ಮೈಸೂರು: ಗಾಂಜಾ ಮಾರಾಟ ಮಾಡಿದ ಅಪರಾಧಿಗೆ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 4 ವರ್ಷ ಕಠಿಣ ಶಿಕ್ಷೆ ಹಾಗೂ 40 ಸಾವಿರ ರೂ.ದಂಡ ವಿಧಿಸಿದೆ.
ಮಹಮದ್ ಮುಷೀರ್ ಶಿಕ್ಷೆಗೆ ಗುರಿಯಾದ ಅಪರಾಧಿ. ಇತ 2023ರ ಜುಲೈ 17 ರಂದು ಸಾತಗಳ್ಳಿ ಎ ಜೋನ್ ಪಶ್ಚಿಮದ ವರ್ಧಮಾನ ನಗರದ ಕಡೆ ಹೋಗುವ ರಸ್ತೆಯಲ್ಲಿ ಸ್ಕೂಟರ್ ಸೀಟಿನ ಕೆಳಬದಿಯಲ್ಲಿ ಕ್ಯಾರಿ ಬಾಗ್ ಒಳಗಡೆ ಪೇಪರ್‌ನಿಂದ ಪ್ಯಾಕ್ ಮಾಡಿದ್ದ 1.5 ಕೆಜಿ ಒಣ ಗಾಂಜಾ ಸೊಪ್ಪನ್ನು ಸಾಗಣೆ ಮಾಡುತ್ತಿದ್ದ. ಆ ವೇಳೆ ಸೆನ್ ಪೊಲೀಸ್ ಠಾಣೆಯ ಸಿಬ್ಬಂದಿ ವಶಕ್ಕೆ ಪಡೆದುಕೊಂಡು ಗಾಂಜಾ ಸೊಪ್ಪು ಮತ್ತು ಸ್ಕೂಟರ್ ವಶಪಡಿಸಿಕೊಂಡಿದ್ದರು.
ಬಳಿಕ ತನಿಖಾಧಿಕಾರಿ ಟಿ.ಮಾರುತಿ ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸದರಿ ಪ್ರಕರಣದಲ್ಲಿ ವಿಚಾರಣೆ ನಡೆಸಿದ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಂ.ರಮೇಶ್ ಬುಧವಾರ ತೀರ್ಪು ಪ್ರಕಟಿಸಿದ್ದಾರೆ. ಎನ್.ಬಿ.ವಿಜಯಲಕ್ಷ್ಮೀ ಸರ್ಕಾರದ ಪರ ವಾದ ಮಂಡಿಸಿದ್ದರು.