ಮಹಾರಾಜ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು
- 46 ಲಕ್ಷ ರೂ. ಆಸ್ತಿ ಕರ ಬಾಕಿ
- ಇ-ಖಾತಾ ಸಿಗುತ್ತಿಲ್ಲ, ಭೂ ನೋಂದಣಿ ಆಗಿಲ್ಲ
ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಮೈಸೂರಿನ ಪಾರಂಪರಿಕ ಹಿರಿಮೆಗೆ ಸಾಕ್ಷಿಯಾಗಿರುವ, 190 ವರ್ಷ ಚರಿತ್ರೆ ಇರುವ ಮಹಾರಾಜ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಮೇಲೆ ಬರೋಬ್ಬರಿ 46 ಲಕ್ಷ ರೂ. ಆಸ್ತಿ ತೆರಿಗೆ ಭಾರ ಬಾಕಿ ಉಳಿದಿದೆ. ಈ ಕಾರಣಕ್ಕೆ ಇ-ಖಾತಾ ಸಹ ದೊರೆಯುತ್ತಿಲ್ಲ...!
ಜೆಎಲ್‌ಬಿ ರಸ್ತೆಯಲ್ಲಿರುವ ಈ ಸಂಸ್ಥೆಯನ್ನು ಮೈಸೂರಿನ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು 1836ರಲ್ಲಿ ಆಂಗ್ಲ ಶಿಕ್ಷಣವನ್ನು ಪ್ರೋತ್ಸಾಹಿಸಲು ‘ರಾಜಾಸ್ ಫ್ರೀ ಸ್ಕೂಲ್’ ಆಗಿ ಶುರು ಮಾಡಿದರು. 1868ರಲ್ಲಿ ಮಹಾರಾಜರ ನಿಧನದ ನಂತರ ಈ ಶಾಲೆಯನ್ನು ಅಂದಿನ ಮೈಸೂರು ಸರ್ಕಾರಕ್ಕೆ ವಹಿಸಿಕೊಡಲಾಯಿತು.
ಇದು ಮಹಾರಾಜ ಸರ್ಕಾರಿ ಪ್ರೌಢಶಾಲೆಯಾಗಿ ಬದಲಾಯಿತು. ಇದು ಕರ್ನಾಟಕದ ಅತ್ಯಂತ ಹಳೆಯ ಪ್ರೌಢಶಾಲೆಗಳಲ್ಲಿ ಒಂದಾಗಿದೆ. ಇದಕ್ಕೆ ಸುದೀರ್ಘ ಇತಿಹಾಸವೂ ಇದೆ. ಸದ್ಯಕ್ಕೆ ಪ್ರೌಢಶಾಲೆಯಲ್ಲಿ 80 ವಿದ್ಯಾರ್ಥಿಗಳು, ಪದವಿಪೂರ್ವ ಕಾಲೇಜಿನಲ್ಲಿ 2000 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 10 ವರ್ಷ ಗತಿಸಿದರೆ ದ್ವಿಶತಮಾನೋತ್ಸವ ಆಚರಿಸಿಕೊಳ್ಳಲಿದೆ. ಇಂತಹದೊಂದು ಸೌಭಾಗ್ಯ ರಾಜ್ಯದ ಯಾವುದೇ ಶಾಲೆಗೂ ಈವರೆಗೆ ದೊರೆತಿಲ್ಲ.
ಆದರೆ, ಐತಿಹಾಸಿಕ ಹಿನ್ನೆಲೆ ಇರುವ ಶಾಲೆಯ ಮಾಲೀಕತ್ವದ ದೃಢೀಕರಣವೇ ಇನ್ನೂ ಸಿಕ್ಕಿಲ್ಲ. ಶಾಲಾ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು, ಮಂಜೂರಾತಿ ಪತ್ರಗಳೂ ಇಲ್ಲ. ಆದ್ದರಿಂದ ಶಾಲಾ ಆಸ್ತಿ, ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕ್ರಮಬದ್ಧಗೊಳಿಸಲು ಈ ವರೆಗೆ ಸಾಧ್ಯವಾಗಿಲ್ಲ. ಕಂದಾಯ ಇಲಾಖೆಯು ಇನ್ನೂ ಆಸ್ತಿಯ ಭೂ ನೋಂದಣಿ ಮಾಡಿಕೊಡುತ್ತಿಲ್ಲ. ಮೈಸೂರು ಮಹಾನಗರ ಪಾಲಿಕೆಯಿಂದಲೂ ಇ-ಖಾತಾ ಮಾಡಿಕೊಡುತ್ತಿಲ್ಲ. ಹೀಗಾಗಿ, ಈ ಸಮಸ್ಯೆಗೂ ಪರಿಹಾರ ದೊರೆಯುತ್ತಿಲ್ಲ.
ಒಂದು ಕಡೆ ಶಾಲಾ ಕಟ್ಟಡ ಮಾಲೀಕತ್ವದ ಸೂಕ್ತ ದಾಖಲೆ ಪತ್ರಗಳಿಲ್ಲ. ಇನ್ನೊಂದೆಡೆ, ಆಸ್ತಿ ತೆರಿಗೆ ಸಹ ಹೆಚ್ಚಾಗುತ್ತಲೇ ಸಾಗಿದೆ. ಬಡ್ಡಿ, ಚಕ್ರಬಡ್ಡಿ ಸೇರಿದಂತೆ ಈ ಮೊತ್ತ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಈವರೆಗೆ 46,72,116 ರೂಪಾಯಿಷ್ಟು ಆಸ್ತಿ ತೆರಿಗೆ ಬಾಕಿ ಉಳಿದಿದೆ. ಈ ಕಾರಣಕ್ಕೆ ಇ-ಖಾತಾ ಮಾಡಿಕೊಡಲು ಮೈಸೂರು ಮಹಾನಗರ ಪಾಲಿಕೆ ಹಿಂದೇಟು ಹಾಕುತ್ತಿದೆ.
‘ಸುದೀರ್ಘ ಅವಧಿಯಿಂದ ಬಾಕಿ ಇರುವ ಲಕ್ಷಾಂತರ ರೂ. ಆಸ್ತಿ ತೆರಿಗೆ ಪಾವತಿಯನ್ನು ಒಂದೇ ಸಲ ಪಾವತಿ ಮಾಡುವುದು ಕಷ್ಟಕರ. ರಿಯಾಯಿತಿ ಅಥವಾ ಮನ್ನಾ ಮಾಡುವಂತೆ ಕೋರಿಕೊಳ್ಳಲಾಗಿದೆ. ಮೈಸೂರು ಮಹಾನಗರ ಪಾಲಿಕೆ ಯಾವ ಕ್ರಮ ತೆಗೆದುಕೊಳ್ಳುತ್ತದೆಯೋ ಕಾಯ್ದುನೋಡಬೇಕು’ ಎಂದು ಮೈಸೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣ ತಿಳಿಸಿದರು.
ವಿದ್ಯುತ್ ಬಿಲ್ ಸಹ ಬಾಕಿ:
ಆಸ್ತಿ ತೆರಿಗೆಯೊಂದಿಗೆ ವಿದ್ಯುತ್ ಬಿಲ್ ಸಹ ಬಾಕಿ ಉಳಿದಿತ್ತು. ಈ ಕುರಿತು ಸೆಸ್ಕ್ ಮೇಲಿಂದ ಮೇಲೆ ನೋಟಿಸ್ ಕೊಟ್ಟಿತ್ತು. ಆದಾಗ್ಯೂ, ಶಿಕ್ಷಣ ಇಲಾಖೆಯಿಂದ ಈ ಬಿಲ್ ಪಾವತಿಯಾಗಿರಲಿಲ್ಲ. ಈ ನಡುವೆ, ಸರ್ಕಾರಿ ಶಾಲೆಗಳ ವಿದ್ಯುತ್ ಬಿಲ್ ಅನ್ನು ಶಾಶ್ವತವಾಗಿ ಮನ್ನಾ ಮಾಡಲಾಗಿದೆ. ಅದೇ ರೀತಿ ಸಹ ಆಸ್ತಿ ತೆರಿಗೆಯನ್ನೂ ಮನ್ನಾ ಮಾಡುವ ಸಾಧ್ಯತೆ ಇದೆ. ಈ ಕುರಿತು ಸರ್ಕಾರದ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಿದೆ.
ವಿಸಿ ನಿವಾಸವು ಮಹಾರಾಜಗೆ ಸೇರಿದ್ದು:
ರಾಮಸ್ವಾಮಿ ವೃತ್ತಕ್ಕೆ ಹೊಂದಿಕೊಂಡಿರುವ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ನಿವಾಸ ಮತ್ತು ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನ ಇರುವ ಆವರಣದ ಜಾಗವು ಮಹಾರಾಜ ಸರ್ಕಾರಿ ಪ್ರೌಢಶಾಲೆಗೆ ಸೇರಿದ್ದಾಗಿದೆ.
ಆದರೀಗ ಮೈಸೂರು ವಿಶ್ವವಿದ್ಯಾಲಯ ಸ್ವಾಧೀನ ಹಕ್ಕು ಪಡೆದುಕೊಂಡಿದೆ. ಆಸ್ತಿಯ ಮಾಲೀಕತ್ವ ದಾಖಲೆಯಲ್ಲಿ ಮೈಸೂರು ಕುಲಪತಿ ಹೆಸರಿನ ಬದಲಿಗೆ ಮಹಾರಾಜ ಶಾಲೆಯ ಉಪಪ್ರಾಚಾರ್ಯರ ಹೆಸರಿಗೆ ಮಾಡಿಕೊಡಲು ನಗರ ಮಾಪನ ಯೋಜನಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಸಹ ಇನ್ನೂ ಇತ್ಯರ್ಹವಾಗಿಲ್ಲ.
ಬಹುತೇಕ ಕಡೆ ಇದೇ ಸಮಸ್ಯೆ:
ಮಹಾರಾಜ ಸರ್ಕಾರಿ ಶಾಲೆಯಷ್ಟೇ ಅಲ್ಲ, ಬಹುತೇಕ ಸರ್ಕಾರಿ ಶಾಲೆಯ ಭೂಮಾಲೀಕತ್ವದ ಕುರಿತು ಇಂಹತದೊಂದು ಸಮಸ್ಯೆ ತಲೆದೋರಿದೆ.
ಜಿಲ್ಲೆಯಲ್ಲಿ ಶೇ.27.18 ಸರ್ಕಾರಿ ಶಾಲೆಗಳ ಆಸ್ತಿ ಇನ್ನೂ ನೋಂದಣಿಯೇ ಆಗಿಲ್ಲ. ಇವುಗಳ ಜಾಗ ಭೂ ಒಡೆತನವೂ ಖಾತ್ರಿಯಾಗಿಲ್ಲ. ಜಿಲ್ಲೆಯಲ್ಲಿ 906 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, 955 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 233 ಸರ್ಕಾರಿ ಪ್ರೌಢಶಾಲೆಗಳು ಸೇರಿದಂತೆ 2,094 ಸರ್ಕಾರಿ ಶಾಲೆಗಳಿವೆ. ಇದರಲ್ಲಿ 216 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, 271 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 82 ಸರ್ಕಾರಿ ಪ್ರೌಢಶಾಲೆಗಳ ಆಸ್ತಿಗಳ ನೋಂದಣಿ ಇನ್ನೂ ಬಾಕಿ ಉಳಿದಿದೆ. ಇವುಗಳ ಆಸ್ತಿ ಸದ್ಯಕ್ಕೆ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ.
ಮೈಸೂರು ತಾಲೂಕಿನಲ್ಲೇ ಸರ್ಕಾರಿ ಶಾಲೆಗಳ ಆಸ್ತಿ ಬಾಕಿ ಬಹಳಷ್ಟಿದೆ. 29 ಕಿರಿಯ ಪ್ರಾಥಮಿಕ, 61 ಹಿರಿಯ ಪ್ರಾಥಮಿಕ, 15 ಪ್ರೌಢಶಾಲೆಗಳ ಆಸ್ತಿ ನೋಂದಣಿ ಇನ್ನೂ ಸಾಧ್ಯವಾಗಿಲ್ಲ. ನಂತರ ಸ್ಥಾನದಲ್ಲಿರುವ ಹುಣಸೂರು ತಾಲೂಕಿನಲ್ಲಿ 102 ಸರ್ಕಾರಿ ಶಾಲೆಗಳ ಆಸ್ತಿ ನೋಂದಣಿ ಇತ್ಯರ್ಥವಾಗಿಲ್ಲ.
ಮೈಸೂರು ಉತ್ತರ ವಲಯದಲ್ಲಿ 73, ಮೈಸೂರು ದಕ್ಷಿಣ ವಲಯದಲ್ಲಿ 24, ಕೆ.ಆರ್.ನಗರ ತಾಲೂಕಿನಲ್ಲಿ 33, ಎಚ್.ಡಿ.ಕೋಟೆ ತಾಲೂಕಿನಲ್ಲಿ 93, ಪಿರಿಯಾಪಟ್ಟಣ ತಾಲೂಕಿನಲ್ಲಿ 62, ತಿ.ನರಸೀಪುರ ತಾಲೂಕಿನಲ್ಲಿ 42, ನಂಜನಗೂಡು ತಾಲೂಕಿನಲ್ಲಿ 35 ಸರ್ಕಾರಿ ಶಾಲೆಗಳ ಆಸ್ತಿ ಅವುಗಳ ಹೆಸರಿನಲ್ಲಿ ಇಲ್ಲವೇ ಇಲ್ಲ. ಈ ಹಿನ್ನೆಲೆಯಲ್ಲಿ ಕೈಗೊಂಡಿರುವ ‘ಸರ್ಕಾರಿ ಶಾಲೆಗಳ ಆಸ್ತಿ ನೋಂದಣಿ ಅಭಿಯಾನ’ ಮಂದಗತಿಯಲ್ಲಿ ಸಾಗುತ್ತಿದೆ.
ಈಗಲೂ ಹಳೇ ಶಾಲೆಗಳ ಆಸ್ತಿ ವಿಚಾರ ಕ್ಲಿಷ್ಟಕರವಾಗಿದೆ. ಶಾಲೆಗಳಿಗೆ ದಾನ ಕೊಟ್ಟಿರುವ ಕುರಿತು ದಾಖಲಾತಿಗಳಿಲ್ಲ. ವ್ಯವಸ್ಥಿತವಾಗಿ ಉಪನೋಂದಣಿ ಕಚೇರಿಯಲ್ಲಿ ನೋಂದಣಿಯೂ ಆಗಿಲ್ಲ. ಅವುಗಳು ದಾಖಲಾತಿಯ ಅಪ್‌ಡೇಟ್ ಸಹ ಆಗಿಲ್ಲ. ಹೀಗಾಗಿ, ಶಾಲೆಗೆ ಭೂದಾನ ಮಾಡಿರುವ ಕುರಿತು ದಾನ ಕೊಟ್ಟವರ ಬಳಿಯೂ ದಾಖಲೆ ಇಲ್ಲ.
ಇದನ್ನು ಸ್ವೀಕಾರ ಮಾಡಿರುವ ಶಾಲೆ ಅಥವಾ ಶಾಲಾ ಶಿಕ್ಷಣ ಇಲಾಖೆಯ ಬಳಿಯೂ ಸೂಕ್ತ ದಾಖಲಾತಿಯೇ ಇಲ್ಲವಾಗಿದೆ. ಶಾಲೆ ಇರುವ ಜಾಗದ ಕುರಿತು ಬುನಾದಿ, ಮೂಲ ಕಾಗದ ಪತ್ರಗಳೇ ಎಷ್ಟೊಂದು ಶಾಲೆಗಳ ಬಳಿ ಇಲ್ಲವಾಗಿದೆ. ಆದರೆ, ಸದ್ಯಕ್ಕೆ ಶಾಲಾ ಆಸ್ತಿ ಅನುಭೋಗದಲ್ಲೇ ಮಾತ್ರ ಇದೆ. ವಾಸ್ತವವಾಗಿ ಅದು ದಾಖಲಾತಿಯಲ್ಲಿ ಕ್ರಮಬದ್ಧಗೊಳಿಸಿಲ್ಲ. ಹೀಗೆ ಅನೇಕ ಸವಾಲುಗಳು, ಸಮಸ್ಯೆಗಳು ಎದುರಾಗಿವೆ.
ಇ-ಖಾತಾ ಮಾಡಿಕೊಡಲು ಪಾಲಿಕೆಗೆ ಅರ್ಜಿ ಸಲ್ಲಿಸಲಾಗಿದೆ. ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ ಪಡೆದುಕೊಂಡಿರುವ ಆಸ್ತಿಗೆ ಸಂಬಂಧಿಸಿದ ಕೆಲ ದಾಖಲಾತಿಗಳನ್ನೂ ಲಗತ್ತಿಸಲಾಗಿದೆ. ಆದಾಗ್ಯೂ, ಇನ್ನೂ ಸಮಸ್ಯೆ ಬಗೆಹರಿದಿಲ್ಲ.
— ಡಿ.ಮಹೇಶ್, ಉಪ ಪ್ರಾಚಾರ್ಯ, ಮಹಾರಾಜ ಸರ್ಕಾರಿ ಪ್ರೌಢಶಾಲೆ
ಮಹಾರಾಜ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಎಲ್ಲ ಸರ್ಕಾರಿ ಶಾಲೆಗಳ ಆಸ್ತಿಗೆ ಸಂಬಂಧಿಸಿದಂತೆ ಇ-ಖಾತಾ ಮಾಡಿಕೊಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆ ಪ್ರಗತಿಯಲ್ಲಿ ಇದೆ.
— ಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ, ಮೈಸೂರು ದಕ್ಷಿಣ