ಮಾವು ಮತ್ತು ಹಲಸು ಮೇಳದ ಕುರಿತು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಮಂಜುನಾಥ ಅಂಗಡಿ ಮಾಹಿತಿ ನೀಡಿದರು.
ಮೈಸೂರು: ಜೈವಿಕ್ ಕೃಷಿಕ್ ಸೊಸೈಟಿ ಹಾಗೂ ತೋಟಗಾರಿಕಾ ಇಲಾಖೆ ವತಿಯಿಂದ ಮೇ 29 ರಿಂದ 31ರವರೆಗೆ ನಗರದ ನೆಕ್ಸಸ್ ಸೆಂಟರ್ ಸಿಟಿ ಮಾಲ್ನಲ್ಲಿ ಸಾವಯವ ಮಾವು-ಹಲಸು ಮೇಳ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕ ಮಂಜುನಾಥ್ ಅಂಗಡಿ ತಿಳಿಸಿದರು.
ಮಾವು ಮತ್ತು ಹಲಸು ಹಣ್ಣುಗಳ ಜತೆಗೆ ಇತರೆ ಸಾವಯವ ಪದಾರ್ಥಗಳನ್ನು ಈ ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲಾಗಿತ್ತಿದೆ. ಕೃಷಿಕರು ಬೆಳೆದಿರುವ ಸಾವಯವ ಮಾವು ಮತ್ತು ಹಲಸಿನ ಹಣ್ಣುಗಳನ್ನು ಗ್ರಾಹಕರಿಗೆ ಉತ್ತಮ ಮಾರುಕಟ್ಟೆ ದೊರೆಯುವಂತೆ ಮಾಡುವುದು ಹಾಗೂ ಗ್ರಾಹಕರಿಗೆ ಉತ್ತಮ ಹಣ್ಣು ಹಂಪಲು ದೊರೆಯುವಂತೆ ಮಾಡುವುದು ಮೇಳದ ಉದ್ದೇಶವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಾವು ಮತ್ತು ಹಲಸು ಆಧಾರಿತ ವಿಶೇಷ ಆಹಾರಗಳ ತಯಾರಿಸುವ ವಿಧಾನಗಳನ್ನು ತೋರಿಸಿ ಅವುಗಳನ್ನು ಸಾರ್ವಜನಿಕರು ರುಚಿ ನೋಡುವ ಮತ್ತು ಖರೀದಿಸುವ ಅವಕಾಶ ಮಾಡಲಾಗುವುದು. ರಾಜ್ಯದ ವಿವಿಧ ಭಾಗದ ಆಹಾರ, ತಿಂಡಿ ತಿನಿಸುಗಳ ಪರಿಚಯ ಮತ್ತು ಮಾರಾಟ ಏರ್ಪಡಿಸಲಾಗಿದೆ.
ಸಾವಯವ ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಉಡುಪುಗಳು ಮತ್ತು ಕಲಾಕೃತಿಗಳು ಇವುಗಳನ್ನು ತಯಾರಿಸಲು ಕಚ್ಚಾ ವಸ್ತುಗಳ ಉತ್ಪಾದನೆ, ಸಂಗ್ರಹಣೆ, ತಯಾರಿಸುವ ವಿಧಾನಗಳನ್ನು ಪ್ರದರ್ಶಿಸಿ ಅವುಗಳ ಮಾರಾಟಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ನಗರ ತೋಟಗಾರಿಕೆ ಹಾಗೂ ನೈಸರ್ಗಿಕ ಸಾಬೂನು ತಯಾರಿಕಾ ಕಾರ್ಯಾಗಾರಗಳು, ನೈಸರ್ಗಿಕವಾಗಿ ನಾಟಿ ತಳಿಗಳನ್ನು ಸಾರ್ವಜನಿಕರು ತಮ್ಮ ಮನೆಯ ಅಂಗಳದಲ್ಲಿ ಬೆಳೆಯುವ ವಿಧಾನ ಮತ್ತು ನೈಸರ್ಗಿಕ ಕಚ್ಚಾ ವಸ್ತುಗಳನ್ನು ಉಪಯೋಗಿಸಿಕೊಂಡು ಸೋಪು, ಡಿಟರ್ಜೆಂಟ್‌ಗಳನ್ನು ತಯಾರಿಸುವ ವಿಧಾನದ ಬಗ್ಗೆ ಪ್ರಾಯೋಗಿಕ ಪ್ರದರ್ಶನ ಮತ್ತು ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗುವುದು ಎಂದರು.
ಜೈವಿಕ ಸೊಸೈಟಿ ಅಧ್ಯಕ್ಷ ಡಾ. ರಾಮಕೃಷ್ಣ ಮಾತನಾಡಿ, 80ಕ್ಕೂ ಹೆಚ್ಚು ಸ್ಥಳೀಯ ಹಾಗೂ ವಿದೇಶಿ ಮಾವಿನ ತಳಿಗಳು ಮತ್ತು 35ಕ್ಕೂ ಹೆಚ್ಚು ಹಲಸಿನ ತಳಿಗಳನ್ನು ಈ ಪ್ರದರ್ಶನದಲ್ಲಿ ಇಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿರುವ ಮಾವು ಮತ್ತು ಹಲಸಿನ ತಳಿಗಳ ವೈವಿಧ್ಯತೆ, ಅವುಗಳನ್ನು ಗುರುತಿಸುವ ವಿಧಾನ, ಇಂತಹ ಸಸ್ಯ ವೈವಿಧ್ಯತೆಯನ್ನು ಸಂರಕ್ಷಣೆ ಮಾಡಲಾಗುತ್ತಿರುವ ಕೃಷಿಕರ ವಿವರ ಇತ್ಯಾದಿಗಳನ್ನು ಸಾರ್ವಜನಿಕರಿಗೆ ಅದರಲ್ಲೂ ಯುವ ಪೀಳಿಗೆಗೆ ತಿಳಿಯಪಡಿಸಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ನಮ್ಮ ರೈತರ ಮಾರುಕಟ್ಟೆ ಸದಸ್ಯೆ ಕವಿತಾ ಶ್ರೀನಿವಾಸನ್, ಜೈವಿಕ ಸೊಸೈಟಿ ಸದಸ್ಯ ಎ.ಎಂ. ದರ್ಶನ್ ಹಾಗೂ ಇತರರು ಇದ್ದರು.