ಮೈಸೂರು: ಆರ್‌ಎಸ್‌ಎಸ್ ಕುರಿತು ಪಾಕಿಸ್ತಾನದ ಜನಕ ಮೊಹಮದ್ ಅಲಿ ಜಿನ್ನಾ ಅವರ ಪ್ರತಿರೂಪದ ರೀತಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಖರ್ಗೆ ಅವರ ಹೇಳಿಕೆ ಕೇಳಿದರೆ ಅವರು ಮಲ್ಲಿಕಾರ್ಜುನ ಖರ್ಗೆನಾ ಅಥವಾ ಮೊಹಮದ್ ಅಲಿ ಜಿನ್ನಾನ ಎಂಬ ಗೊಂದಲ ಉಂಟಾಗುತ್ತದೆ. ಜಿನ್ನಾ ಬಾಯಿಯಲ್ಲಿ ಬರುತ್ತಿದ್ದ ಮಾತುಗಳು ಇದೀಗ ಖರ್ಗೆ ಬಾಯಲ್ಲಿ ಬರುತ್ತಿದೆ. ನೀವು 21ನೇ ಶತಮಾನದ ಮೊಹಮದ್ ಅಲಿ ಜಿನ್ನಾ ಎಂಬ ವಿಚಾರದಲ್ಲಿ ಅಚ್ಚರಿಯೇ ಇಲ್ಲ ಎಂದು ಟೀಕಿಸಿದರು.
ಮಲ್ಲಿಕಾರ್ಜುನ ಖರ್ಗೆ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆಗೆ ಮಾತ್ರ ಆರ್‌ಎಸ್‌ಎಸ್ ಹುಚ್ಚು ಹಿಡಿದಿದೆ ಎಂದು ಅಂದುಕೊಂಡಿದ್ದೆ. ಮಗನಿಗೆ ಹಿಡಿದ ಹುಚ್ಚು ಇದೀಗ ಅಪ್ಪನಿಗೂ ಅಂಟಿಕೊಂಡಿದೆ. ಆರ್‌ಎಸ್‌ಎಸ್‌ಗೆ ಬಯ್ಯದೆ ಇದ್ದರೆ ಇವರಿಗೆ ತಿಂದಿರುವ ಅನ್ನ ಅರಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಖರ್ಗೆ ಅವರನ್ನು ಇಳಿಸುವ ಕಾಲ ಸನ್ನಿಹಿತವಾಗಿರಬೇಕು. ಅದಕೋಸ್ಕರ ಅವರು ಇಷ್ಟೊಂದು ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ಅವರನ್ನು ವಿಷಸರ್ಪಕ್ಕೆ ಹೋಲಿಕೆ ಮಾಡಿ ಅವರನ್ನು ಕೊಲ್ಲಿ ಎಂದು ಮುಸ್ಲಿಮರಿಗೆ ಪ್ರಚೋದನೆಯನ್ನು ಖರ್ಗೆ ನೀಡಿದ್ದಾರೆ. ಆ ಮೂಲಕ ದೇಶಾದ್ಯಂತ ಕೋಮು ದಳ್ಳುರಿ ಸೃಷ್ಟಿಸಲು ಪ್ರಚೋದನೆ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್‌ಎಸ್‌ಎಸ್‌ಅನ್ನು ನೀವು ವಿಷಸರ್ಪಕ್ಕೆ ಹೋಲಿಕೆ ಮಾಡುತ್ತಿದ್ದೀರಿ. ಆರ್‌ಎಸ್‌ಎಸ್ ನಾಯಕರುಗಳನ್ನು ಅಧಿಕಾರಕ್ಕೆ ತಂದಿದ್ದು ಹಿಂದುಗಳು. ಹಾಗಾದರೆ ನೀವು ಹಿಂದುಗಳನ್ನು ವಿಷಸರ್ಪ ಅಂದಂಗಾಯ್ತು. ಖರ್ಗೆ ಅವರು ಎಐಸಿಸಿ ಅಧ್ಯಕ್ಷರ ರೀತಿ ಮಾತನಾಡುತ್ತಿಲ್ಲ. ಬದಲಾಗಿ ಮುಸ್ಲಿಂ ಲೀಗ್ ಅಧ್ಯಕ್ಷರ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಹೈದರ್‌ಬಾದ್ ನಿಜಾಮನ ಸೇನೆಯು ಮಲ್ಲಿಕಾರ್ಜುನ ಖರ್ಗೆ ಅವರ ತಾಯಿ ಹಾಗೂ ತಂಗಿಯನ್ನು ಸುಟ್ಟು ಹಾಕಿದರು. ಅಂದು ಅವರನ್ನು ವಿಷಸರ್ಪ ಎಂದು ತಿಳಿದು ಸುಟ್ಟು ಹಾಕಿದರೇ? ಅಂದು ನೀವು ತಂದೆಯ ಜತೆ ಹೊಲಕ್ಕೆ ಹೋಗದೆ ಇದಿದ್ದರೆ ನಿಮ್ಮನ್ನು ಸಹ ಸುಟ್ಟುಹಾಕುತ್ತಿದ್ದರು. ಹಾಗಾದರೆ ಮುಸ್ಲಿಮರು ನಿಮ್ಮ ಕುಟುಂಬವನ್ನು ಸಹ ವಿಷ ಸರ್ಪ ಎಂದು ಭಾವಿಸಿದ್ದರಾ? ನಿಮ್ಮ ಬಾಯಿಯಲ್ಲಿ ಇಂತಹ ಮಾತು ನಿರೀಕ್ಷೆ ಮಾಡಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಮರನ್ನು ಓಲೈಸಲು ಏನು ಬೇಕಾದರೂ ಮಾಡುತ್ತಾರೆ ಅಂದುಕೊಂಡಿದ್ದೆವು. ಆದರೆ, ನೀವು ಸಿದ್ದರಾಮಯ್ಯ ಅವರಿಗಿಂತ ಹೆಚ್ಚಾಗಿ ಮಾತನಾಡುತ್ತಿದ್ದೀರಿ. ನಿಮಗೆ ಹೋಲಿಕೆ ಮಾಡಿದರೆ ಸಿದ್ದರಾಮಯ್ಯ ಅವರೇ ಪರವಾಗಿಲ್ಲ ಎಂದು ಲೇವಡಿ ಮಾಡಿದರು.
ಆರ್‌ಎಸ್‌ಎಸ್‌ನವರನ್ನು ಕೊಲ್ಲಿ ಅನ್ನುವುದಾದರೆ ನಿಮ್ಮ ಮನಸ್ಥಿತಿ ಏನು? ಕಾಂಗ್ರೆಸ್ ಮುಸ್ಲಿಂ ಲೀಗ್ ಬದಲಾಗುತ್ತಿದೆಯೇ? ನಿಮ್ಮ ಮಾತುಕೇಳಿ ಮುಸ್ಲಿಮರು ಆರ್‌ಎಸ್‌ಎಸ್‌ನವರ ಮೇಲೆ ಕಲ್ಲು ತೂರಾಟ ನಡೆಸಿದರೆ ದೇಶದ ಪರಿಸ್ಥಿತಿ ಏನಾಗಬೇಕು ಎಂದು ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆ ಮಂತ್ರಿ ಸ್ಥಾನ ಉಳಿಸಿಕೊಳ್ಳಲು ಹಾಗೂ ಮುಖ್ಯಮಂತ್ರಿ ಆಗುವ ಕನಸಿನೊಂದಿಗೆ ಪ್ರತಿನಿತ್ಯ ಆರ್‌ಎಸ್‌ಎಸ್‌ಅನ್ನು ಟೀಕಿಸುತ್ತಾರೆ. ಅವರಿಗೆ ಆರ್‌ಎಸ್‌ಎಸ್ ಹುಚ್ಚು ಹಿಡಿದಿದೆ. ಇದೀಗ ನೀವು ಸಹ ಎಐಸಿಸಿ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಮಗನ ರೀತಿಯಲ್ಲಿ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದರು.