ಪಲ್ಸ್ ಪೋಲಿಯೋ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಪೂರ್ವಸಿದ್ಧತಾ ಪರಿಶೀಲನಾ ಸಭೆಯಲ್ಲಿ ಜಿ.ಲಕ್ಷ್ಮೀಕಾಂತರೆಡ್ಡಿ ಅವರು ಭಿತ್ತಿಪತ್ರ ಅನಾವರಣಗೊಳಿಸಿದರು. ಮಲ್ಲಿಕಾರ್ಜುನ ಬಾಲದಂಡಿ, ಡಾ.ಪಿ.ಸಿ. ಕುಮಾರಸ್ವಾಮಿ, ಡಾ.ಸಿರಾಜ್ ಅಹಮದ್, ಡಾ.ನಾಗರಾಜ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
- ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಪಲ್ಸ್ ಪೋಲಿಯೋ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸುವಂತೆ ಪಾಲಕರಿಗೆ ಮನವರಿಕೆ ಮಾಡಿಕೊಡಬೇಕು
- ಅಭಿಯಾನದ ಸಮರ್ಪಕ ಅನುಷ್ಠಾನಕ್ಕಾಗಿ ವಿವಿಧ ಇಲಾಖೆಗಳಿಗೆ ಜವಾಬ್ದಾರಿ ನಿರ್ವಹಿಸಬೇಕು
ಮೈಸೂರು:ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಅಭಿಯಾನವನ್ನು ಶೇಕಡ ನೂರರಷ್ಟು ಯಶಸ್ವಿಗೊಳಿಸಲು ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದಿಂದ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪಲ್ಸ್ ಪೋಲಿಯೋ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಪೂರ್ವಸಿದ್ಧತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೂ.28ರಂದು ಲಸಿಕಾ ಬೂತ್‌ಗಳಲ್ಲಿ ಲಸಿಕೆ ಹಾಕಲಾಗುವುದು. ಜೂ. 29 ರಿಂದ ಜು.1ರವರೆಗೆ ಅಂಗನವಾಡಿ, ಆರೋಗ್ಯ ಹಾಗೂ ಆಶಾ ಕಾರ್ಯಕರ್ತರು ಮನೆ, ಮನೆಗೆ ಭೇಟಿ ನೀಡಿ, 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
2026ನೇ ಸಾಲಿನ ರಾಷ್ಟ್ರೀಯ ಲಸಿಕಾ ದಿನದ ಅಂಗವಾಗಿ ಮೈಸೂರು ಜಿಲ್ಲೆಯಲ್ಲಿ ಐದು ವರ್ಷದೊಳಗಿನ ಒಟ್ಟು 2,19,521 ಮಕ್ಕಳಿಗೆ ಲಸಿಕೆ ನೀಡುವ ಮಹತ್ತರ ಗುರಿ ಹೊಂದಲಾಗಿದೆ. ಜಿಲ್ಲೆಯ ಒಟ್ಟು 7,78,059 ಮನೆಗಳನ್ನು ತಲುಪಲು ಆರೋಗ್ಯ ಇಲಾಖೆ ಸಜ್ಜಾಗಿದೆ ಎಂದರು.
ಈ ರಾಷ್ಟ್ರೀಯ ಅಭಿಯಾನದಲ್ಲಿ ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಪಲ್ಸ್ ಪೋಲಿಯೋ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸುವಂತೆ ಪಾಲಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
‘ಪ್ರತಿ ಹನಿ ಅವಶ್ಯ, ಪ್ರತಿ ಮಗು ಅಮೂಲ್ಯ’ ಎಂಬ ಧ್ಯೇಯದೊಂದಿಗೆ ಹೆಚ್ಚಿನ ಅಪಾಯದ ಪ್ರದೇಶಗಳು ಹಾಗೂ ಸಂಚಾರ ಕೇಂದ್ರಗಳಲ್ಲಿ 4 ದಿನಗಳ ವಿಶೇಷ ಅಭಿಯಾನ ಆಯೋಜಿಸಲಾಗಿದೆ. ಪೋಲಿಯೋ ಮುಕ್ತ ಸಮಾಜವನ್ನು ಉಳಿಸಿಕೊಳ್ಳಲು ಯಾವುದೇ ಒಂದು ಮಗುವೂ ಸಹ ಲಸಿಕೆಯಿಂದ ವಂಚಿತವಾಗಬಾರದು. ಅಭಿಯಾನದ ಸಮರ್ಪಕ ಅನುಷ್ಠಾನಕ್ಕಾಗಿ ವಿವಿಧ ಇಲಾಖೆಗಳಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿಸಿದರು.
ನಗರಸಭೆ, ಪುರಸಭೆ ಹಾಗೂ ಮುನ್ಸಿಪಲ್ ಇಲಾಖೆ, ನಗರ ಪ್ರದೇಶಗಳಲ್ಲಿ ವಿಶೇಷವಾಗಿ ಮೈಸೂರು ನಗರದಲ್ಲಿ ಲಸಿಕಾ ಪ್ರಮಾಣ ಕುಂಠಿತವಾಗದಂತೆ ತಡೆಯಲು ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸಿ ಕ್ರಿಯಾಯೋಜನೆ ರೂಪಿಸಬೇಕು ಎಂದು ನಿರ್ದೇಶನ ನೀಡಿದರು.
ಪೋಲಿಯೋ ಲಸಿಕೆಯನ್ನು ಸುರಕ್ಷಿತವಾಗಿಡಲು ಹಾಗೂ ಶೀತಲ ಐಸ್ ಪ್ಯಾಕ್‌ಗಳನ್ನು ಕಾಯ್ದುಕೊಳ್ಳಲು ಜೂ. 26 ರಿಂದ ಜು.2ರವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡಲು ಸೆಸ್ಕ್ ಅಗತ್ಯ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ ಮಾತನಾಡಿ, ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ಜಿಲ್ಲಾದ್ಯಂತ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಸಿಬ್ಬಂದಿ ಮತ್ತು ಕೇಂದ್ರಗಳನ್ನು ನಿಯೋಜಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 1,641 ಬೂತ್‌ಗಳಲ್ಲಿ, 1,396 ಎಚ್‌ಆರ್‌ಎ ಸೈಟ್‌ಗಳು. 51 ಮೊಬೈಲ್ ಮತ್ತು ಟ್ರಾನ್ಸಿಟ್ ತಂಡಗಳು. 328 ಮೇಲ್ವಿಚಾರಕರು, 6,772 ಲಸಿಕೆ ನೀಡುವ ಸಿಬ್ಬಂದಿ ನಿಯೋಜಿಲಾಗಿದೆ ಎಂದು ತಿಳಿಸಿದರು.
ಜೂ.26 ಮತ್ತು 27 ರಂದು ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಪೋಲಿಯೋ ಜಾಗೃತಿ ಜಾಥಾ ನಡೆಸಿ ಜನರಲ್ಲಿ ಅರಿವು ಮೂಡಿಸಬೇಕು. ಪ್ರತಿ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಯನ್ನು ರಾಯಭಾರಿ ಆಗಿ ಪ್ರೇರೇಪಿಸಬೇಕು. ಜೂ.28 ರಂದು ಬೆ.8 ಗಂಟೆಗೆ ಲಸಿಕಾ ಅಭಿಯಾನಕ್ಕಾಗಿ ಶಾಲಾ ಕೊಠಡಿಗಳನ್ನು ಸಜ್ಜುಗೊಳಿಸಬೇಕು. ಪ್ರೌಢಶಾಲೆ ಮತ್ತು ಕಾಲೇಜುಗಳ ಎನ್‌ಎಸ್‌ಎಸ್, ಎನ್‌ಸಿಸಿ ವಿದ್ಯಾರ್ಥಿಗಳನ್ನು ಸ್ವಯಂಸೇವಕರನ್ನಾಗಿ ನಿಯೋಜಿಸಬೇಕು ಎಂದು ಹೇಳಿದರು.
ತಾಲೂಕು ಮಟ್ಟದಲ್ಲಿ ಇಒ ಅವರ ಅಧ್ಯಕ್ಷತೆಯಲ್ಲಿ ಅನುಷ್ಠಾನ ಸಮಿತಿ ರಚಿಸಬೇಕು. ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕರಪತ್ರಗಳ ವಿತರಣೆ ಹಾಗೂ ಟಾಂ ಟಾಂ ಮೂಲಕ ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು. ಸಾಂಪ್ರದಾಯಿಕವಾಗಿ ತಲುಪಲು ಕಷ್ಟವಾಗುವ ಹಳ್ಳಿಗಳ ಪಟ್ಟಿ ಸಿದ್ಧಪಡಿಸಿ, ಲಸಿಕಾ ಕೇಂದ್ರದ ಸಿಬ್ಬಂದಿಗೆ ಊಟ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪಂಚಾಯಿತಿ ಜನಪ್ರತಿನಿಧಿಗಳು ಉಸ್ತುವಾರಿ ವಹಿಸಿಕೊಳ್ಳಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಲಸಿಕಾ ದಿನದಂದು ಎಲ್ಲ ಅಂಗನವಾಡಿ ಕೇಂದ್ರಗಳನ್ನು ಕಡ್ಡಾಯವಾಗಿ ತೆರೆದು, ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು.
ಸ್ತ್ರೀಶಕ್ತಿ ಸಂಘಗಳು ಹಾಗೂ ಬಾಲ ವಿಕಾಸ ಸಮಿತಿಗಳ ಮೂಲಕ ತಾಯಂದಿರ ಸಭೆ ನಡೆಸಿ ಲಸಿಕೆಯ ಮಹತ್ವ ತಿಳಿಸಬೇಕು. ಸಿಡಿಪಿಒಗಳು ತಾಲೂಕು ಮಟ್ಟದ ಉಸ್ತುವಾರಿ ನೋಡಿಕೊಳ್ಳಲಿದ್ದು, ಅನಾಥಾಶ್ರಮಗಳಲ್ಲಿರುವ ಮಕ್ಕಳಿಗೂ ಲಸಿಕೆ ತಲುಪಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಪಲ್ಸ್ ಪೋಲಿಯೋ ಅನುಷ್ಠಾನ ಅಧಿಕಾರಿ ಡಾ.ಸಿರಾಜ್ ಅಹಮದ್, ಡಾ.ನಾಗರಾಜ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.