ಬೆಂಗಳೂರಿನಲ್ಲಿ ಕಳುವಾಗಿದ್ದ 12 ಲಕ್ಷ ರೂ. ಮೌಲ್ಯದ ಮಹೀಂದ್ರ ಥಾರ್ ವಾಹನವನ್ನು ಮೈಸೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 
ಮೈಸೂರು

ಬೆಂಗಳೂರಿನಲ್ಲಿ ಕಳುವಾಗಿದ್ದ ಮಹೀಂದ್ರ ಥಾರ್ ಮೈಸೂರಿನಲ್ಲಿ ಸಿಸಿಬಿ ವಶಕ್ಕೆ

ಮೈಸೂರು: ಕಳವು ಮಾಡಿದ ವಾಹನ ಬಳಕೆ ಮಾಡಿಕೊಂಡು ನಗರದ ವಿವಿಧೆಡೆ ಕಳ್ಳತನ ಮಾಡಿದ ಆರೋಪಿಯನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಹೆಬ್ಬಾಣಿ ಗ್ರಾಮದ ಅರುಣ್ ಕುಮಾರ್ ಬಂಧಿತ ಆರೋಪಿ. ಈತ ಮಹೀಂದ್ರ ಥಾರ್ ವಾಹನ ಕಳವು ಮಾಡಿ ಆ ವಾಹನ ಉಪಯೋಗಿಸಿಕೊಂಡು ನಗರದ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಗೌಡ್ರು ಪೆಟ್ ಮೆಡಿಕಲ್ ಸ್ಟೋರ್‌ನಲ್ಲಿ 1,80,000 ರೂ. ನಗದು ಹಾಗೂ 60 ಗ್ರಾಂ ಚಿನ್ನ, 36 ಗ್ರಾಂ ಬೆಳ್ಳಿಯ ನಾಣ್ಯಗಳು ಸೇರಿ ಒಟ್ಟು 9,00,0000 ರೂ. ಮೌಲ್ಯದ ಸ್ವತ್ತು ಕಳವು ಮಾಡಿದ್ದ.
ಆರೋಪಿಯನ್ನು ಬಂಧಿಸಿ 12 ಲಕ್ಷ ರೂ. ಮೌಲ್ಯದ ಮಹಿಂದ್ರ ಥಾರ್ ವಾಹನ ಹಾಗೂ 1,500 ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ. ಈತ ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹೇಂದ್ರ ಥಾರ್ ವಾಹನ ಕಳವು ಮಾಡಿದ್ದ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಸಿಬಿಯ ಪೊಲೀಸ್ ಇನ್ಸ್‌ಪೆಕ್ಟರ್ ನಾರಾಯಣಸ್ವಾಮಿ, ಪಿಎಸ್‌ಐ ಅನಿಲ್ ಕುಮಾರ್, ಎಎಸ್‌ಐ ಸುರೇಶ್, ಸಿಬ್ಬಂದಿ ಜಗದೀಶ್, ಟಿ.ಪ್ರಕಾಶ್, ಜಯರಾಮ್, ರಾಘವೇಂದ್ರ ಪಾಲ್ಗೊಂಡಿದ್ದರು.