ಯಲಚನಹಳ್ಳಿ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಸಸಿ ನೆಡುವ ಮೂಲಕ ಒಂದು ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಚಾಲನೆ ನೀಡಿದರು. ಡಾ.ವಿಷ್ಣುವರ್ಧನ್, ಉಷಾರಾಣಿ, ಕೆ.ಪರಮೇಶ, ಮೈಸೂರು ಎಸ್.ಲೋಕೇಶ್, ಚಂದ್ರಶೇಖರ್ ಹಂಚಿನಮನೆ ಇನ್ನಿತರರಿದ್ದರು
- ಹೈಕೋರ್ಟ್ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಸಲಹೆ
- ಒಂದು ಲಕ್ಷ ಸಸಿ ನೆಡುವುದಕ್ಕೆ ಚಾಲನೆ
ಮೈಸೂರು: ಮುಂದಿನ ಪೀಳಿಗೆಗೆ ಸುಸ್ಥಿರ ಪರಿಸರ ನೀಡಲು ಸಂರಕ್ಷಣೆಯ ದೃಢ ಸಂಕಲ್ಪ ಮಾಡಬೇಕು. ಇದು ಪ್ರಜೆಗಳ ಸಂವಿಧಾನಬದ್ಧ ಆದ್ಯ ಕರ್ತವ್ಯ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ಮೈಸೂರು ವಕೀಲರ ಸಂಘ, ಹಾರ್ಟ್‌ಫುಲ್‌ನೆಸ್ ಇನ್ಸ್ಟಿಟ್ಯೂಟ್ ಸಹಯೋಗದಲ್ಲಿ ಮೈಸೂರು ತಾಲೂಕಿನ ಯಲಚನಹಳ್ಳಿ ತೋಟಗಾರಿಕೆ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಒಂದು ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಲಾಭಕ್ಕಾಗಿ ಮರಗಳನ್ನು ಕಡಿಯಲು ಆರಂಭಿಸಿದ ದಿನದಿಂದಲೇ ಪರಿಸರ ನಾಶ ಶುರುವಾಯಿತು. ಜತೆಗೆ, ಜಾಗತಿಕ ತಾಪಮಾನವೂ ಏರಿಕೆಯಾಯಿತು. ಪರಿಸರ ಸಂರಕ್ಷಣೆಯ ದೃಢ ಸಂಕಲ್ಪ ಮಾಡಬೇಕು. ನಿತ್ಯ ಗಿಡವೊಂದಕ್ಕೆ ನೀರು ಹಾಕುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಂವಿಧಾನ ಕೊಟ್ಟ ಹಕ್ಕುಗಳ ಬಗ್ಗೆ ಹೆಚ್ಚು ಮಾತಾಡುತ್ತೇವೆ. ನಮ್ಮ ಕರ್ತವ್ಯಗಳನ್ನು ಪಾಲಿಸುವುದಿಲ್ಲ. ಭಾರತದ ಸಂವಿಧಾನದ ಆರ್ಟಿಕಲ್ 51 ಪ್ರಜೆಗಳ ಕರ್ತವ್ಯಗಳಲ್ಲಿ ಪರಿಸರ ಸಂರಕ್ಷಣೆ ಸೇರಿದೆ. ಅದನ್ನು ಪಾಲನೆ ಮಾಡುತ್ತಿದ್ದೇವೆಯೇ? ಇಲ್ಲವೇ ಎಂಬುದನ್ನು ನಮಗೇ ನಾವೇ ಕೇಳಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಪರಿಸರ ಸಂರಕ್ಷಣೆಯ ಬಗ್ಗೆ ಶಾಲಾ ಮಕ್ಕಳಿಗೆ ಅರಿವು ಮೂಡಿಸಬೇಕು. ಶಾಲಾ ಅಂಗಳದಲ್ಲಿ ಪರಿಸರ ಕಾರ್ಯಕ್ರಮ ಸಂಘಟಿಸಬೇಕು. ಹಾರ್ಟ್‌ಫುಲ್‌ನೆಸ್ ಇನ್ಸ್‌ಟಿಟ್ಯೂಟ್ ಈಗಾಗಲೇ ಶಾಲಾ ಮಕ್ಕಳಿಗೆ ಅರಿವು ಮೂಡಿಸುತ್ತಿದೆ. ಅದು ಎಲ್ಲ ಶಾಲೆಗಳಿಗೂ ವಿಸ್ತರಣೆಯಾಗಬೇಕು ಎಂದು ಸಲಹೆ ನೀಡಿದರು.
ಲಕ್ಷ ಸಸಿ ನೆಡುವ ಕಾರ್ಯಕ್ರಮ ಶ್ಲಾಘನೀಯ. ನೆಡುವುದು ಮುಖ್ಯವಲ್ಲ. ಅವುಗಳನ್ನು ತಮ್ಮ ಮಕ್ಕಳಂತೆ ಪಾಲನೆ, ಪೋಷಣೆ ಮಾಡಬೇಕು. ಆಗ ಈ ಕೆಲಸ ಸಾರ್ಥಕವಾಗುತ್ತದೆ ಎಂದರು.
ಪ್ರತಿವರ್ಷ ಒಂದು ಲಕ್ಷ ಸಸಿ ನೆಟ್ಟು, ಅವುಗಳನ್ನು ಮೂರು ವರ್ಷಗಳ ಕಾಲ ಪೋಷಿಸಿ ಬೆಳೆಸಿದರೆ, ಅದು ಪರಿಸರಕ್ಕೆ ನಾವು ನೀಡುವ ದೊಡ್ಡ ಕೊಡುಗೆಯಾಗುತ್ತದೆ ಎಂದು ಹೇಳಿದರು.
ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ್ ಮಾತನಾಡಿ, ಜಾಗತಿಕ ತಾಪಮಾನ ಏರಿಕೆ, ಹವಾಮಾನ ವೈಪರೀತ್ಯದಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಇಳುವರಿ ಕಡಿಮೆಯಾಗಿದೆ. ಅತಿವೃಷ್ಟಿ, ಅನಾವೃಷ್ಟಿಗಳಿಂದ ವಿವಿಧ ತೊಂದರೆಗಳೂ ಎದುರಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಶಕ್ಕೆ ಸ್ವಾತಂತ್ರೃ ಬಂದಾಗ 40 ಕೋಟಿ ಜನರಿದ್ದರು. 50 ಮಿಲಿಯನ್ ಟನ್ ಆಹಾರ ಬೆಳೆಯಲಾಗುತ್ತಿತ್ತು. ಹಸಿರು ಕ್ರಾಂತಿಯ ಪರಿಣಾಮ, ತಾಂತ್ರಿಕತೆ ಅಳವಡಿಕೆಯಿಂದ ಆಹಾರ ಉತ್ಪಾದನೆ ಹೆಚ್ಚಾಗಿದೆ. 150 ಕೋಟಿ ಜನಸಂಖ್ಯೆಗೆ 350 ಮಿಲಿಯನ್ ಟನ್ ಆಹಾರ ಬೆಳೆಯುತ್ತಿದ್ದು, ಆಹಾರವನ್ನು ರಫ್ತು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರಿಸರ ನಾಶದಿಂದ ಸೇವಿಸುವ ಗಾಳಿ, ಕುಡಿಯುವ ನೀರು, ಆಹಾರ ಎಲ್ಲವೂ ವಿಷಮಯವಾಗಿದೆ. ಕೃಷಿಯಲ್ಲಿ ವಿಪರೀತ ರಾಸಾಯನಿಕ ಬಳಕೆಯಿಂದ ಭೂಮಿ ಬರಡಾಗಿದೆ. ಕೀಟ ಹತೋಟಿಯೇ ದೊಡ್ಡ ಸಮಸ್ಯೆಯಾಗಿದ್ದು, ಮುಂದಿನ ತಲೆಮಾರಿಗಾಗಿ ಪರಿಸರ ಸಂರಕ್ಷಿಸಬೇಕಾದ ಸವಾಲು ನಮ್ಮ ಎದುರಿಗಿದೆ ಎಂದು ತಿಳಿಸಿದರು.
ಹಾರ್ಟ್‌ಫುಲ್‌ನೆಸ್ ರೀಜನಲ್ ಫೆಸಿಲಿಟೆಟರ್ ಕೆ.ಮಧುಸೂದನ್ ಮಾತನಾಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ 1 ಲಕ್ಷ ಗಿಡ ನೆಡುವ ಕಾರ್ಯಕ್ಕೆ ಚಾಲನೆ ದೊರೆತಿದೆ. ತೋಟಗಾರಿಕೆ ವಿದ್ಯಾಲಯದ ಆವರಣದಲ್ಲಿ 10 ಸಾವಿರ, ಮೈಸೂರಿನ ವಿವಿಧ ಭಾಗಗಳಲ್ಲಿ ಮುಂದಿನ 3ರಿಂದ 6 ತಿಂಗಳ ಒಳಗಡೆ 90 ಸಾವಿರ ಸಸಿ ನೆಡುವ ಗುರಿ ಹೊಂದಿದ್ದು, ನೆಟ್ಟ ಬಳಿಕ 3 ವರ್ಷಗಳ ಕಾಲ ಸಸಿಗಳನ್ನು ಪೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಉಷಾರಾಣಿ, ಡಿಸಿಎಫ್ ಕೆ.ಪರಮೇಶ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್, ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಚಂದ್ರಶೇಖರ್ ಹಂಚಿನಮನೆ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ ಅಂಗಡಿ ಇನ್ನಿತರರಿದ್ದರು.