ಮೈಸೂರು: ನಗರದಲ್ಲಿ ಹಾಡಹಗಲಲ್ಲೇ ನಾಲ್ಕು ಜನ ಯುವಕರು ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉದಯಗಿರಿ ಪೊಲೀಸ್ ಠಾಣೆ ಕಾನ್‌ಸ್ಟೆಬಲ್ ಕೆಸರೆ ನಿವಾಸಿ ಸಿ.ಚಂದ್ರಶೇಖರ್ (51) ಹಲ್ಲೆಗೆ ಒಳಗಾದವರು.
ಚಂದ್ರಶೇಖರ್ ಅವರು ಮಂಗಳವಾರ ಕರ್ತವ್ಯಕ್ಕೆ ತೆರಳುವಾಗ ರಾಜೀವ್ ನಗರದ ಕ್ಯಾಂಡಿ ಕಾಟನ್ ಅಂಗಡಿ ಮುಂಭಾಗ ಮದ್ಯದ ಅಮಲಿನಲ್ಲಿದ್ದ ನಾಲ್ವರು ಏಕಾಏಕಿ ಇವರ ಬೈಕ್ ಅಡ್ಡಗಟ್ಟಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ತಳ್ಳಾಡಿ, ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ. ಬಟ್ಟೆ ಹರಿದು ಜೇಬಿನಲ್ಲಿದ್ದ 500 ರೂ. ನಗದು ಹಾಗೂ ಮೊಬೈಲ್ ಕಿತ್ತುಕೊಂಡಿದ್ದಾರೆ.
ಇದನ್ನು ಕಂಡು ಸಾರ್ವಜನಿಕರು ಸುತ್ತುವರಿಯುತ್ತಿದ್ದಂತೆಯೇ ಮೂವರು ಪರಾರಿಯಾಗಿದ್ದು, ಕಾರ್ತಿಕ್ ಎಂಬಾತನನ್ನು ಹಿಡಿದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಎನ್.ಆರ್. ಠಾಣೆ ಪ್ರಭಾರ ಇನ್ಸ್‌ಪೆಕ್ಟರ್ ಕುಮಾರ್ ಹಾಗೂ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದರು.
ಚಂದ್ರಶೇಖರ್ ದೂರಿನನ್ವಯ ಎನ್.ಆರ್. ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಮೂವರ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.