ಪಿರಿಯಾಪಟ್ಟಣ ಸೇರಿದಂತೆ ಜಿಲ್ಲೆಯ ವಿವಿಧಡೆ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಮತ್ತು ಪ್ರಿಂಟರ್ ಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಪಿರಿಯಾಪಟ್ಟಣ ಪೊಲೀಸರು ಆರೋಪಿಯಿಂದ ಕಳವು ವಸ್ತುಗಳನ್ನು ವಶಪಡಿಸಿಕೊಂಡಿರುವುದು. ಗೋವಿಂದರಾಜು, ಬಿ.ಎಚ್.ಜಗದೀಶ್, ಕೆ.ಎಸ್. ಲಿಂಗರಾಜಪ್ಪ, ಮಧುಕುಮಾರ್, ಬಸವರಾಜು, ಈರಣ್ಣ, ಎನ್.ಸಿ.ಸಂಜಯ್, ಅನಿಲ್, ದರ್ಶನ್, ನಾರಾಯಣಶೆಟ್ಟಿ ಪುನೀತ್ ಇತರರು ಇದ್ದರು.
- ಸರ್ಕಾರಿ ಶಾಲೆಗಳೇ ಇವನ ಟಾರ್ಗೆಟ್
ಪಿರಿಯಾಪಟ್ಟಣ: ಪಿರಿಯಾಪಟ್ಟಣ ಸೇರಿದಂತೆ ಜಿಲ್ಲೆಯ ವಿವಿಧಡೆ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಮತ್ತು ಪ್ರಿಂಟರ್‌ಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಪಿರಿಯಾಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಕೊಡಗು ಜಿಲ್ಲೆ ವಿರಾಜಪೇಟೆಯ ನಿವಾಸಿ ಮೊಹಮ್ಮದ್ ಶೋಯಬ್ ಬಂದಿತ ಆರೋಪಿ.
ಅ. 23 ರಂದು ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ರಾತ್ರಿ ವೇಳೆ ಅಪರಿಚಿತರು ಶಾಲೆ ಕೊಠಡಿ ಬೀಗವನ್ನು ಮುರಿದು ಕಂಪ್ಯೂಟರ್ ಮತ್ತು ಪ್ರಿಂಟರ್‌ಗಳನ್ನು ಕಳವು ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯ ಶಿಕ್ಷಕ ಕೆ.ಎಸ್.ದೇವರಾಜ್ ಪಿರಿಯಾಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪಿರಿಯಾಪಟ್ಟಣ ಪೊಲೀಸರು ಸೂಕ್ತ ಮಾಹಿತಿ ಸಂಗ್ರಹಿಸಿ ಶಂಕಿತ ಆರೋಪಿ ಮೊಹಮ್ಮದ್ ಶೋಯಬ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಾಲೂಕಿನ ಪಂಚವಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ರಾವಂದೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್, ಹುಣಸೂರಿನ ಬಿಇಒ ಕಚೇರಿ, ಹುಣಸೂರು ತಾಲೂಕಿನ ಕಟ್ಟೆ ಮಳವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಇಲವಾಲದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ನಡೆದಿದ್ದ ಕಳವು ಪ್ರಕರಣ ಸೇರಿದಂತೆ ಒಟ್ಟು ಎಂಟು ಪ್ರಕರಣಗಳಲ್ಲಿ ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದಾನೆ.
ಬಂಧಿತನಿಂದ ಅಂದಾಜು 5.10 ಲಕ್ಷ ರೂ. ಮೌಲ್ಯದ 9 ಕಂಪ್ಯೂಟರ್, 4 ಪ್ರಿಂಟರ್‌ಗಳು, 3 ಮಾನಿಟರ್ ಗಳು, 1 ಟಿವಿ, 2 ಯುಪಿಎಸ್, 4 ಸಿಪಿಯು, ಕೀಬೋರ್ಡ್ ಗಳು ಮತ್ತು 1 ಬಯೋಮೆಟ್ರಿಕ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಕಾರ್ಯಾಚರಣೆಯಲ್ಲಿ ಪಿರಿಯಾಪಟ್ಟಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಗೋವಿಂದರಾಜು, ಪಿಎಸ್‌ಐ ಬಿ.ಎಚ್.ಜಗದೀಶ್, ಪೊಲೀಸ್ ಅಪರಾಧ ಸಿಬ್ಬಂದಿ ಕೆ.ಎಸ್. ಲಿಂಗರಾಜಪ್ಪ, ಮಧುಕುಮಾರ್, ಬಸವರಾಜು, ಈರಣ್ಣ, ಎನ್.ಸಿ.ಸಂಜಯ್, ಅನಿಲ್, ದರ್ಶನ್ ಭಾಗವಹಿಸಿದ್ದರು.