ಪ್ರೊ.ಮಲೆಯೂರು ಗುರುಸ್ವಾಮಿ ಪ್ರತಿಷ್ಠಾನದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರೊ.ರಹಮತ್ ತರೀಕೆರೆ ಅವರಿಗೆ ಪ್ರೊ.ಮಲೆಯೂರು ಗುರುಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಂಕರ್ ದೇವನೂರು, ಪ್ರೊ.ಪಿ.ಕೆ.ರಾಜಶೇಖರ್, ಕೆ.ಎಸ್.ಜಯಂತಿ, ಸೋಮಶೇಖರ ಬಿಸಲ್ವಾಡಿ ಇತರರು ಇದ್ದರು. 
ಮೈಸೂರು

ಮಲೆಯೂರು ಗುರುಸ್ವಾಮಿ ಅವರದ್ದು ವಿಶ್ವಾಸ ಪೂರ್ವಕ ವ್ಯಕ್ತಿತ್ವ: ಪ್ರೊ.ರಹಮತ್ ತರೀಕೆರೆ ಅಭಿಪ್ರಾಯ

ಪ್ರಮುಖ ಮುಖ್ಯಾಂಶಗಳು

  • ಪ್ರೊ.ಮಲೆಯೂರು ಗುರುಸ್ವಾಮಿ ಪ್ರಶಸ್ತಿ ಸ್ವೀಕಾರ
  • ಪ್ರೊ.ಮಲೆಯೂರು ಗುರುಸ್ವಾಮಿ ಪ್ರತಿಷ್ಠಾನದಿಂದ ಕಾರ್ಯಕ್ರಮ ಆಯೋಜನೆ
ಮೈಸೂರು: ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ಅವರದು ಹಸನ್ಮುಖ, ಬಹಳ ವಿಶ್ವಾಸ ಪೂರ್ವಕವಾದ ವ್ಯಕ್ತಿತ್ವ. ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದರಿಂದಲೇ ಅವರಿಗೆ ನಿಜವಾದ ಗೌರವ ದೊರೆಯುತ್ತಿದೆ ಎಂದು ಚಿಂತಕ ಪ್ರೊ.ರಹಮತ್ ತರೀಕೆರೆ  ಅಭಿಪ್ರಾಯಪಟ್ಟರು.
ಪ್ರೊ.ಮಲೆಯೂರು ಗುರುಸ್ವಾಮಿ ಪ್ರತಿಷ್ಠಾನದಿಂದ ಅಗ್ರಹಾರದ ರಾಜೇಂದ್ರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಪ್ರೊ.ಮಲೆಯೂರು ಗುರುಸ್ವಾಮಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಪ್ರೊ. ಮಲೆಯೂರು ಗುರುಸ್ವಾಮಿ ಅವರು ತರಗತಿಯಾಚೆಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೆಲಸವನ್ನು ಮಾಡಿದ್ದಾರೆ. ಅಲ್ಲದೇ ತಮ್ಮ ಆದರ್ಶವನ್ನು ವಿದ್ಯಾರ್ಥಿಗಳಿಗೆ ಬಿಟ್ಟು ಹೋಗಿದ್ದಾರೆ. ಬರವಣಿಗೆ ಮೂಲಕ ಶಾಶ್ವತವಾಗಿದ್ದಾರೆ ಎಂದರು.
ಈ ಕಾಲಕ್ಕೆ ಜ್ಞಾನದ ಜತೆ ಸಂವೇದನೆ ಕೊಡುವ ಗುರುಗಳು ಬಹಳ ಮುಖ್ಯ. ಗೂಗಲ್, ಎಐ ಅಂತಹ ಹೊಸ ಗುರುಗಳು ಮಾಹಿತಿ ಕೊಡುತ್ತವೆ. ಇವತ್ತು ಮಾಹಿತಿಗಾಗಿ ಗುರುಗಳನ್ನು ನೋಡುತ್ತಿಲ್ಲ. ಎಐನಿಂದ ಅನೇಕ ಕೆಲಸಗಳು ಅಗುತ್ತಿದೆ. ಇವರ ಪರಿಣಾಮ ಕೆಲ ವಲಯಗಳಲ್ಲಿ ಮಾನವ ಉದ್ಯೋಗ ಕಡಿತಗೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. 
ವಿದ್ಯಾರ್ಥಿಗಳ ಬದುಕು ರೂಪಿಸಲು ಕೆಲವೊಮ್ಮೆ ಟೀಚರ್ ಶೈಕ್ಷಣಿಕ ಸಿಮೋಲ್ಲಂಘನೆ ಮಾಡಿದರ ಪರಿಣಾಮ ತಮ್ಮ ವಿದ್ಯಾರ್ಥಿಗಳು ತರಗತಿಗಳಾಚೆ ಜೀವನದ ಪಾಠ ಕಲಿಸಿದ್ದಾರೆ. ಸಂವೇದನಶೀಲಗೊಳ್ಳುವಂತೆ ಮಾಡಿದ್ದಾರೆ ಎಂದರು. 
ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಿಂದ ಖಾಲಿಯಾಗುತ್ತಿವೆ. ನಿವೃತ್ತಯಾಗುತ್ತಿರುವ ಹುದ್ದೆಗಳಿಗೆ ಭರ್ತಿ ಮಾಡುತ್ತಿಲ್ಲ. ಸಂಶೋಧನಾ ವಿದ್ಯಾರ್ಥಿಗಳಿಗೆ ಗೈಡ್‌ಗಳಿಲ್ಲ. ಸರ್ಕಾರ ಅಧ್ಯಾಪಕರನ್ನು ನೇಮಕ ಮಾಡದೇ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ವಂಚಿಸುತ್ತಿದೆ. ಇದು ದೇಶ ಕಟ್ಟುವ ಪ್ರಕ್ರಿಯೆಗೆ ಹಿನ್ನಡೆಯಾಗುತ್ತದೆ ಎಂದು ಎಚ್ಚರಿಸಿದರು. 
ಎಐ, ಗೂಗಲ್ ಮಾಡಲಾಗದ ಕೆಲಸವನ್ನು ನಮ್ಮ ಗುರು ಪರಂಪರೆ ಮಾಡಿದೆ. ಅವರದು ಸಾರ್ಥಕವಾದ ವೃತ್ತಿ. ಸಂವೇದನೆ ಕಲಿಸುವ ಸವಾಲನ್ನು ಎತ್ತಿಕೊಳ್ಳಬೇಕು. ಅದೇ ನಾವು ಗುರುಗಳಿಗೆ ಕೊಡುವ ಗೌರವವಾಗಿದೆ ಎಂದು ತಿಳಿಸಿದರು. 
ಸಂಸ್ಕೃತಿ ಚಿಂತಕ ಶಂಕರ್ ದೇವನೂರು ಸಮಾರಂಭ ಉದ್ಘಾಟಿಸಿ ಮಾತನಾಡಿ,  ಗುರುಗಳಾದ ಪ್ರೊ.ಮಲೆಯೂರು ಗುರುಸ್ವಾಮಿ ಅವರು ಸಾಹಿತ್ಯ ವಲಯದಲ್ಲಿ ಗಗನಕ್ಕೆ ಏರಿದ ನಕ್ಷತ್ರ. ಮುಗ್ಧತೆ, ಸರಳತೆ, ಸೌಜನ್ಯದ ಮಗುವಾಗಿದ್ದರು. ವಚನ ಸಾಹಿತ್ಯದ ಬಗ್ಗೆ ಹೆಚ್ಚು ಪ್ರೀತಿ ಹುಟ್ಟಿಸಿದರು. ಅವರ ಕೃತಿಗಳನ್ನು ಓದುವುದೇ ಗೌರವ ಎಂದು ಹೇಳಿದರು. 
ಭಾರತ ಒಂದು ಕಂಬದ ಮೇಲೆ ನಿಲ್ಲದೆ ಸಾವಿರ ಕಂಬಗಳ ಮೇಲೆ ನಿಂತಿದೆ ಎಂಬ ದಾರ್ಶನಿಕರ ಮಾತುಗಳನ್ನು ಆಲಿಸಬೇಕು. ನಮ್ಮ ಅಂತರಅಗದ ಬೆಳಕು ಜಗದ ಕುಲಮೆಯನ್ನು ಸುಂದರ ಹೂವಿನ ತೋಟಗಳನ್ನು ನಿರ್ಮಿಸುತ್ತದೆ ಎಂದು ತಿಳಿಸಿದರು. 
ಮನುಷ್ಯರಾಗಲು ಬೇಕಿರುವುದು ಬಹುತ್ವ. ಬಹುತ್ವ ಪ್ರಜಾಪ್ರಭುತ್ವದ ಸೌಂದರ್ಯ. ಬಹುತ್ವ ಹೃದಯ ಭಾರತ. ಆನಂದಕ್ಕಾಗಿ ಬಂದವರು ದುಃಖಕ್ಕೆ ಯಾಕೇ ಒಳಗಾಗುತ್ತೇವೆ. ಯಾವುದೂ ಅಸ್ತಿತ್ವ ಇಲ್ಲ ಎಂದು ಹೇಳಿದರು. 
ಜಾನಪದ ವಿದ್ವಾಂಸ ಪ್ರೊ.ಪಿ.ಕೆ.ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಗೌರವಾಧ್ಯಕ್ಷೆ  ಕೆ.ಎಸ್.ಜಯಂತಿ, ಸೋಮಶೇಖರ ಬಿಸಲ್ವಾಡಿ ಇತರರು ಇದ್ದರು.