ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆಯಲ್ಲಿ ಗುಬ್ಬಚ್ಚಿ ಗೂಡು ಪಕ್ಷಿ ಪ್ರಿಯರಿಗೆ ವಿತರಿಸಲಾಯಿತು. ಕೋಕಿಲ ರಮೇಶ್ ಜೈನ್, ಸವಿತಾ ನಾಗಭೂಷಣ್, ಬಿ.ವೈಭವ್ ಇನ್ನಿತರರಿದ್ದರು 
ಮೈಸೂರು

ಗುಬ್ಬಚ್ಚಿಗಳನ್ನು ಉಳಿಸಲು ಸಂಕಲ್ಪ ಮಾಡಿ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಗುಬ್ಬಚ್ಚಿ ಗೂಡು, ಅವುಗಳಿಗೆ ನೀರುಣಿಸುವ ಮಣ್ಣಿನಿಂದ ತಯಾರಿಸಿರುವ ಬಟ್ಟಲು ವಿತರಣಾ ಕಾರ್ಯಕ್ರಮ
ಮೈಸೂರು: ಅಳಿವಿನಂಚಿನಲ್ಲಿರುವ ಗುಬ್ಬಚ್ಚಿಗಳನ್ನು ಉಳಿಸಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ  ಸವಿತಾ ನಾಗಭೂಷಣ್ ಹೇಳಿದರು.
 ವಿಶ್ವ ಗುಬ್ಬಚ್ಚಿ ದಿನದ ಅಂಗವಾಗಿ ಗುಬ್ಬಚ್ಚಿ ಸಂತತಿ ಸಂರಕ್ಷಣೆ ಜಾಗೃತಿ ಮೂಡಿಸಲು ಶುಕ್ರವಾರ ನಗರದ ಬೋಗಾದಿಯಲ್ಲಿರುವ ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಗುಬ್ಬಚ್ಚಿ ಗೂಡು, ಅವುಗಳಿಗೆ ನೀರುಣಿಸುವ ಮಣ್ಣಿನಿಂದ ತಯಾರಿಸಿರುವ ಬಟ್ಟಲು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
 ನಗರ ಪ್ರದೇಶದಿಂದ ಗುಬ್ಬಚ್ಚಿ ಸೇರಿದಂತೆ ಹಲವು ಪಕ್ಷಿಗಳು ಕಾಣೆಯಾಗುತ್ತಿವೆ. ಮತ್ತೆ ನಗರ ಪ್ರದೇಶದಲ್ಲಿ ನೆಲೆಸುವಂತೆ ಅವುಗಳಿಗೆ ಪೂರಕ ವಾತಾವರಣ ಸೃಷ್ಟಿಸಬೇಕಾಗಿದೆ. 
ಈ ಹಿಂದೆ ನಮ್ಮ ಮನೆ, ಬೀದಿಗಳಲ್ಲಿ ಕಂಡು ಬರುತ್ತಿದ್ದ ಗುಬ್ಬಚ್ಚಿಗಳು ನಗರೀಕರಣದ ಪರಿಣಾಮವಾಗಿ ನಿಧಾನವಾಗಿ ಕಣ್ಮರೆಯಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು. ಗುಬ್ಬಚ್ಚಿ ಸಂತತಿ ಬಗ್ಗೆ ನಾಗರಿಕರನ್ನು ಎಚ್ಚರಗೊಳಿಸುವ ಹಾಗೂ ಗುಬ್ಬಚ್ಚಿಗಳ ಸಂತತಿ ಉಳಿಸಲು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸೀನಿಯರ್ ಪ್ರಾಣಿಕ್ ಹೀಲಿಂಗ್ ಟ್ರೈನರ್ ಬಿ.ವೈಭವ್ ಮಾತನಾಡಿ, ನಮ್ಮ ಬಾಲ್ಯದ ದಿನಗಳಲ್ಲಿ ಗುಬ್ಬಚ್ಚಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡುವ ಅವಕಾಶ ನಮಗೆ ಸಿಕ್ಕಿತ್ತು. ಆದರೆ, ಇಂದಿನ ಮಕ್ಕಳಿಗೆ ಗುಬ್ಬಚ್ಚಿ ನೋಡುವುದಕ್ಕೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಳಿವಿನಂಚಿನಲ್ಲಿರುವ ಗುಬ್ಬಚ್ಚಿಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
ಈ ಹಿಂದೆ ಮನೆಯ ಛಾವಣಿಯಲ್ಲಿ ಗುಬ್ಬಚ್ಚಿಗಳು ಗೂಡು ಮಾಡಿಕೊಂಡು ಸಂತಾನಾಭಿವೃದ್ಧಿ ಮಾಡುತ್ತಿದ್ದವು. ಆದರೆ, ಈಗ ಮನೆಗಳಲ್ಲಿ ಗೂಡು ಕಟ್ಟಿಕೊಳ್ಳಲು ಸ್ಥಳಾವಕಾಶ ಇಲ್ಲದಂತಾಗಿದೆ. ಇದರಿಂದ ಗುಬ್ಬಚ್ಚಿಗಳನ್ನು ಆಕರ್ಷಿಸಲು ಕೃತಕ ಗೂಡುಗಳನ್ನು ಮನೆ ಬಳಿ ಕಟ್ಟಿ, ಅವುಗಳಿಗೆ ಬೇಕಾದ ಆಹಾರ ಪೂರೈಸಿದರೆ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಗುಬ್ಬಚ್ಚಿ ಸಂತತಿ ಸಂರಕ್ಷಿಸಿ ಕೊಡುಗೆ ನೀಡಲು ಸಾಧ್ಯ ಎಂದರು.
ಖಿನ್ನತೆಗೆ ಒಳಗಾದ ಅನೇಕರು ಚಿಕಿತ್ಸೆಗೆಂದು ಬಂದಾಗ ಮನೆಯಲ್ಲಿ ಸಾಕು ಪ್ರಾಣಿಗಳು ಸಾಕಿರುವ ಮಾಹಿತಿ ಕೇಳುತ್ತಿದ್ದೆವು. ಯಾರ ಮನೆಯಲ್ಲಿ ಸಾಕು ಪ್ರಾಣಿಗಳಿಲ್ಲವೋ ಆ ಮನೆಗಳಲ್ಲಿ ಖಿನ್ನತೆಗೆ ಒಳಗಾಗಿರುವವರನ್ನು ಕಾಣಬಹುದು.
ಸಾಕು ಪ್ರಾಣಿಗಳು ಮನೆಯಲ್ಲಿರುವವರೊಂದಿಗೆ ಅನ್ಯೋನ್ಯವಾಗಿರುವುದರಿಂದ ಆ ಮನೆಯಲ್ಲಿ ನಗು, ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ. ಖಿನ್ನತೆಯೆಂಬ ಮನೋರೋಗ ದೂರವಾಗುತ್ತದೆ. 
ಈ ಹಿನ್ನೆಲೆಯಲ್ಲಿ ಜನ ಸಾಕು ಪ್ರಾಣಿಗಳನ್ನು ಸಾಕಿ, ಅವುಗಳೊಂದಿಗೆ ಒಡನಾಟ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು. ಜೈನ್ ಜೀವ್ ದಯಾ ಚಾರಿಟಿ ವತಿಯಿಂದ ಕೋಕಿಲ ರಮೇಶ್ ಜೈನ್ ಇನ್ನಿತರರಿದ್ದರು
ಜೈನ್ ಜೀವ್ ದಯಾ ಚಾರಿಟಿ ವತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಕ್ಷಿ ಪ್ರಿಯರಿಗೆ ಮಣ್ಣಿನಿಂದ ಮಾಡಿರುವ ಗುಬ್ಬಚ್ಚಿ ಗೂಡು, ಪಕ್ಷಿಗಳಿಗೆ ಆಹಾರ ನೀಡಲು ಸ್ಟಾೃಂಡ್ ಮಾದರಿಯ ಕಂಟೇನರ್, ಪಕ್ಷಿಗಳಿಗೆ ನೀರು ಕುಡಿಯಲು ಮಣ್ಣು ಹಾಗೂ ಸಿಮೆಂಟ್‌ನಿಂದ ತಯಾರಿಸಿರುವ ಬಟ್ಟಲನ್ನು ವಿತರಿಸಲಾಯಿತು.