ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಲ್ಲೂಪುರದಿಂದ ಮಡಹಳ್ಳಿ ಗ್ರಾಮದವರೆಗೆ ಪಾದಯಾತ್ರೆ ನಡೆಯಿತು. ಬಿ.ಜೆ.ವಿಜಯ್ ಕುಮಾರ್, ಸ್.ಸಿ.ಬಸವರಾಜು, ಹಾಡ್ಯ ರಂಗಸ್ವಾಮಿ, ಇಂಧನ್ ಬಾಬು, ಎಂ.ಸಿ.ಹುಂಡಿ ಶಿವಪ್ರಸಾದ್, ಕೆಂಪಣ್ಣ, ಹೊಸಕೋಟೆ ಬಸವರಾಜು, ರಮೇಶ್ ಇತರರಿದ್ದರು. 
ಮೈಸೂರು

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಮರು ಜಾರಿಯಾಗಲಿ

ಪ್ರಮುಖ ಮುಖ್ಯಾಂಶಗಳು

  • ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ
  • ಬಿ-ಜಿ ರಾಮ್ ಜಿ ಯೋಜನೆ ಜಾರಿಗೆ
ಸುತ್ತೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ರದ್ದುಗೊಳಿಸಿ ವಿಬಿ-ಜಿ ರಾಮ್ ಜಿ ಯೋಜನೆ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಮಲ್ಲೂಪುರದಿಂದ ಮಡಹಳ್ಳಿ ಗ್ರಾಮದವರೆಗೆ ಪಾದಯಾತ್ರೆ ನಡೆಸಲಾಯಿತು.
ಹಿಂದಿನಿಂದಲೂ ನರೇಗಾ ಯೋಜನೆ ಜಾರಿಯಲ್ಲಿದ್ದು, ಬಡ ಕೂಲಿ ಕಾರ್ಮಿಕ ವರ್ಗಕ್ಕೆ ಈ ಯೋಜನೆ ಅನುಕೂಲಕರವಾಗಿದೆ. ಇಂತಹ ಸಂದರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯನ್ನು ರದ್ದುಗೊಳಿಸಿ ವಿಬಿ-ಜಿ ರಾಮ್ ಜಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಗ್ರಾಮೀಣ ಬಡ ಕಾರ್ಮಿಕರಿಗೆ ಅನ್ಯಾಯ ಎಸಗುತ್ತಿದೆ. ಕೂಡಲೇ ಹೊಸ ಯೋಜನೆಯನ್ನು ಕೈ ಬಿಟ್ಟು ಹಿಂದಿನ ನರೇಗಾ ಯೋಜನೆಯನ್ನು ಜಾರಿಗೆ ತರಬೇಕು. ಅಲ್ಲದೆ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಯತೀಂದ್ರ ಎಚ್ಚರಿಸಿದರು.
ಕಾಂಗ್ರೆಸ್‌ನ ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್ ಮಾತನಾಡಿ, ಗಾಂಧೀಜಿ ಅವರ ಹೆಸರಿನಲ್ಲಿರುವ ಈ ಯೋಜನೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ ಹೊಸ ಯೋಜನೆಯನ್ನು ಜಾರಿಗೆ ತರುತ್ತಿರುವುದನ್ನು ವಿರೋಧಿಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿಯನ್ನು ಸಲ್ಲಿಸುವುದರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ 14 ಗಂಟೆ ಅಹೋರಾತ್ರಿ ಪ್ರತಿಭಟನೆ ನಡೆಸಲಾಗಿತ್ತು. ಅಲ್ಲದೆ ಈಗ ಕಾಂಗ್ರೆಸ್ ವತಿಯಿಂದ ಫೆ.21 ರವರೆಗೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪಾದಯಾತ್ರೆ ಮಾಡಲಾಗುವುದು ಎಂದು ತಿಳಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಶ್ರೀಕಂಠೇಶ್ವರ ಧರ್ಮದರ್ಶಿ ಮಂಡಳಿ ಮಾಜಿ ಅಧ್ಯಕ್ಷ ಇಂಧನ್ ಬಾಬು, ಪಕ್ಷದ ಮುಖಂಡರಾದ ಎಂ.ಸಿ.ಹುಂಡಿ ಶಿವಪ್ರಸಾದ್, ಕೆಂಪಣ್ಣ, ಹೊಸಕೋಟೆ ಬಸವರಾಜು, ರಮೇಶ್, ತಗಡೂರು ಶಿವರಾಂ, ಬಾಲು, ಮಲ್ಲೂಪುರ ಪ್ರಕಾಶ್, ಶಿವನಾಗ, ಹದಿನಾರು ಸಿದ್ದರಾಜನಾಯಕ, ನಗರ್ಲೆ ನಾರಾಯಣನಾಯಕ, ಭದ್ರನಾಯಕ, ಮನು, ನರಸಿಂಹಮೂರ್ತಿ, ಇಸ್ಮಾಯಿಲ್, ಬಿಳಿಗೆರೆ ರವಿ, ಸಿದ್ದೇಗೌಡ, ಜಯಶೀಲ, ಬಿಳುಗಲಿ ರವಿ, ನಾಗರಾಜು, ಆಲತ್ತೂರು ಮಹೇಶ್, ಹೆಜ್ಜಿಗೆ ಪುಟ್ಟಣ್ಣ, ತಗಡೂರು ಬಸವೇಗೌಡ, ಮಾದಶೆಟ್ಟಿ, ಹುಚ್ಚೇಗೌಡ ಇತರರಿದ್ದರು.