ಸರಗೂರು ತಾಲೂಕಿನ ನಂಜೀಪುರ ಗ್ರಾಮದಲ್ಲಿ ಮಲೆ ಮಹದೇಶ್ವರ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯಿತು.
ಸರಗೂರು: ತಾಲೂಕಿನ ನಂಜೀಪುರ ಗ್ರಾಮದಲ್ಲಿ ಮಲೆ ಮಹದೇಶ್ವರಸ್ವಾಮಿ ರಥೋತ್ಸವ ಮತ್ತು ಕೊಂಡೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಜಾತ್ರೆ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬಗೆಬಗೆಯ ಹೂವುಗಳಿಂದ ರಥವನ್ನು ಅಲಂಕೃತಗೊಳಿಸಲಾಗಿತ್ತು. ರಥದಲ್ಲಿ ಉತ್ಸವ ಮೂರ್ತಿಯನ್ನು ವಿರಾಜಮಾನವಾಗಿ ಕೂರಿಸಿ ಗ್ರಾಮದ ಬೀದಿಗಳಲ್ಲಿ ಜಾನಪದ ಕಲಾ ತಂಡಗಳಾದ ವೀರಗಾಸೆ ಕುಣಿತ, ನಗಾರಿ, ಮಂಗಳವಾದ್ಯ, ಸತ್ತಿಗೆಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಬೆಳಗ್ಗಿನಿಂದಲೇ ಹೋಮ, ಹವನಗಳು ನಡೆದವು. ದೇವರ ಉತ್ಸವಮೂರ್ತಿಯನ್ನು ನುಗು ನದಿ ದಡಕ್ಕೆ ಕರೆತಂದು ವಿಶೇಷ ಪೂಜೆ ಸಲ್ಲಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನದ ಬಳಿಗೆ ತರಲಾಯಿತು. ನಂತರ ದೇವಸ್ಥಾನದ ಆವರಣದಲ್ಲಿ ಹಾಕಲಾಗಿದ್ದ ಕೊಂಡೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿ, ಭಕ್ತರು ಕೊಂಡ ಹಾಯುವುದರ ಮೂಲಕ ಭಕ್ತಿಯನ್ನು ಮೆರೆದರು. ನಂತರ ದೇವಸ್ಥಾನದ ಬಳಿ ವೃಕ್ಷ ಪೂಜೆ, ಬಸವ ಪೂಜೆ, ಮಾಡಲಾಯಿತು. ಭಕ್ತರು ಶ್ರೀ ಮಲೈ ಮಹದೇಶ್ವರಸ್ವಾಮಿ ರಥ ಎಳೆದು ಹರಕೆ ತೀರಿಸಿದರು. ನಂತರ ಅನ್ನ ಸಂತರ್ಪಣೆ ನಡೆಯಿತು.
ಗ್ರಾಮದ ಗೌಡಿಕೆ ಶಿವಮಲ್ಲಪ್ಪ, ಶಿವರಾಜಪ್ಪ ಪ್ರಭುಸ್ವಾಮಿ, ಗುರುಸ್ವಾಮಿ, ಎನ್.ಪಿ.ನಾಗರಾಜಪ್ಪ, ಎನ್.ಪಿ.ಶಿವಣ್ಣ, ಶಿವಕುಮಾರ್, ಶಿಕ್ಷಕರಾದ ಪರಶಿವಮೂರ್ತಿ ಎನ್.ಪಿ, ಮಹೇಶ್, ಕುಮಾರ, ರವಿ, ಮಂಜುನಾಥ, ಮಹದೇವಪ್ಪ, ಸತೀಶ್, ಭಕ್ತರು ಭಾಗವಹಿಸಿದ್ದರು.