ಲಿವರ್ ಹಾಗೂ ಜೀರ್ಣಾಂಗ ಕ್ಯಾನ್ಸರ್‌ಗೆ ಸಂಬಂಧಿಸಿದ ವಿಶೇಷ ವೈದ್ಯಕೀಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಬುಧವಾರ ಮಡಿಕೇರಿ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ಗ್ಯಾಸ್ಟ್ರಿಟಿಸ್, ಅಸಿಡಿಟಿ, GERD, ಅಲ್ಸರ್, ಫ್ಯಾಟಿ ಲಿವರ್, ಮದ್ಯಪಾನದಿಂದ ಉಂಟಾಗುವ ಲಿವರ್ ಕಾಯಿಲೆ, ಪಿತ್ತಕೋಶದ ಕಲ್ಲು ಸೇರಿದಂತೆ ಹಲವು ಸಮಸ್ಯೆಗಳನ್ನು ಜನರು ಸಾಮಾನ್ಯ ಅಜೀರ್ಣ ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ. ನಿರಂತರ ಹೊಟ್ಟೆನೋವು, ನುಂಗಲು ತೊಂದರೆ, ಮಲವಿಸರ್ಜನೆಯ ಕ್ರಮದಲ್ಲಿ ಬದಲಾವಣೆ, ಕಪ್ಪು ಬಣ್ಣದ ಮಲ ಅಥವಾ ಕಾರಣವಿಲ್ಲದೆ ತೂಕ ಇಳಿಕೆಯಾಗುವಂತಹ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂದು ವೈದ್ಯರು ಎಚ್ಚರಿಸಿದರು.
ಮಣಿಪಾಲ್ ಆಸ್ಪತ್ರೆಯ ಹಿರಿಯ ಸಲಹೆಗಾರ ಡಾ. ಸತೀಶ್ ರಾವ್ ಎ.ಕೆ. ಮಾತನಾಡಿ, ಆರಂಭಿಕ ಹಂತದ ಜಠರಕರುಳಿನ ಕ್ಯಾನ್ಸರ್ ಪತ್ತೆಯಾದರೆ ಆಧುನಿಕ ಎಂಡೋಸ್ಕೋಪಿಕ್ ವಿಧಾನಗಳ ಮೂಲಕ ಚಿಕಿತ್ಸೆ ನೀಡಲು ಸಾಧ್ಯವಿದೆ ಎಂದರು.
ಎಂಡೋಸ್ಕೋಪಿಕ್ ಸಬ್‌ಮ್ಯೂಕೋಸಲ್ ಡಿಸೆಕ್ಷನ್ (ESD) ಸೇರಿದಂತೆ ಸುಧಾರಿತ ತಂತ್ರಜ್ಞಾನಗಳು ಕೆಲವು ಆರಂಭಿಕ ಹಂತದ ಜಠರಕರುಳಿನ ಕ್ಯಾನ್ಸರ್‌ಗಳನ್ನು ತೆರೆದ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆ ತೆಗೆದುಹಾಕಲು ನೆರವಾಗುತ್ತವೆ. ಭಾರತದಲ್ಲಿ ಸಮೀಕ್ಷೆಗೊಳಗಾದ ಘಟಕಗಳ ಪೈಕಿ ಶೇ.25.5ರಷ್ಟು ಘಟಕಗಳಲ್ಲಿ ಮಾತ್ರ ಥರ್ಡ್ ಸ್ಪೇಸ್ ಎಂಡೋಸ್ಕೋಪಿ ಸೌಲಭ್ಯ ಲಭ್ಯವಿದೆ ಎಂದು ತಿಳಿಸಿದರು.
ಹಿರಿಯ ಸಲಹೆಗಾರ ಡಾ. ವಾಸುದೇವ್ ಪೈ ಹೊಸದುರ್ಗ ಮಾತನಾಡಿ, ಭಾರತದಲ್ಲಿ ಜಠರಕರುಳಿನ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. GLOBOCAN 2024 ಅಂದಾಜಿನ ಪ್ರಕಾರ ಕೊಲೊರೆಕ್ಟಲ್, ಹೊಟ್ಟೆ ಮತ್ತು ಅನ್ನನಾಳದ ಕ್ಯಾನ್ಸರ್‌ಗಳ ಒಟ್ಟು ಹೊಸ ಪ್ರಕರಣಗಳ ಸಂಖ್ಯೆ ವಾರ್ಷಿಕ 1.7 ಲಕ್ಷಕ್ಕೂ ಅಧಿಕವಾಗಿದೆ ಎಂದು ಹೇಳಿದರು.
ಸತತ ಹೊಟ್ಟೆನೋವು ಅಥವಾ ಅಸ್ವಸ್ಥತೆ, ಮಲವಿಸರ್ಜನೆಯ ಕ್ರಮದಲ್ಲಿ ಬದಲಾವಣೆ ಹಾಗೂ ಜಾಂಡಿಸ್‌ನಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರಂಭಿಕ ಹಂತದಲ್ಲಿ ಪತ್ತೆಯಾದರೆ ಸೂಕ್ತ ಶಸ್ತ್ರಚಿಕಿತ್ಸೆ ಹಾಗೂ ಇತರ ಆಧುನಿಕ ಚಿಕಿತ್ಸಾ ವಿಧಾನಗಳನ್ನು ಬಳಸಲು ಸಾಧ್ಯವಾಗುತ್ತದೆ ಎಂದರು.
ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ, ಹೆಪಟಾಲಜಿ ಮತ್ತು ಟ್ರಾನ್ಸ್‌ಪ್ಲಾಂಟ್ ಫಿಸಿಶಿಯನ್ ಡಾ. ನಿಶ್ಚಯ್ ಆರ್. ಮಾತನಾಡಿ, 30ರಿಂದ 50 ವರ್ಷದೊಳಗಿನವರಲ್ಲಿ ಫ್ಯಾಟಿ ಲಿವರ್ ಮತ್ತು ಮದ್ಯಪಾನದಿಂದ ಉಂಟಾಗುವ ಲಿವರ್ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಆರಂಭಿಕ ಹಂತದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳು ಕಾಣಿಸಿಕೊಳ್ಳದಿರುವುದರಿಂದ ನಿಯಮಿತ ಲಿವರ್ ಫಂಕ್ಷನ್ ಟೆಸ್ಟ್ (LFT) ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸಿಕೊಳ್ಳುವುದು ಅಗತ್ಯ ಎಂದರು.
ಲಿವರ್ ವೈಫಲ್ಯ ಉಂಟಾದ ಸಂದರ್ಭದಲ್ಲಿ ಲಿವರ್ ಕಸಿ ಪ್ರಮುಖ ಚಿಕಿತ್ಸಾ ಆಯ್ಕೆಯಾಗಿದ್ದು, ಮಣಿಪಾಲ್ ಆಸ್ಪತ್ರೆಯಲ್ಲಿ ಕಳೆದ ಆರು ತಿಂಗಳಲ್ಲಿ ಐದು ಲಿವರ್ ಕಸಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದರು. ಅಂಗಾಂಗ ದಾನದ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕು ಎಂದೂ ಅವರು ಮನವಿ ಮಾಡಿದರು.
ಮಣಿಪಾಲ್ ಆಸ್ಪತ್ರೆಯ ಕ್ಲಿನಿಕಲ್ ಸರ್ವಿಸಸ್ ಮುಖ್ಯಸ್ಥ ಡಾ. ಉಪೇಂದ್ರ ಶೆಣೈ ಮಾತನಾಡಿ, ಜಠರ ಮತ್ತು ಲಿವರ್‌ಗೆ ಸಂಬಂಧಿಸಿದ ಗಂಭೀರ ಕಾಯಿಲೆಗಳಿಗೆ ವಿವಿಧ ವಿಭಾಗಗಳ ತಜ್ಞ ವೈದ್ಯರ ಸಮನ್ವಯ ಅಗತ್ಯವಿರುತ್ತದೆ. ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ, ಹೆಪಟಾಲಜಿ, ಅಡ್ವಾನ್ಸ್ಡ್ ಎಂಡೋಸ್ಕೋಪಿ, ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ, ಜಿಐ ಆಂಕಾಲಜಿ ಹಾಗೂ ಲಿವರ್ ಕಸಿ ವಿಭಾಗಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸುವುದರಿಂದ ರೋಗಿಯ ಸಂಪೂರ್ಣ ಚಿಕಿತ್ಸಾ ನಿರ್ವಹಣೆ ಸಾಧ್ಯವಾಗುತ್ತದೆ ಎಂದರು.
ಮೈಸೂರು ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಸಂದೀಪ್ ಪಟೇಲ್ ಬಿ.ಜೆ. ಮಾತನಾಡಿ, ಕೊಡಗಿನ ಜನರಿಗೆ ಗಂಭೀರ ಜೀರ್ಣಾಂಗ ಮತ್ತು ಲಿವರ್ ಕಾಯಿಲೆಗಳಿಗೆ ಸಂಬಂಧಿಸಿದ ತಜ್ಞ ವೈದ್ಯಕೀಯ ಸೇವೆಗಳು ಸುಲಭವಾಗಿ ದೊರೆಯುವಂತೆ ಆಸ್ಪತ್ರೆಯ ವತಿಯಿಂದ ವಿಶೇಷ ಔಟ್‌ರೀಚ್ ಕಾರ್ಯಕ್ರಮಗಳು ಹಾಗೂ ಆರಂಭಿಕ ತಪಾಸಣೆ ಬೆಂಬಲವನ್ನು ವಿಸ್ತರಿಸಲಾಗುತ್ತಿದೆ ಎಂದರು.
ಕೊಡಗು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಜನರು ಕಾಯಿಲೆಯ ಲಕ್ಷಣಗಳನ್ನು ನಿರ್ಲಕ್ಷಿಸದೆ ಆರಂಭಿಕ ಹಂತದಲ್ಲೇ ವೈದ್ಯರನ್ನು ಸಂಪರ್ಕಿಸುವ ಮೂಲಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಸಾಧ್ಯ ಎಂದು ವೈದ್ಯರು ಸಲಹೆ ನೀಡಿದರು.