ಸರಗೂರು ತಾಲೂಕಿನ ಕೆ.ಬೆಳತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಣಿಪಾಲ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಹೈಟೆಕ್ ಶೌಚಗೃಹವನ್ನು ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಬಿ.ಜೆ. ಸಂದೀಪ್ ಪಟೇಲ್ ಉದ್ಘಾಟಿಸಿದರು.  
ಮೈಸೂರು

ಶಿಕ್ಷಣ ಕ್ಷೇತ್ರಕ್ಕೆ ಮಣಿಪಾಲ್ ಚಾರಿಟಬಲ್ ಟ್ರಸ್ಟ್ ನಿರಂತರ ಕೊಡುಗೆ

ಆಸ್ಪತ್ರೆಯ ನಿರ್ದೇಶಕ ಬಿ.ಜೆ.ಸಂದೀಪ್ ಪಟೇಲ್ ಹೇಳಿಕೆ

ಸರಗೂರು: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸುವ ಉದ್ದೇಶದಿಂದ ಮಣಿಪಾಲ್ ಚಾರಿಟಬಲ್ ಟ್ರಸ್ಟ್ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಶಿಕ್ಷಣ ಕ್ಷೇತ್ರಕ್ಕೆ ನಿರಂತರವಾಗಿ ಕೊಡುಗೆ ನೀಡುತ್ತಿದೆ ಎಂದು ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಬಿ.ಜೆ.ಸಂದೀಪ್ ಪಟೇಲ್ ಹೇಳಿದರು.
ತಾಲೂಕಿನ ಕೆ.ಬೆಳತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಣಿಪಾಲ್ ಚಾರಿಟಬಲ್ ಟ್ರಸ್ಟ್ ವತಿಯಿಂದ 11 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಹೈಟೆಕ್ ಶೌಚಗೃಹ ಹಾಗೂ ಶಾಲೆಗೆ ಕಲಿಕೋಪಕರಣಗಳ ವಿತರಣಾ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
2011ರಲ್ಲಿ ಸ್ಥಾಪನೆಯಾದ ಮಣಿಪಾಲ್ ಚಾರಿಟಬಲ್ ಟ್ರಸ್ಟ್ ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದೆ. ಹಳೇ ಮೈಸೂರು ಭಾಗದ ಹಲವು ಜಿಲ್ಲೆಗಳ ಸರ್ಕಾರಿ ಶಾಲೆಗಳಿಗೆ ಗ್ರಂಥಾಲಯಗಳಿಗಾಗಿ ಪುಸ್ತಕ ವಿತರಣೆ, ಎಲ್‌ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳಿಗೆ ಟೇಬಲ್‌ಗಳ ಪೂರೈಕೆ, ವಿವಿಧ ಕಲಿಕೋಪಕರಣಗಳ ವಿತರಣೆ, ಕಂಪ್ಯೂಟರ್‌ಗಳ ನೀಡಿಕೆ ಸೇರಿದಂತೆ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದು ವಿವರಿಸಿದರು.
ಗ್ರಾಮೀಣ ವಿದ್ಯಾರ್ಥಿಗಳೂ ನಗರ ಪ್ರದೇಶದ ಮಕ್ಕಳಿಗೆ ಸಮಾನವಾದ ಸೌಲಭ್ಯಗಳನ್ನು ಪಡೆದು ಉತ್ತಮ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಕೆ.ಬೆಳತ್ತೂರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯಕರ ಹಾಗೂ ಸ್ವಚ್ಛ ವಾತಾವರಣ ಒದಗಿಸುವ ನಿಟ್ಟಿನಲ್ಲಿ ಹೈಟೆಕ್ ಶೌಚಗೃಹ ನಿರ್ಮಾಣದ ಜತೆಗೆ ಅಗತ್ಯ ಕಲಿಕೋಪಕರಣಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ, ಗುಣಮಟ್ಟದ ಶಿಕ್ಷಣ, ಉಚಿತ ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಅನೇಕ ಸೌಲಭ್ಯಗಳು ಲಭ್ಯವಾಗುತ್ತಿವೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಮಾತನಾಡಿ, ಸುಮಾರು 15 ವರ್ಷಗಳ ಹಿಂದೆ ಈ ಶಾಲೆಯಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ನಂತರ ಖಾಸಗಿ ಶಾಲೆಗಳತ್ತ ಒಲವು ಹೆಚ್ಚಾದ ಕಾರಣ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ಆದರೆ ಇತ್ತೀಚೆಗೆ ಸರ್ಕಾರದ ಶಿಕ್ಷಣ ಸ್ನೇಹಿ ಯೋಜನೆಗಳು ಹಾಗೂ ಶಾಲೆಯಲ್ಲಿನ ಮೂಲಸೌಕರ್ಯಗಳ ಸುಧಾರಣೆಯಿಂದ ಮತ್ತೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಿರುವ ಪರಿಣಾಮ ಈಗಾಗಲೇ 35ಕ್ಕೂ ಹೆಚ್ಚು ಮಕ್ಕಳು ದಾಖಲಾತಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಸೇರ್ಪಡೆಯಾಗುವ ನಿರೀಕ್ಷೆ ಇದ್ದು, ಗುಣಮಟ್ಟದ ಶಿಕ್ಷಣದ ಮೂಲಕ ಶಾಲೆ ಮಾದರಿ ಶಿಕ್ಷಣ ಸಂಸ್ಥೆಯಾಗಿ ಬೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದ ಶಾಲೆಗಳ ಅಭಿವೃದ್ಧಿಗೆ ಮಣಿಪಾಲ್ ಚಾರಿಟಬಲ್ ಟ್ರಸ್ಟ್ ನೀಡುತ್ತಿರುವ ಸಹಕಾರ ಶ್ಲಾಘನೀಯವಾಗಿದ್ದು, ಇಂತಹ ಸಾಮಾಜಿಕ ಸಂಸ್ಥೆಗಳ ನೆರವಿನಿಂದ ಸರ್ಕಾರಿ ಶಾಲೆಗಳ ಸಬಲೀಕರಣ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಣಿಪಾಲ್ ಚಾರಿಟಬಲ್ ಟ್ರಸ್ಟ್‌ನ ಮಂಜು, ಚೇತನ, ಸಿಆರ್‌ಪಿ ಗಿರೀಶ್ ಮೂರ್ತಿ, ಗ್ರಾಮದ ಮುಖಂಡರಾದ ಸುಂದರೇಗೌಡ, ಕುಮಾರಸ್ವಾಮಿ, ನಾಗರಾಜು, ಚಿಕ್ಕಯ್ಯ, ರಾಜೇಗೌಡ, ಎಸ್‌ಡಿಎಂಸಿ ಅಧ್ಯಕ್ಷ ನಾಗೇಂದ್ರ, ಮುಖ್ಯಶಿಕ್ಷಕ ನಾಗರಾಜು, ಶಿಕ್ಷಕರಾದ ರತ್ನಪ್ಪ, ಬಸವರಾಜು, ವೆಂಕಟೇಶ್, ಪ್ರದೀಪ್, ರಶ್ಮಿ, ಪೂರ್ಣಿಮಾ, ಪುಷ್ಪಾ, ಚಿಕ್ಕಕಾಳನಾಯಕ, ರುದ್ರಯ್ಯ ಸೇರಿದಂತೆ ಶಿಕ್ಷಕರು, ಪಾಲಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.