ಬೀಟೆ ಮರಗಳನ್ನು ಸಾಗಿಸುತ್ತಿದ್ದ ಲಾರಿ, ಮರದ ದಿಮ್ಮಿ ಹಾಗೂ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹುಣಸೂರು ಆರ್‌ಎಫ್‌ಒ ಸಿಭಾಷ್ ಎಂ. ಹೂಗಾರ್, ಎಸಿಎಫ್ ಮಹದೇವಯ್ಯ ಇತರರು ಇದ್ದಾರೆ. 
ಮೈಸೂರು

ಬೀಟೆ ಮರದ ದಿಮ್ಮಿ ಸಾಗಿಸುತ್ತಿದ್ದವನ ಬಂಧನ

ಕೆಂಡಗಣ್ಣ ಎನ್

ಪ್ರಮುಖ ಮುಖ್ಯಾಂಶಗಳು

  • transporting betel logs
ಹುಣಸೂರು: ಕಾಫಿ ಮತ್ತು ಮರದ ಹೊಟ್ಟು ತುಂಬಿದ ಮೂಟೆಗಳ ನಡುವೆ ಬೀಟೆ ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಯನ್ನು ಮಾಲು ಸಮೇತ ವಶಕ್ಕೆ ಪಡೆಯುವಲ್ಲಿ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕೇರಳಂ ರಾಜ್ಯದ ಮಲಪುರಂನ ಲಾರಿ ಚಾಲಕ, ಮಾಲೀಕ ಅಬ್ದುಲ್ ಶುಕೂರ್ ಬಂಧಿತ ಆರೋಪಿ. ಲಾರಿಯಲ್ಲಿದ್ದ ಸುಮಾರು 30 ಲಕ್ಷ ರೂ. ಬೆಲೆ ಬಾಳುವ ಬೀಟೆ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೊಡಗಿನಿಂದ ಲಾರಿಯಲ್ಲಿ ಕಾಫಿ ಹಾಗೂ ಮರದ ಹೊಟ್ಟು ತುಂಬಿದ ಮೂಟೆಗಳ ನಡುವೆ ಬೀಟೆ ಮರದ ದಿಮ್ಮಿಗಳನ್ನಿಟ್ಟು ಸಾಗಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಗುರುವಾರ ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಕಿರುಬನಂತನ್, ಎಸಿಎಫ್ ಮಹದೇವಯ್ಯರ ಮಾರ್ಗದರ್ಶನದಲ್ಲಿ ಹುಣಸೂರು ಆರ್‌ಎಫ್‌ಒ ಸಂತೋಷ್ ಎಂ.ಹೂಗಾರ್ ನೇತೃತ್ವದ ತಂಡ ಹುಣಸೂರು-ಎಚ್.ಡಿ.ಕೋಟೆ ಮುಖ್ಯರಸ್ತೆಯ ಆಜಾದ್ ನಗರದ ಬಳಿ ತೆರಳುತ್ತಿದ್ದ ಲಾರಿಯನ್ನು ಅಡ್ಡಗಟ್ಟಿ ಪರಿಶೀಲಿಸಿದ್ದಾರೆ. ಈ ವೇಳೆ ಮರದ ದಿಮ್ಮಿಗಳಿರುವುದು ಪತ್ತೆಯಾಗಿದೆ. ಲಾರಿಯನ್ನು ಜಪ್ತಿ ಮಾಡಿ, ಮರದ ತುಂಡುಗಳ ಸಹಿತ ಆರೋಪಿ ಅಬ್ದುಲ್ ಶುಕೂರ್‌ನನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ವಿಚಾರಣೆಗೊಳಪಡಿಸಲಾಗಿ ಕೊಡಗಿನ ವಿವಿಧ ಭಾಗಗಳಿಂದ ಮರದ ದಿಮ್ಮಿಗಳನ್ನು ಸಾಗಿಸಲಾಗಿದೆ ಎಂದು ತಿಳಿಸಿದ್ದು, ಈ ಪ್ರಕರಣದಲ್ಲಿ ಹಲವಾರು ಮಂದಿ ಭಾಗಿಯಾಗಿರುವ ಬಗ್ಗೆ ಶಂಕೆ ಇದ್ದು, ಪ್ರಕರಣದ ಕಿಂಗ್‌ಪಿನ್ ಹಾಗೂ ಇತರ ಆರೋಪಿಗಳ ಪತ್ತೆಗಾಗಿ ಕ್ರಮವಹಿಸಲಾಗಿದೆ. ಆರೋಪಿಗಳ ವಿರುದ್ಧ ಅರಣ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಎಫ್ ಆರ್.ಟಿ.ಕಿರುಬನಂತನ್ ತಿಳಿಸಿದ್ದು, ಪ್ರಕರಣವನ್ನು ಭೇದಿಸಿರುವ ತಂಡವನ್ನು ಪ್ರಶಂಸಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒ ಮಂಜುನಾಥ ಟಿ.ಎನ್, ಗಸ್ತು ಅರಣ್ಯ ಪಾಲಕರಾದ ಶಿವಪ್ಪಗಡ್ಡದವರ್, ಮಂಜುನಾಥ, ದಿವಾಕರ, ಸಿದ್ದಪ್ಪಹೊಸಮನಿ, ವಾಹನ ಚಾಲಕ ಮನೋಹರ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.