ಹನಗೋಡು ಹೋಬಳಿಯ ಕೊಳುವಿಗೆ ಗ್ರಾಮದ ಶಿವರುದ್ರಪ್ಪ ಅವರ ಫಲಭರಿತ ಮಾವಿನ ಮರಗಳನ್ನು ಕಾಡಾನೆ ನಾಶಪಡಿಸಿರುವುದು.
ಹನಗೋಡು : ನಾಗರಹೊಳೆ ಅರಣ್ಯ ಪ್ರದೇಶದಿಂದ ಆಹಾರ ಅರಸಿ ಹೊರಬಂದ ಕಾಡಾನೆ ಮಂಗಳವಾರ ರಾತ್ರಿ ಗ್ರಾಮ ಪ್ರವೇಶಿಸಿ ಫಸಲುಭರಿತ ಮಾವಿನ ಮರಗಳನ್ನು ಧ್ವಂಸಗೊಳಿಸಿದೆ.
ಹನಗೋಡು ಸಮೀಪದ ವೀರನಹೊಸಹಳ್ಳಿ ವಲಯದ ಕೊಳುವಿಗೆ ಗ್ರಾಮದ ಶಿವರುದ್ರಪ್ಪ ಅವರ ತೋಟಕ್ಕೆ ನುಗ್ಗಿದ ಕಾಡಾನೆ, ಫಲಗಳಿಂದ ತುಂಬಿದ್ದ ಮೂರು ಮಾವಿನ ಮರಗಳನ್ನು ಸಂಪೂರ್ಣವಾಗಿ ಮುರಿದು ಹಾಕಿ, ಹಣ್ಣುಗಳನ್ನು ತಿಂದು ನಷ್ಟ ಉಂಟುಮಾಡಿವೆ.
ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅರಣ್ಯ ಇಲಾಖೆ ಕಾಡುಪ್ರಾಣಿಗಳನ್ನು ಮರಳಿ ಕಾಡಿನೊಳಗೆ ಓಡಿಸುವ ಕಾರ್ಯಾಚರಣೆ ಕೈಗೊಳ್ಳಬೇಕು ಹಾಗೂ ಕಾಡಾನೆಗಳ ಹಾವಳಿ ನಿಯಂತ್ರಿಸಲು ಶಾಶ್ವತ ಕ್ರಮಗಳನ್ನು ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.