ಕುಪ್ಪಣ್ಣ ಪಾರ್ಕ್‌ನಲ್ಲಿ ಆಯೋಜಿಸಿರುವ ‘ಮಾವು, ಹಲಸು’ ಮೇಳದಲ್ಲಿ ಭಾಗಿಯಾಗಿರುವ ಸಾರ್ವಜನಿಕರು.
- ಒಂದೇ ಕಡೆ ವಿವಿಧ ಬಗೆಯ ಹಣ್ಣುಗಳು ಲಭ್ಯ
- ಖರೀದಿಗೆ ಮುಗಿಬಿದ್ದ ಜನರು
ಬಗೆಬಗೆಯ ಮಾವು, ಹಲಸು... ವಿಶಿಷ್ಟ ಪರಿಮಳ... ಸ್ವಾದಿಷ್ಟ ರುಚಿ...ಆಕರ್ಷಕ ರೂಪ... ಯಾವಾಗ ತಿಂದು ಬಿಡುವುದು ಎಂಬ ಭಾವ..!
ಇದು, ನಗರದ ಕುಪ್ಪಣ್ಣ ಪಾರ್ಕ್‌ನಲ್ಲಿ ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಮಾವು ಮೇಳಕ್ಕೆ ಭೇಟಿ ನೀಡಿದವರಲ್ಲಿ ಕಂಡುಬಂದ ಚಡಪಡಿಕೆ. ಉತ್ಪಾದಕರಿಂದ ಗ್ರಾಹಕರಿಗೆ ನೇರವಾಗಿ ದೊರೆಯುವಂತೆ ಮಾಡುವ ಸಲುವಾಗಿ ಆಯೋಜಿಸಿರುವ ಮೂರು ದಿನಗಳ ‘ಮಾವು, ಹಲಸು’ ಮೇಳಕ್ಕೆ ಶುಕ್ರವಾರ ಚಾಲನೆ ದೊರೆತಿದ್ದು, ಮೇ 17 ರವರೆಗೆ ನಡೆಯಲಿದೆ.
ನಗರದ ಮಾವು ಪ್ರಿಯರಿಗೆ ರಸದೌತಣ ನೀಡಲು ಮಂಡ್ಯ, ರಾಮನಗರ, ಕೆ.ಆರ್.ನಗರ, ಎಚ್.ಡಿ.ಕೋಟೆ, ತಿ.ನರಸೀಪುರ, ಪಿರಿಯಾಪಟ್ಟಣ, ಹುಣಸೂರು, ನಂಜನಗೂಡು ಸೇರಿದಂತೆ ನಾನಾ ಭಾಗದ ರೈತರು ತಾವೇ ಬೆಳೆದ ನಾನಾ ತಳಿಯ ಮಾವುಗಳನ್ನು ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದಾರೆ.
ಒಂದೇ ಸೂರಿನಡಿ 12ಕ್ಕೂ ಹೆಚ್ಚು ತಳಿಯ ಮಾವಿನ ಹಣ್ಣುಗಳು ದೊರೆಯುತ್ತಿದ್ದು, ಸಾರ್ವಜನಿಕರು ಮೊದಲ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ತಮಗೆ ಇಷ್ಟವಾದ ಹಣ್ಣುಗಳನ್ನು ಖರೀದಿಸಿದರು. ಉದ್ಯಾನವನದ ಆವರಣದಲ್ಲಿ ಮಳಿಗೆಗಳನ್ನು ತೆರೆಯಲಾಗಿದ್ದು, ರೈತರಿಗೆ ಉಚಿತವಾಗಿ ಮಳಿಗೆಗಳನ್ನು ನೀಡಲಾಗಿದೆ. ಪ್ರತಿಯೊಂದು ಮಳಿಗೆಗಳ ಮುಂದೆ ದರ ಪಟ್ಟಿ ಹಾಕಲಾಗಿದೆ. ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಸೂಚಿಸಲಾಗಿದೆ.
ಮಾವು ಮೇಳದಲ್ಲಿ 28 ಮಳಿಗೆಗಳಿದ್ದು, ಬಾದಾಮಿ, ರಸಪುರಿ, ಮಲ್ಲಿಕಾ, ಸಿಂಧೂರಾ, ತೋತಾಪುರಿ, ಮಲಗೋವ, ಬಾಗನಪಲ್ಲಿ, ಹಿಮಾಪಸಂದ್, ವಾಲಜ, ಕೇಸರ್, ದಶೇರಿ, ದಿಲ್ ಪಸಂದ್, ಸಕ್ಕರೆಗುತ್ತಿ ಸೇರಿದಂತೆ ವಿವಿಧ ತಳಿಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ. ಮಾವು ಜತೆಗೆ ಹಲಸಿನ ಹಣ್ಣಿನ ಘಮಲು ಸಹ ನಾಗರಿಕರನ್ನು ಸೆಳೆಯುತ್ತಿದೆ. ನೈಸರ್ಗಿಕವಾಗಿ ತಯಾರಿಸಿದ ಜೇನು ತುಪ್ಪದ ಮಾರಾಟವೂ ಮೇಳದಲ್ಲಿದೆ.
ಮೇಳದಲ್ಲಿ ಯಾವುದೇ ರೀತಿಯ ಕೃತಕವಾಗಿ ಮಾಗಿದ ಹಣ್ಣಿನ ಮಾರಾಟಕ್ಕೆ ಅವಕಾಶವಿಲ್ಲ. ಹೀಗಾಗಿ ಮೊದಲ ದಿನವೇ ಮಾವು ಮೇಳದಲ್ಲಿ ನೈಸರ್ಗಿಕವಾಗಿ ಬೆಳೆದ ಮಾವಿನ ಹಣ್ಣು ಖರೀದಿಗೆ ಸಾರ್ವಜನಿಕರು ಮುಗಿಬಿದ್ದರು.
ರೈತರಿಗೆ ಪ್ರೋತ್ಸಾಹ ನೀಡಬೇಕು
ರೈತರೊಂದಿಗೆ ಮೇಳ ಉದ್ಘಾಟಿಸಿ ಮಾತನಾಡಿದ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ್ ಅಂಗಡಿ, ರಾಸಾಯನಿಕ, ಕಾರ್ಬೈಡ್‌ಮುಕ್ತ ಮಾವಿನ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ 3 ದಿನಗಳ ಮಾವು, ಹಲಸು ಮೇಳಕ್ಕೆ ಚಾಲನೆ ನೀಡಲಾಗಿದೆ. ಮೈಸೂರು, ಮಂಡ್ಯ, ರಾಮನಗರದ ಜಿಲ್ಲೆಯ ರೈತರು ವಿವಿಧ ತಳಿಯ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ರೈತರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಮತಾ, ನವೀನ್ ಸೇರಿದಂತೆ ಹಲವರು ಇದ್ದರು.
ಸಸ್ಯ ಸಂತೆ
ತೋಟಗಾರಿಕೆ ಬೆಳೆಗಳಿಗೆ ಪ್ರೋತ್ಸಾಹಿಸಲು ರೂಪಿಸಿರುವ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನರ್ಸರಿಗಳ ಸಸ್ಯಸಂತೆ ಸಹ ಆಯೋಜಿಸಲಾಗಿದೆ. ತೆಂಗು, ಸಪೋಟ, ಪಪ್ಪಾಯಿ, ಅಡಕೆ, ಮಾವು, ನುಗ್ಗೆ, ಸೀಬೆ, ನೇರಳೆ, ನಿಂಬೆ, ಕರಿಬೇವು, ಹಿರಳಿ, ಹುಣಸೆ, ಸೀತಾಫಲ, ಚಕ್ರಮುನಿ, ವೀಳ್ಯದೆಲೆ, ಬೆಟ್ಟದ ನೆಲ್ಲಿ, ಬೆಣ್ಣೆಹಣ್ಣು, ಹಲಸು ಸಸ್ಯಗಳನ್ನು ಪ್ರದರ್ಶಿಸಲಾಗಿದೆ. ಪ್ರದರ್ಶನದ ಜತೆಗೆ ಮಾರಾಟ ಮಾಡಲಾಗುತ್ತಿದೆ.