ಹುಣಸೂರು ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಕ್ಲಾರಿಯೋನೆಟ್ ವಾದಕ ಪಂಡಿತ್ ನರಸಿಂಹಲು ವಡವಾಟಿ ಮಾತನಾಡಿದರು. ಶ್ರೀ ನಟರಾಜ ಸ್ವಾಮೀಜಿ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಭಾಸ್ಕರ್‌ಭಟ್, ರಮೇಶ್ ಕೋಲಕುಂದ ಇತರರು ಇದ್ದರು.
ಹುಣಸೂರು: ಆಧುನಿಕ ತಂತ್ರಜ್ಞಾನ ಮತ್ತು ಅವಸರದ ಜೀವನ ಶೈಲಿಯ ಈ ಸಂಕೀರ್ಣ ಸಂದರ್ಭದಲ್ಲಿ ನೆಲದ ಪರಂಪರೆ, ಕಲೆ, ಸಂಗೀತದ ಅರಿವನ್ನು ಮಕ್ಕಳಿಗೆ ಮೂಡಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ ಎಂದು ಗಾವಡಗೆರೆ ಶ್ರೀ ಗುರುಲಿಂಗ ಜಂಗಮದೇವರ ಮಠದ ಶ್ರೀನಟರಾಜ ಸ್ವಾಮೀಜಿ ಅಭಿಪ್ರಾಯಪಟ್ಟರು.
ಹುಣಸೂರಿನ ಗಾನಯೋಗಿ ಡಾ.ಪಂಡಿತ್ ಪುಟ್ಟರಾಜ ಗವಾಯಿಗಳ ಸಂಗೀತ ಪಾಠಶಾಲೆ ವತಿಯಿಂದ ಭಾನುವಾರ ನಗರದ ಶ್ರೀರಾಘವೇಂದ್ರ ಮಠದ ಸಭಾಭವನದಲ್ಲಿ ಆಯೋಜಿಸಿದ್ದ ಪಂಡಿತ ಗಾನಯೋಗಿ ಪಂಚಾಕ್ಷರಿ ಗವಾಯಿಗಳ 134ನೇ ಜಯಂತಿ, ಪದ್ಮಭೂಷಣ ಡಾ.ಪಂಡಿತ ಗಾನಯೋಗಿ ಪುಟ್ಟರಾಜ ಗವಾಯಿಗಳ 112ನೇ ಜಯಂತಿ ಹಾಗೂ ಗಾನಯೋಗಿ ಪಂಚಾಕ್ಷರಿ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಆಧುನಿಕತೆಗೆ ಮಾರುಹೋಗಿರುವ ಸಮಾಜ ತನ್ನ ಪರಂಪರೆಯನ್ನು ಸ್ಮರಿಸುವತ್ತ ಗಮನಿಸುತ್ತಿಲ್ಲ. ಭಾರತೀಯ ಕುಟುಂಬ ಜೀವನ, ಧಾರ್ಮಿಕ ಮತ್ತು ಆಧ್ಯಾತ್ಮಿಕ ತತ್ವಗಳು, ಕಲೆ, ಸಾಹಿತ್ಯ, ಸಂಗೀತ ಪರಂಪರೆಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದ್ದು, ಈ ಸಂದರ್ಭದಲ್ಲಿ ಹುಣಸೂರಿನಲ್ಲಿ ಪುಟ್ಟ ಮಕ್ಕಳಿಗೆ ಸಂಗೀತ ಶಾಲೆಯ ಮೂಲಕ ಕಲೆಯ ಹೂರಣ ನೀಡುತ್ತಿರುವುದು ಶ್ಲಾಘನೀಯ ಕಾರ್ಯವೆಂದು ಪ್ರಶಂಸಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಕಲೆ, ಸಂಸ್ಕೃತಿಗಳ ತವರೂರು ನಮ್ಮ ದೇಶವಾಗಿದ್ದು, ಸಂಗೀತ ಶಾಲೆಯ ಈ ಕಾರ್ಯಕ್ಕೆ ತಾವು ಎಂದಿಗೂ ಬೆನ್ನೆಲುಬಾಗಿ ನಿಲ್ಲುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಯಚೂರಿನ ಕ್ಲಾರಿಯೋನೆಟ್ ವಾದಕ ಡಾ.ಪಂಡಿತ್ ನರಸಿಂಹಲು ವಡವಾಟಿ ಅವರಿಗೆ ಗಾಯಯೋಗಿ ಪಂಚಾಕ್ಷರಿ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಅವರು 2 ಗಂಟೆಗಳ ಕಾಲ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಸಂಗೀತಪ್ರಿಯರ ಮನಸೆಳೆಯಿತು. ಸಂಗೀತ ಶಾಲೆಯ ಗುರು ರಮೇಶ್ ಕೋಲಕುಂದ, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಮಾನಸ ನಯನಾ, ಸುನೀತಾ ಹಿರೇಮಠ, ಪಂಚಮಿ ಬಿದನೂರು, ಸಾಗರ್ ಕೆಲ್ಲೂರು, ಬಿ.ಎಂ.ಪ್ರಿಯಾಂಕಾ, ರಾಮಣ್ಣ, ಶಿವಶಂಕರ್, ರಾಮಶೆಟ್ಟಿ, ಚಂದ್ರಶೇಖರ್, ಲೋಕೇಶ್, ವೇಣುಗೋಪಾಲ್, ಪ್ರದೀಪ್, ಹರೀಶ್, ಅರುಣ್, ಜಯಶೀಲ ಹಾಗೂ ಪಾಠಶಾಲೆಯ ಪಾಲಕರು ಹಾಜರಿದ್ದರು.