ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮದಲ್ಲಿ ಜೆಡಿಎಸ್ ಪಕ್ಷದಿಂದ ಆಯೋಜಿಸಿದ್ದ ಪಂಚಾಯಿತಿ ಮಟ್ಟದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಕೆ.ಮಹದೇವ್ ಮಾತನಾಡಿದರು. ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ನವೀನ್ ಆಲನಹಳ್ಳಿ ಇತರರು ಇದ್ದರು. 
ಮೈಸೂರು

ಜೆಡಿಎಸ್ ಭದ್ರಕೋಟೆ ಗರಿಮೆ ಉಳಿಸಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • JDS stronghold
ಬೆಟ್ಟದಪುರ: ಕಣಗಾಲು ಸೇರಿದಂತೆ ಈ ಭಾಗದ ಹೊಳೆ ಅಂಚಿನ ಗ್ರಾಮಗಳು ಜೆಡಿಎಸ್ ಪಕ್ಷದ ಭದ್ರಕೋಟೆ ಎಂದೇ ಪ್ರಸಿದ್ಧವಾಗಿದ್ದು, ಇದನ್ನು ಉಳಿಸಿ, ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಾಗಿದೆ ಎಂದು ಮಾಜಿ ಶಾಸಕ ಕೆ.ಮಹದೇವ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮದಲ್ಲಿ ಜೆಡಿಎಸ್ ಪಕ್ಷದಿಂದ ಶನಿವಾರ ಆಯೋಜಿಸಿದ್ದ ಪಂಚಾಯಿತಿ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ತಾಲೂಕಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಕರೊನಾ, ಅತಿವೃಷ್ಟಿ ಸೇರಿದಂತೆ ಹಲವು ಸಮಸ್ಯೆಗಳ ನಡುವೆಯೂ ಸಿಕ್ಕಂತಹ ಅವಕಾಶದಲ್ಲಿ ಸರ್ಕಾರದಿಂದ ಅನುದಾನ ತಂದು ಪ್ರತಿ ಹಳ್ಳಿಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದೆ. ನಾನು ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಮತದಾರರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಗ್ರಾಮದಲ್ಲಿ ಯಾವುದೇ ಗೊಂದಲ, ಒಳಜಗಳ ಇಟ್ಟುಕೊಳ್ಳದೆ ಎಲ್ಲರೂ ಒಗ್ಗಟ್ಟಾಗಿ ಮುಂಬರುವ ಚುನಾವಣೆಗಳ ಗೆಲುವಿಗೆ ಕೆಲಸ ಮಾಡಬೇಕು ಎಂದರು.
ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ ಮಾತನಾಡಿ, ಶೀಘ್ರದಲ್ಲಿಯೇ ಪಂಚಾಯಿತಿ ಚುನಾವಣೆಗಳು ಬರುತ್ತಿದ್ದು, ಈ ಬಗ್ಗೆ ಕಾರ್ಯಕರ್ತರು ವಿಶೇಷ ಕಾಳಜಿ ವಹಿಸಬೇಕು. ನಮ್ಮ ಪಕ್ಷದ ಗೆಲುವಿಗೆ ಪ್ರತಿಯೊಬ್ಬರೂ ಒಗ್ಗಟ್ಟಾಗಿರಬೇಕು. ರಾಜ್ಯ ಸರ್ಕಾರದ ಆಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಹಿಂದೆ ನಮ್ಮ ಅಧಿಕಾರ ಅವಧಿಯಲ್ಲಿ ಮಾಡಿದಂತಹ ಕೆಲಸಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಚುನಾವಣೆ ಹಿತದೃಷ್ಟಿಯಿಂದ ಬೂತ್ ಮಟ್ಟದ ಅಧ್ಯಕ್ಷ ಹಾಗೂ ಗ್ರಾಮ ಮಟ್ಟದ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ, ಎಲ್ಲರೂ ಒಮ್ಮತದಿಂದ ಮುನ್ನಡೆಯಬೇಕು ಎಂದರು.
ಯುವ ಘಟಕದ ಅಧ್ಯಕ್ಷ ನವೀನ್ ಆಲನಹಳ್ಳಿ, ಮುಖಂಡರಾದ ನಾಗಯ್ಯ, ಕೆ.ಮಹದೇವ್, ಪ್ರಸನ್ನ, ಚಂದ್ರಕುಮಾರ್, ಪುಟ್ಟರಾಜೇಗೌಡ, ಜಗದೀಶ್ ಸೇರಿದಂತೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಇದ್ದರು.