ಶಾಸಕ ಕೆ.ಹರೀಶ್‌ಗೌಡ-ಮಾಜಿ ಶಾಸಕ ಎಲ್.ನಾಗೇಂದ್ರ ನಡುವೆ ವಾಕ್ಸಮರ
- ಶಾಸಕ ಕೆ.ಹರೀಶ್‌ಗೌಡ-ಮಾಜಿ ಶಾಸಕ ಎಲ್.ನಾಗೇಂದ್ರ ನಡುವೆ ವಾಕ್ಸಮರ
- ಬಿಗುವಿನ ವಾತಾವರಣ
ನೀಟ್ ಪರೀಕ್ಷೆಯ ಜಾಗೃತಿ ಹಾಗೂ ಮಾನಸಿಕ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಸಂತಾಪ ಸೂಚಿಸಲು ನಗರದ ನಾರಾಯಣಶಾಸ್ತ್ರಿ ರಸ್ತೆಯ ಮಹಾರಾಣಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರ, ಗಲಾಟೆಗೆ ವೇದಿಕೆಯಾಯಿತು.
ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ತೀವ್ರ ವಾಗ್ವಾದ, ಜಟಾಪಟಿ ಮತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಸರ್ಕಾರಿ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳನ್ನು ಬಲವಂತವಾಗಿ ಪ್ರತಿಭಟನೆಗೆ ಕರೆತರಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಕಾಲೇಜಿಗೆ ದೌಡಾಯಿಸಿದರು. ಇದೇ ವೇಳೆ ಕಾಂಗ್ರೆಸ್ ಶಾಸಕ ಕೆ.ಹರೀಶ್‌ಗೌಡ ಕೂಡ ಕಾಲೇಜಿಗೆ ಭೇಟಿ ನೀಡಿದ್ದರಿಂದ ಎರಡೂ ಪಕ್ಷಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲಕಾಲ ಕಾಲೇಜು ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಎಲ್‌ಇಡಿಯಲ್ಲಿ ರಾಹುಲ್ ಗಾಂಧಿ ಭಾವಚಿತ್ರ!
ಕಾಂಗ್ರೆಸ್ ವತಿಯಿಂದ ಕಾಲೇಜಿನ ಆವರಣದಲ್ಲಿ ನೀಟ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮೃತ ವಿದ್ಯಾರ್ಥಿಗಳ ಭಾವಚಿತ್ರಗಳ ಜತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಫೋಟೋವನ್ನು ಎಲ್‌ಇಡಿ ಪರದೆಯ ಮೇಲೆ ಪ್ರದರ್ಶಿಸಲಾಗಿತ್ತು. ಈ ವೇಳೆ ಸ್ಥಳಕ್ಕೆ ಬಂದ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಹಾಗೂ ಅವರ ಬೆಂಬಲಿಗರು, ಕಾಲೇಜು ಆವರಣದಲ್ಲಿ ಮೃತ ವಿದ್ಯಾರ್ಥಿಗಳ ಬ್ಯಾನರ್ ಹಾಗೂ ರಾಹುಲ್ ಗಾಂಧಿ ಭಾವಚಿತ್ರ ಅಳವಡಿಕೆಗೆ ಆಕ್ಷೇಪ ವ್ಯಕ್ತಪಡಿಸಿ, ಪವಿತ್ರವಾದ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳನ್ನು ರಾಜಕೀಯವಾಗಿ ಪ್ರಚೋದಿಸಲು ಕಾಂಗ್ರೆಸ್ ಯತ್ನಿಸುತ್ತಿದೆ. ವಿದ್ಯಾರ್ಥಿಗಳನ್ನು ಬಲವಂತವಾಗಿ ಕರೆತರಲಾಗುತ್ತಿದೆ ಎಂದು ಕಿಡಿಕಾರಿದರು.
ಆತ್ಮಹತ್ಯೆಗೆ ಶರಣಾದ ಅಮಾಯಕ ವಿದ್ಯಾರ್ಥಿಗಳ ಶ್ರದ್ಧಾಂಜಲಿಯಲ್ಲಿ ರಾಹುಲ್ ಗಾಂಧಿ ಫೋಟೋ ಹಾಕುವ ಅಗತ್ಯವೇನಿತ್ತು? ಎಂದು ಪ್ರಶ್ನಿಸಿದ ಅವರು, ಸ್ಥಳದಲ್ಲಿದ್ದ ಬ್ಯಾನರ್ ತೆರವುಗೊಳಿಸಿ, ಎಲ್‌ಇಡಿ ಪ್ರದರ್ಶನವನ್ನು ಸ್ಥಗಿತಗೊಳಿಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ ಕೆ.ಹರೀಶ್‌ಗೌಡ ಅವರೊಂದಿಗೆ ಮಾಜಿ ಶಾಸಕ ಎಲ್.ನಾಗೇಂದ್ರ ಮಾತಿನ ಚಕಮಕಿ ನಡೆಸಿದರು. ಶಾಲಾ-ಕಾಲೇಜು ಅಂಗಳದಲ್ಲಿ ಕಾಂಗ್ರೆಸ್ ತನ್ನ ರಾಜಕೀಯ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಿದ್ದಾದರೂ ಹೇಗೆ? ಎಂದು ಹರೀಶ್‌ಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಫೋನ್ ಮೂಲಕ ದೂರು ನೀಡಿ, ಕಾಲೇಜು ಆವರಣದಲ್ಲಿ ರಾಜಕೀಯ ಪ್ರಚೋದಿತ ಕಾರ್ಯಕ್ರಮಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ನೀಡಿದರು.
ಬಳಿಕ ಕಾಲೇಜಿನ ಪ್ರಾಂಶುಪಾಲರ ಕೊಠಡಿಗೆ ತೆರಳಿದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ನೆಲದ ಮೇಲೆ ಕುಳಿತು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‌ನವರಿಗೆ ಶಾಲೆಗಳಲ್ಲಿ ರಾಜಕೀಯ ಮಾಡಲು ಅವಕಾಶ ನೀಡುವುದಾದರೆ, ನಾಳೆಯಿಂದ ನಮಗೂ ಶಾಲಾ ಆವರಣದಲ್ಲಿ ಕಾರ್ಯಕ್ರಮ ಮಾಡಲು ಅವಕಾಶ ಕೊಡಿ ಎಂದು ಆಗ್ರಹಿಸಿದರು.
ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಈ ಘಟನೆಯಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಹರಸಾಹಪಟ್ಟರು. ಈ ವೇಳೆ ಪೊಲೀಸರು ಮಾಜಿ ಶಾಸಕ ಎಲ್.ನಾಗೇಂದ್ರ ನೇತೃತ್ವದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಹೆಬ್ಬಾಳು ಪೊಲೀಸ್ ಠಾಣೆಗೆ ಕರೆದೋಯ್ದು ನಂತರ ಬಿಡುಗಡೆ ಮಾಡಿದರು.