ಸಾಂದರ್ಭಿಕ ಚಿತ್ರ 
ಮೈಸೂರು

ತುಂಡಾದ ಕೈಯನ್ನು ಮರುಜೋಡಿಸಿ ದಾಖಲೆ ಬರೆದ ಮಣಿಪಾಲ್ ವೈದ್ಯರು

ಮೈಸೂರು: ಒಂದು ಕ್ಷಣದ ದುರದೃಷ್ಟವೋ ಅಥವಾ ವಿಧಿಯಾಟವೋ ಗೊತ್ತಿಲ್ಲ. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನ ಕೈ ಯಂತ್ರಕ್ಕೆ ಸಿಲುಕಿ ಮಣಿಕಟ್ಟಿನಿಂದ ಸಂಪೂರ್ಣವಾಗಿ ತುಂಡಾಗಿತ್ತು. ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಆತನ ಬದುಕು ಅಲ್ಲಿಗೆ ಮುಗಿಯಿತು ಎಂದೇ ಭಾವಿಸಲಾಗಿತ್ತು. ಆದರೆ, ಮೈಸೂರಿನ ಮಣಿಪಾಲ್ ಆಸ್ಪತ್ರೆಯ ವೈದ್ಯರು ನಡೆಸಿದ 5 ಗಂಟೆಗಳ ಸುದೀರ್ಘ ಮತ್ತು ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಆತನ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದ್ದು ಆತನ ಕೈಯನ್ನು ಮರು ಜೋಡಿಸಲಾಗಿದೆ. ಈ ಮೂಲಕ ವೈದ್ಯಕೀಯ ಲೋಕದ ವಿಸ್ಮಯ ಕ್ಷಣವನ್ನು ಸೃಷ್ಟಿಸಲಾಗಿದೆ.
ಅವಘಡ ಸಂಭವಿಸಿದಾಗ ಕೈ ಮಣಿಕಟ್ಟಿನ ಭಾಗದಿಂದ ಸಂಪೂರ್ಣವಾಗಿ ಬೇರ್ಪಟ್ಟಿತ್ತು. ಆದರೆ ಧೃತಿಗೆಡದ ಯುವಕ ಮತ್ತು ಸಹೋದ್ಯೋಗಿಗಳು, ಘಟನೆ ನಡೆದ ಕೇವಲ ಎರಡು ಗಂಟೆಯೊಳಗೆ ತುಂಡಾದ ಕೈಯೊಂದಿಗೆ ಮಣಿಪಾಲ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ (ER) ಧಾವಿಸಿದ್ದರು. ಈ ಸುವರ್ಣ ಅವಧಿಯಲ್ಲಿ (ಗೋಲ್ಡನ್ ಅವರ್‌ನಲ್ಲಿ) ಆಸ್ಪತ್ರೆ ತಲುಪಿದ್ದು ಮತ್ತು ವೈದ್ಯರು ಕ್ಷಿಪ್ರವಾಗಿ ತೆಗೆದುಕೊಂಡ ನಿರ್ಧಾರವೇ ಶಸ್ತ್ರಚಿಕಿತ್ಸೆಯ ಯಶಸ್ಸಿಗೆ ಪ್ರಮುಖ ಕಾರಣವಾಯಿತು. ರೋಗಿಯ ದೇಹ ಮತ್ತು ಮಾನಸಿಕ ಸ್ಥಿತಿಯನ್ನು ಸ್ಥಿರಗೊಳಿಸಿ, ಶಸ್ತ್ರಚಿಕಿತ್ಸೆಗೆ ಸಜ್ಜುಗೊಳಿಸಲಾಯಿತು.
ಇದು ವಿಶೇಷ ಶಸ್ತ್ರಚಿಕಿತ್ಸೆಯಾಗಿದ್ದು, ಹಿರಿಯ ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಅಜಯ್ ಹೆಗ್ಡೆ ಮತ್ತು ಪ್ಲಾಸ್ಟಿಕ್ ಸರ್ಜನ್ ಡಾ. ವಿಜಯ್ ಕುಮಾರ್ ಎನ್. ನೇತೃತ್ವದ ತಂಡಕ್ಕೆ ಇದೊಂದು ದೊಡ್ಡ ಸವಾಲಾಗಿತ್ತು.
ಮೊದಲ ಹಂತದಲ್ಲಿ ಡಾ. ಅಜಯ್ ಹೆಗ್ಡೆ ಅವರ ತಂಡ, ರಕ್ತನಾಳಗಳ ಜೋಡಣೆಗೆ ಅನುಕೂಲವಾಗುವಂತೆ 'ಪ್ರಾಕ್ಸಿಮಲ್ ರೋ ಕಾರ್ಪೆಕ್ಟಮಿ' (Proximal Row Carpectomy) ವಿಧಾನವನ್ನು ಬಳಸಿತು. ಅಂದರೆ, ಮಣಿಕಟ್ಟಿನ ಜಜ್ಜಿಹೋದ ಸಣ್ಣ ಮೂಳೆಗಳನ್ನು ತೆಗೆದುಹಾಕಿ, ಕೆ-ವೈರ್ ಮತ್ತು ಬಾಹ್ಯ ಜೋಡಣೆ ಸಾಧನ ಮೂಲಕ ಮಣಿಕಟ್ಟಿನ ರಚನೆಯನ್ನು ಮರು ರೂಪಿಸಲಾಯಿತು.
ಇದಾದ ಬಳಿಕ ಡಾ. ವಿಜಯ್ ಕುಮಾರ್ ಅವರ ತಂಡವು ಅತ್ಯಂತ ಸವಾಲಿನ ಕೆಲಸಕ್ಕೆ ಕೈಹಾಕಿತು. ಮೈಕ್ರೋವಾಸ್ಕುಲರ್ ತಂತ್ರಜ್ಞಾನದ ಮೂಲಕ ಕತ್ತರಿಸಿ ಹೋಗಿದ್ದ ರಕ್ತನಾಳಗಳು, ಸೂಕ್ಷ್ಮ ನರಗಳು ಮತ್ತು ಸ್ನಾಯುರಜ್ಜುಗಳನ್ನು (Tendons) ಮರುಜೋಡಿಸಲಾಯಿತು. ಸತತ ಐದು ಗಂಟೆಗಳ ಶ್ರಮದ ನಂತರ, ಜೋಡಿಸಲಾದ ಕೈಯಲ್ಲಿ ರಕ್ತಸಂಚಾರ ಪುನರಾರಂಭಗೊಂಡಾಗ ವೈದ್ಯರ ಶ್ರಮ ಸಾರ್ಥಕಗೊಂಡಿತು. ಕೈಯ ಆಕ್ಸಿಜನ್ ಪರಿಪೂರ್ಣತೆ ಶೇ. 100ರಷ್ಟು ದಾಖಲಾಗಿದ್ದು ಶಸ್ತ್ರಚಿಕಿತ್ಸೆಯ ಸಂಪೂರ್ಣ ಯಶಸ್ಸು ಇಲ್ಲಿಗೆ ಖಾತರಿಯಾಯಿತು.
ಈ ಕಠಿಣ ಶಸ್ತ್ರಚಿಕಿತ್ಸೆಗೆ ಅರಿವಳಿಕೆ ತಜ್ಞರಾದ ಡಾ. ಮಂಜುನಾಥ್, ಡಾ. ಸ್ವಾತಿ ಮತ್ತು ಡಾ. ಬಾಲಸುಬ್ರಮಣಿಯನ್ ಅವರ ತಂಡ, ಹಾಗೂ ಡಾ. ಮಹದೇವ್ ನೇತೃತ್ವದ ಐಸಿಯು (ICU) ತಂಡ ಮತ್ತು ಆಪರೇಷನ್ ಥಿಯೇಟರ್ ಸಿಬ್ಬಂದಿಯ ಸಹಕಾರ ಪ್ರಮುಖವಾಗಿತ್ತು.
ಸಕಾಲದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರ ನಿಖರವಾದ ಶಸ್ತ್ರಚಿಕಿತ್ಸಾ ವಿಧಾನ ಮತ್ತು ವಿವಿಧ ವಿಭಾಗಗಳ ವೈದ್ಯರ ಸಂಘಟಿತ ಪ್ರಯತ್ನದಿಂದಾಗಿ ಯುವಕನ ಕೈಯನ್ನು ಮರು ಜೋಡಿಸಲು ಸಾಧ್ಯವಾಯಿತು. ಜಟಿಲವಾದ ತುರ್ತು ಆರೋಗ್ಯದ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಮೈಸೂರಿನ ಮಣಿಪಾಲ್ ಆಸ್ಪತ್ರೆಯು ಹೊಂದಿರುವ ಸಾಮರ್ಥ್ಯಕ್ಕೆ ಈ ಘಟನೆ ಸಾಕ್ಷಿಯಾಗಿದೆ.